ADVERTISEMENT

ಬೆಂಗಳೂರು | ಭೂ ಉಪಯೋಗ ಬದಲಾವಣೆಗೂ ಶುಲ್ಕ: ನಗರಾಭಿವೃದ್ಧಿ ಇಲಾಖೆ ಅಧಿಸೂಚನೆ

ಸ್ಥಳೀಯ ಯೋಜನಾ ಪ್ರಾಧಿಕಾರಗಳನ್ವಯ ಮಾರ್ಗಸೂಚಿ ದರದಲ್ಲಿ ಪಾವತಿಗೆ ಕರಡು ಅಧಿಸೂಚನೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2025, 23:30 IST
Last Updated 4 ಆಗಸ್ಟ್ 2025, 23:30 IST
<div class="paragraphs"><p>ಬೆಂಗಳೂರು ನಗರ</p></div>

ಬೆಂಗಳೂರು ನಗರ

   

ಬೆಂಗಳೂರು: ರಾಜ್ಯದ ಎಲ್ಲಾ ಸ್ಥಳೀಯ ಯೋಜನಾ ಪ್ರಾಧಿಕಾರಗಳಲ್ಲಿ ಭೂ ಉಪಯೋಗ ಬದಲಾವಣೆಗೆ ಶುಲ್ಕವನ್ನು ನಿಗದಿಪಡಿಸಲು ನಗರಾಭಿವೃದ್ಧಿ ಇಲಾಖೆ ಮುಂದಾಗಿದೆ.

ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ (ಕೆಟಿಸಿಪಿ) ಕಾಯ್ದೆ 1961ರ (ಕರ್ನಾಟಕ ಕಾಯ್ದೆ 11– 1963) ಸೆಕ್ಷನ್‌ 68 (4)ಕ್ಕೆ ತಿದ್ದುಪಡಿ ತಂದು, ‘ಕರ್ನಾಟಕ ಯೋಜನಾ ಪ್ರಾಧಿಕಾರಗಳ (ತಿದ್ದುಪಡಿ) ನಿಯಮಗಳು– 2025’ರ ಅಡಿ ಕರಡು ಪ್ರಕಟಿಸಲಾಗಿದೆ.

ADVERTISEMENT

ಸೆಕ್ಷನ್‌ 17ರಲ್ಲಿ ತಿದ್ದುಪಡಿ ತಂದು, ಏಕ ನಿವೇಶನ, ಬಹು ನಿವೇಶನ, ಬಡಾವಣೆ ಅಭಿವೃದ್ಧಿ ನಕ್ಷೆ ಪಡೆಯಲು ಅಭಿವೃದ್ಧಿ ಶುಲ್ಕ ನಿಗದಿಪಡಿಸಿ 2021ರ ಜೂನ್ 21ರಂದು ಅಂತಿಮ ಆದೇಶ ಹೊರಡಿಸಲಾಗಿತ್ತು. ಭೂ ಉಪಯೋಗ ಬದಲಾವಣೆಗೂ ಅದೇ ಅಭಿವೃದ್ಧಿ ಶುಲ್ಕವನ್ನು ಪಾವತಿಸಲಾಗುತ್ತಿತ್ತು. ಹೀಗಾಗಿ, ಕೆಟಿಸಿಪಿ ಕಾಯ್ದೆಯ ಸೆಕ್ಷನ್‌ 14–ಎ ಮತ್ತು ಸೆಕ್ಷನ್‌ 68(4)ಕ್ಕೆ ತಿದ್ದುಪಡಿ ತಂದು, ಭೂ ಉಪಯೋಗ ಬದಲಾವಣೆಗೆ ಪ್ರತ್ಯೇಕ ಶುಲ್ಕ ನಿಗದಿಪಡಿಸಿ ಕರಡು ಅಧಿಸೂಚನೆ ಹೊರಡಿಸಲಾಗಿದೆ. ಅಭಿವೃದ್ಧಿ ನಕ್ಷೆ ಪಡೆಯಲು ಪಾವತಿಸಬೇಕಿರುವ ಅಭಿವೃದ್ಧಿ ಶುಲ್ಕಕ್ಕಿಂತ ದುಪ್ಪಟ್ಟು ಶುಲ್ಕವನ್ನು ಭೂ ಉಪಯೋಗ ಬದಲಾವಣೆಗೆ ಶುಲ್ಕವಾಗಿ ನಿಗದಿಪಡಿಸಲಾಗಿದೆ. ಸಾರ್ವಜನಿಕರಿಗೆ ಆಕ್ಷೇಪಣೆ ಸಲ್ಲಿಸಲು 30 ದಿನ ಅವಕಾಶ ನೀಡಲಾಗಿದೆ.

ಕೃಷಿಯೇತರ ಜಮೀನಿನಲ್ಲಿ ವಸತಿ, ಕೈಗಾರಿಕೆ, ವಾಣಿಜ್ಯದ ಉದ್ದೇಶಕ್ಕಾಗಿ ಭೂ ಉಪಯೋಗದ ಬದಲಾವಣೆ ಮಾಡಿಕೊಳ್ಳಲು ಶುಲ್ಕ ಪಾವತಿಸಬೇಕಾಗುತ್ತದೆ. ಎಲ್ಲ ಪ್ರಕ್ರಿಯೆ ಮುಗಿದ ಮೇಲೆ, ಏಕ ನಿವೇಶನ, ಬಹು ನಿವೇಶನ, ಬಡಾವಣೆ ಅಭಿವೃದ್ಧಿ ನಕ್ಷೆಗೆ ಅಭಿವೃದ್ಧಿ ಶುಲ್ಕವನ್ನು ಮಾರ್ಗಸೂಚಿ ದರದನ್ವಯ ಪಾವತಿಸಿ ಪ್ರಮಾಣ ಪತ್ರ ಪಡೆದುಕೊಳ್ಳಬೇಕಾಗುತ್ತದೆ ಎಂದು ನಗರ ಯೋಜನೆ ಅಧಿಕಾರಿಗಳು ಮಾಹಿತಿ ನೀಡಿದರು.

ಬೆಂಗಳೂರು ನಗರ, ಬೆಂಗಳೂರು ದಕ್ಷಿಣ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ಜನಸಂಖ್ಯೆಯನ್ನು ಪರಿಗಣಿಸದೆ ‘ಬೆಂಗಳೂರು ಮೆಟ್ರೊಪಾಲಿಟನ್‌ ವಲಯ’ದ ಸ್ಥಳೀಯ ಯೋಜನಾ ಪ್ರಾಧಿಕಾರ ಎಂದು ವರ್ಗೀಕರಿಸಲಾಗಿದೆ. ಉಳಿದ, ಸ್ಥಳೀಯ ಯೋಜನಾ ಪ್ರಾಧಿಕಾರಗಳನ್ನು ಅವುಗಳ ಜನಸಂಖ್ಯೆಕ್ಕೆ ಅನುಗುಣವಾಗಿ ವರ್ಗೀಕರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.