
ಅಪಾರ್ಟ್‌ಮೆಂಟ್ ಫೆಡರೇಷನ್
ಪ್ರಜಾವಾಣಿ ವಾರ್ತೆ
ಬೆಂಗಳೂರು: ‘ಅಪಾರ್ಟ್‌ಮೆಂಟ್ ಮಾಲೀಕರ ಮತ್ತು ಸಂಘಗಳ ಹಿತಾಸಕ್ತಿ ರಕ್ಷಣೆಗೆ ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಮತ್ತು ನಿರ್ವಹಣಾ ಕಾಯ್ದೆ–1972 ಅನ್ನು ನವೀಕರಿಸಿ, ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಬೇಕು’ ಎಂದು ಬೆಂಗಳೂರು ಅಪಾರ್ಟ್‌ಮೆಂಟ್ ಫೆಡರೇಷನ್ (ಬಿಎಎಫ್) ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದೆ.
ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಎಎಫ್ ಅಧ್ಯಕ್ಷ ಸತೀಶ್ ಮಲ್ಯ, ‘ಸಂಘವು 3.50 ಲಕ್ಷಕ್ಕೂ ಹೆಚ್ಚು ಕುಟುಂಬಗಳನ್ನು ಪ್ರತಿನಿಧಿಸುತ್ತಿದೆ. ಈಗಾಗಲೇ ಜಾರಿಯಲ್ಲಿರುವ ಕಾಯ್ದೆಯನ್ನು ನವೀಕರಿಸಿ, ಸಮಗ್ರ ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಮತ್ತು ನಿರ್ವಹಣಾ ಕಾಯ್ದೆಯನ್ನು ಅನುಷ್ಠಾನ ಮಾಡಬೇಕಿದೆ. ಈ ಮೂಲಕ ಆಸ್ತಿ ಹಕ್ಕುಗಳ ವರ್ಗಾವಣೆ ಮತ್ತು ಮಾಲೀಕತ್ವದ ಬಗ್ಗೆ ಸ್ಪಷ್ಟತೆ ಒದಗಿಸಬೇಕು’ ಎಂದು ಹೇಳಿದರು.
‘ಹೊಸ ಕಾಯ್ದೆಯಲ್ಲಿ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ರಚನೆ, ನೋಂದಣಿ, ಉಪ ಕಾನೂನುಗಳನ್ನು ಜಾರಿಗೊಳಿಸುವ ಸಾಮರ್ಥ್ಯ, ವಿವಾದ ಇತ್ಯರ್ಥಕ್ಕೆ ಸ್ಪಷ್ಟ ಯಾಂತ್ರಿಕ ವ್ಯವಸ್ಥೆ ಮತ್ತು ಸೂಕ್ತ ಪ್ರಾಧಿಕಾರದ ವ್ಯಾಖ್ಯಾನ, ಹಳೆಯ ಕಟ್ಟಡಗಳ ಪುನರಾಭಿವೃದ್ಧಿ ಮತ್ತು ವಿಲೀನದಂತಹ ಅವಕಾಶಗಳನ್ನೂ ಸೇರ್ಪಡೆ ಮಾಡಬೇಕು. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಇದು ಹಲವು ವರ್ಷಗಳ ಬೇಡಿಕೆಯಾಗಿದ್ದು, ಕಾನೂನಿನ ಸ್ಪಷ್ಟತೆ ಕೊರತೆಯಿಂದ ಲಕ್ಷಾಂತರ ಜನರು ಸಮಸ್ಯೆ ಎದುರಿಸುತ್ತಿದ್ದಾರೆ’ ಎಂದರು.
ಬಿಎಎಫ್ ಪ್ರಧಾನ ಕಾರ್ಯದರ್ಶಿ ಕೆ. ಅರುಣ್ ಕುಮಾರ್, ‘ಕಾಂಗ್ರೆಸ್ ನೇತೃತ್ವದ ಸರ್ಕಾರ ಈ ಹಿಂದೆ ನೀಡಿದ ಭರವಸೆಯಂತೆ ಕಾಯ್ದೆಯನ್ನು ಜಾರಿಗೆ ತರಬೇಕು. ಆಧುನಿಕ ಅಪಾರ್ಟ್‌ಮೆಂಟ್‌ಗಳ ಅಗತ್ಯಗಳನ್ನು ಪರಿಹರಿಸುವ ಹೊಸ ಕಾಯ್ದೆಯನ್ನು ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಮಂಡಿಸಬೇಕು’ ಎಂದು ಒತ್ತಾಯಿಸಿದರು.
ಸಂಘದ ಖಜಾಂಚಿ ಕಿರಣ್ ಹೆಬ್ಬಾರ್, ‘ರಾಜ್ಯದ ಲಕ್ಷಾಂತರ ಮನೆ ಮಾಲೀಕರಿಗೆ ಸಹಾಯ ಮಾಡುವ ಹೊಸ ಕಾಯ್ದೆಯನ್ನು ಜಾರಿಗೊಳಿಸಿ, ಮಾಲೀಕರಿಗೆ ಹಾಗೂ ನಿವಾಸಿಗಳಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.