
ಬೆಂಗಳೂರು: ರಾಜಧಾನಿ ಬೆಂಗಳೂರಿನ ರಸ್ತೆಗಳ ಅವ್ಯವಸ್ಥೆ, ಗುಂಡಿಗಳು, ಚರಂಡಿಗಳಲ್ಲಿ ಹೂಳು, ಹೊರಬರುವ ನೀರು, ಚರಂಡಿ ಮೇಲಿಲ್ಲದ ಸುರಕ್ಷೆ..
ಈ ದುಃಸ್ಥಿತಿಗಳನ್ನು ಸರಿಪಡಿಸಲು ಜನರು ಎಷ್ಟು ಕೇಳಿದರೂ, ಪ್ರತಿಭಟನೆ ಮಾಡಿದರೂ ದುರಸ್ತಿ ಆಗುವುದಿಲ್ಲ. ಆದರೆ, ಚುನಾವಣೆ ಸಂದರ್ಭದಲ್ಲಿ ನಳನಳಿಸುವಂತೆ ಡಾಂಬರು ಹಾಕಲಾಗುತ್ತದೆ. ಇಂತಹ ವೇಗದ ಕಾಮಗಾರಿ ಸಾಮಾನ್ಯ ದಿನಗಳಲ್ಲಿ ಏಕೆ ನಡೆಯುವುದಿಲ್ಲ ಎಂಬುದು ಜನರ ಪ್ರಶ್ನೆ.
ನಗರದಲ್ಲಿ ಇದು ಪ್ರತಿ ಚುನಾವಣೆ ಸಂದರ್ಭದಲ್ಲೂ ಕಂಡುಬರುವ ಚಿತ್ರಣ. ಈ ಬಗ್ಗೆ ನಾಗರಿಕರಲ್ಲಿ ಸಾಕಷ್ಟು ಆಕ್ಷೇಪವಿದೆ. ಕಳೆದ ಹತ್ತು ವರ್ಷಗಳಲ್ಲಿ ನಗರದಲ್ಲಿರುವ 13 ಸಾವಿರ ಕಿಲೋ ಮೀಟರ್ ರಸ್ತೆ ಹಾಗೂ ಪಾದಚಾರಿ ಮಾರ್ಗ, ಚರಂಡಿ ಹಾಗೂ ವಿವಿಧ ಯೋಜನೆಗಳಿಗೆ ವೆಚ್ಚ ಮಾಡಿರುವುದು ಸುಮಾರು ₹25 ಸಾವಿರ ಕೋಟಿ. ಆದರೆ, ಒಮ್ಮೆ ಮಳೆ ಬಂದ ಕೂಡಲೇ ಗುಂಡಿಗಳಾಗುತ್ತವೆ.
ಮಳೆ ಹಾಗೂ ರಸ್ತೆ ಗುಂಡಿಯಿಂದ ನಗರದಲ್ಲಿ ಕಳೆದ ವರ್ಷ ಜನರು ಸಾಕಷ್ಟು ಸಮಸ್ಯೆ ಎದುರಿಸಿದರು. ಅತಿ ಮಳೆಯಿಂದ ಮನೆಗಳಿಗೆ ನೀರು ನುಗ್ಗಿದರೆ, ರಸ್ತೆಯಲ್ಲಿ ನೀರು ನಿಂತು ಗುಂಡಿ ಸೃಷ್ಟಿಯಾಗಿ ಅಪಘಾತಗಳು ಅತಿಯಾದವು. ಸಾವು–ನೋವುಗಳೂ ಆದವು. ಆ ಸಂದರ್ಭದಲ್ಲಿ ನಾಗರಿಕರು ಬಿಬಿಎಂಪಿಗೆ ರಸ್ತೆ ದುರಸ್ತಿ ಮಾಡಲು ಒತ್ತಾಯಿಸಿದರು. ‘ಮಳೆ ಮುಗಿಯುವವರೆಗೆ ಯಾವುದೇ ಕೆಲಸವಾಗಲ್ಲ’ ಎಂದು ಎಂಜಿನಿಯರ್‌ಗಳು ಸಬೂಬು ಹೇಳಿದರು. ಜನರು ಗುಂಡಿಗಳನ್ನು ತಪ್ಪಿಸಿಕೊಂಡೇ ಸಂಚಾರ ನಡೆಸಿದರು.
‘ರಸ್ತೆ ಹಾಳಾಗಿ ಹೋಗಿದೆ. ಸಂಚಾರ ಸಾಧ್ಯವಿಲ್ಲ. ಅತಿಯಾದ ಗುಂಡಿಗಳಾಗಿವೆ, ದುರಸ್ತಿ ಮಾಡಿ ಎಂದು ಮೂರ್ನಾಲ್ಕು ತಿಂಗಳಿನಿಂದ ಮನವಿ ಮಾಡಿಕೊಂಡೆವು. ಆದರೆ, ಯಾವ ಕೆಲಸವೂ ಆಗಲಿಲ್ಲ. ವಿಧಾನಸಭೆ ಚುನಾವಣೆ ಹತ್ತಿರವಾಯಿತು, ನಾವು ಕೇಳದ ರಸ್ತೆಗೂ ಡಾಂಬರು ಬಂದಿದೆ. ರಾತ್ರಿ ಮಲಗಿದ್ದಾಗ ಹಾಳಾಗಿದ್ದ ರಸ್ತೆ, ಬೆಳಿಗೆ ಎದ್ದು ನೋಡಿದಾಗ ಡಾಂಬರು ಕಂಡಿದೆ. ಇಷ್ಟೊಂದು ವೇಗವಾಗಿ ಕೆಲಸವಾಗುತ್ತದೆ. ಆದರೆ ನಾವು ಕೇಳಿದಾಗ ಏಕೆ ದುರಸ್ತಿ ಮಾಡಲ್ಲ’ ಎಂದು ರಾಜರಾಜೇಶ್ವರಿ ನಗರದ ಶ್ರೀನಿವಾಸ್ ಪ್ರಶ್ನಿಸಿದರು.
‘ನಾಗರಿಕರು ಏನು ಕೇಳಿದರೂ ಬಿಬಿಎಂಪಿ ಹಣ ಇಲ್ಲ ಎಂದು ಹೇಳುತ್ತದೆ. ಆದರೆ, ಚುನಾವಣೆ ಸಂದರ್ಭದಲ್ಲಿ ಮಾತ್ರ ಎಲ್ಲ ರೀತಿಯ ಕಾಮಗಾರಿಗೆ ಹಣವೂ ಇರುತ್ತದೆ, ವೇಗವಾಗಿ ಕೆಲಸವೂ ಆಗುತ್ತದೆ. ಈ ರಸ್ತೆ ಡಾಂಬರು ಚುನಾವಣೆ ಮುಗಿಯುವವರೆಗೆ ಇರಲಿ ಎಂಬುದೇ ನಮ್ಮ ಆಶಯ. ಏಕೆಂದರೆ, ಈಗಾಗಲೇ ಮಳೆ ಆರಂಭವಾಗಿದೆ. ಡಾಂಬರು ಕಂಡ ರಸ್ತೆ ಕಿತ್ತುಹೋಗುತ್ತಿರುವ ಉದಾಹರಣೆಯೂ ಇದೆ. ಇಂತಹ ಕಾಮಗಾರಿ ಬೇಕೇ? ಜನರ ಹಣವನ್ನೇಕೆ ಹೀಗೆ ವ್ಯಯ ಮಾಡುತ್ತೀರಿ’ ಎಂದು ವಿಜಯನಗರದ ಚಂದ್ರಪ್ಪ
ಕೇಳಿದರು.
‘ರಸ್ತೆಯಲ್ಲಿ ನೀರು ನಿಲ್ಲದಂತೆ ಕಾಮಗಾರಿ ನಡೆಸಬೇಕು ಎಂಬ ಕನಿಷ್ಠ ಜ್ಞಾನವೂ ಎಂಜಿನಿಯರ್‌ಗಳಿಗೆ ಇಲ್ಲ. ಮಧ್ಯದಲ್ಲಿ ಎತ್ತರ ಇಲ್ಲ, ರಸ್ತೆಯಲ್ಲಿ ನೀರು ನಿಂತು ಡಾಂಬರು ಒಂದೇ ಮಳೆಗೆ ಕಿತ್ತುಹೋಗುತ್ತದೆ. ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ರಾತ್ರೋರಾತ್ರಿ ಇಂತಹ ಕಾಮಗಾರಿ ಮಾಡುವ ಅಗತ್ಯ ಇದೆಯೇ? ಗುಣಮಟ್ಟದ ಕಾಮಗಾರಿ ಮಾಡಿದರೆ ಜನರು ವರ್ಷಗಟ್ಟಲೆ ನೆಮ್ಮದಿಯಿಂದ ಇರುತ್ತಾರೆ. ಇದು ಅವರಿಗೆ ಬೇಕಿಲ್ಲ ಅನ್ನಿಸುತ್ತೆ’ ಎಂದು ಮಹದೇವಪುರದ ಆನಂದ
ಹೇಳಿದರು.
---
ತಾತ್ಕಾಲಿಕ ತುರ್ತು ಶೃಂಗಾರ
ಮಣ್ಣಿನ ವಾಸನೆ ಬಂದರೆ ಮಳೆಗಾಲದ ಆರಂಭ. ಡಾಂಬರು ವಾಸನೆ ಬಂದರೆ ಚುನಾವಣೆ ಬಂತೆಂದೇ ಅರ್ಥ ಎಂಬ ಮಾತಿನಂತೆ ನಗರದ ರಸ್ತೆಗಳನ್ನು ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ತಾತ್ಕಾಲಿಕವಾಗಿ ತುರ್ತು ಶೃಂಗಾರ ಮಾಡಲಾಗಿದೆ. ರಸ್ತೆ ಗುಣಮಟ್ಟವನ್ನು ಮಳೆ ಶುರುವಾದ ತಕ್ಷಣ ಗುಂಡಿಗಳೇ ಹೇಳುತ್ತವೆ. ಚುನಾವಣೆಗೆ ಬಂಡವಾಳ ಹೂಡಿ ಆಯ್ಕೆಯಾಗಿ ಬಂದ ತಕ್ಷಣ ಜೇಬು ತುಂಬಿಸಿ
ಕೊಳ್ಳಲು ರಸ್ತೆ ಕಾಮಗಾರಿಗಳು ಕಾದು ನಿಂತಿರುತ್ತವೆ.
ಬಿಡಬ್ಲ್ಯುಎಸ್‌ಎಸ್‌ಬಿ, ಬೆಸ್ಕಾಂಗಳು ರಸ್ತೆಗೆ ಡಾಂಬರು ಹಾಕುವುದನ್ನೇ ಕಾಯುತ್ತಿರುತ್ತಾರೆ. ಇವರದ್ದೆಲ್ಲ ಒಳಒಪ್ಪಂದವಾದಂತೆ. ಬಿಬಿಎಂಪಿಯವರು ರಸ್ತೆ ಮಾಡುತ್ತಿದ್ದಂತೆಯೇ ಇವರೆಲ್ಲ ಅಗೆದುಕೊಂಡು ಬರುತ್ತಾರೆ. ನಂತರ, ಹಾಗೇ ಬಿಟ್ಟು ಹೋಗಿರುತ್ತಾನೆ. ಮತ್ತೆ ರಸ್ತೆ ಡಾಂಬರು ಹಾಕಿ ಅದಕ್ಕೂ ದುಡ್ಡು ಮಾಡಿಕೊಳ್ಳುತ್ತಾರೆ. ಈ ಒಳಒಪ್ಪಂದದ ಪ್ರಕಾರ ಪ್ರತಿ ಆರು ತಿಂಗಳು, ವರ್ಷಕ್ಕೆ ಇಂತಹ ಪ್ರಕ್ರಿಯೆಗಳು ನಡೆಯುತ್ತಲೇ ಇರುತ್ತವೆ. ಇಲಾಖೆಗಳ ನಡುವೆ ಸಮನ್ವಯ ಇಲ್ಲದ್ದೇ ದುಂದು ವೆಚ್ಚಕ್ಕೆ ಮೂಲ ಕಾರಣ.
ಗೌಡಯ್ಯ, ಕಾರ್ಯದರ್ಶಿ, ಜ್ಞಾನಭಾರತಿ ವಾಯುವಿಹಾರಿಗಳ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.