ADVERTISEMENT

ಮಲ್ಲೇಶ್ವರ ಕ್ಷೇತ್ರ ಸ್ಥಿತಿ – ಗತಿ: ಅಭಿವೃದ್ಧಿಯೋ ಜಾತಿ ಸಮೀಕರಣವೋ?

ಕರ್ನಾಟಕ ವಿಧಾನಸಭಾ ಚುನಾವಣೆ –2023

ಎಸ್.ರವಿಪ್ರಕಾಶ್
Published 14 ಜನವರಿ 2023, 7:27 IST
Last Updated 14 ಜನವರಿ 2023, 7:27 IST
ಅಶ್ವತ್ಥ ನಾರಾಯಣ
ಅಶ್ವತ್ಥ ನಾರಾಯಣ   

ಬೆಂಗಳೂರಿನ ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿರುವ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ‘ಹ್ಯಾಟ್ರಿಕ್‌’ ಗೆಲುವು ಸಾಧಿಸಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಮತ್ತೆ ಕಣಕ್ಕೆ ಇಳಿಯಲು ಭರ್ಜರಿ ತಯಾರಿ ನಡೆಸಿದ್ದಾರೆ. ಇದಕ್ಕೆ ಪೂರಕವಾಗಿ ಉದ್ಯೋಗ ಮೇಳ, ಕೌಶಲ ತರಬೇತಿ ಮೇಳಗಳನ್ನು ಹಮ್ಮಿಕೊಳ್ಳುತ್ತಲೇ ಬಂದಿದ್ದಾರೆ. ಯುವ ಸಮೂಹವನ್ನು ಸೆಳೆಯಲು ಪ್ರಯತ್ನ ನಡೆಸಿದ್ದಾರೆ.

ಮಧ್ಯಮ ವರ್ಗದ ಜನರೇ ಅಧಿಕ ಸಂಖ್ಯೆಯಲ್ಲಿರುವ ಈ ಕ್ಷೇತ್ರದಲ್ಲಿ ತಮ್ಮ ಚೊಚ್ಚಲ ಚುನಾವಣೆಯಲ್ಲಿ (2004) ಸೋಲಿನ ಕಹಿ ಅನುಭವಿಸಿದ್ದರು. ಆ ಬಳಿಕ ಅವರು ಹಿಂತಿರುಗಿ ನೋಡಲಿಲ್ಲ. ಕಳೆದ ಮೂರೂ ವಿಧಾನಸಭಾ ಚುನಾವಣೆಗಳಲ್ಲಿ ಅಧಿಕ ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ಹಾಗೆ ನೋಡಿದರೆ, ಅಶ್ವತ್ಥನಾರಾಯಣ ಅವರಿಗೆ ಪ್ರಬಲ ಸವಾಲೊಡ್ಡುವ ಹುರಿಯಾಳುಗಳು ಕಾಂಗ್ರೆಸ್, ಜೆಡಿಎಸ್‌ನಲ್ಲಿ ಕಾಣಿಸುತ್ತಿಲ್ಲ. ಮೂಲತಃ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಈ ಕ್ಷೇತ್ರವನ್ನು ಅಶ್ವತ್ಥನಾರಾಯಣ ಅವರು ತಮ್ಮ ಸುರಕ್ಷಿತ ಕ್ಷೇತ್ರವಾಗಿ ಮಾಡಿಕೊಂಡಿದ್ದಾರೆ.

ಹಿಂದೆ ಕಾಂಗ್ರೆಸ್‌ನ ಎಂ.ಆರ್‌.ಸೀತಾರಾಮ್ ಅವರು ಎರಡು ಬಾರಿ ಈ ಕ್ಷೇತ್ರದಲ್ಲಿ ಗೆದ್ದಿದ್ದರು. ಪರಂಪರಾಗತವಾಗಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ಸೇತರ ಪಕ್ಷಗಳೇ ಗೆಲುವು ಸಾಧಿಸುತ್ತಾ ಬಂದಿವೆ. ಹಿಂದಿನ ಚುನಾವಣೆಯಲ್ಲಿ, ಮಾಜಿ ಮುಖ್ಯಮಂತ್ರಿ ಕೆಂಗಲ್‌ ಹನುಮಂತಯ್ಯ ಅವರ ಮೊಮ್ಮಗ ಶ್ರೀಪಾದರೇಣು ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಕೊನೆಗಳಿಗೆಯಲ್ಲಿ ಟಿಕೆಟ್ ನೀಡಿದ್ದರಿಂದಾಗಿ ತಯಾರಿ ನಡೆಸಲು ಸಾಕಷ್ಟು ಸಮಯ ಸಿಕ್ಕಿರಲಿಲ್ಲ. ಈ ಬಾರಿ ಅವರೂ ಆಕಾಂಕ್ಷಿಯಾಗಿದ್ದಾರೆ. ಅಲ್ಲದೇ, ಈಸ್ಟ್‌ವೆಸ್ಟ್‌ ಸಮೂಹ ಸಂಸ್ಥೆಯ ರವಿಕಿರಣ್ ಅವರ ಪತ್ನಿ ರಶ್ಮಿ ರವಿಕಿರಣ್, ಕೆಪಿಸಿಸಿ ಪ್ರಧಾನಕಾರ್ಯದರ್ಶಿ ಶಫಿವುಲ್ಲಾ, ಮಾಜಿ ಮೇಯರ್ ಲಕ್ಕಣ್ಣ ಅವರ ಪುತ್ರ ಗಿರೀಶ್‌ ಲಕ್ಕಣ್ಣ ಅವರು ಟಿಕೆಟ್‌ ಮೇಲೆ ಕಣ್ಣಿಟ್ಟಿದ್ದಾರೆ.

ADVERTISEMENT

ಈ ಕ್ಷೇತ್ರದಲ್ಲಿ ಬಿಜೆಪಿಗೆ ಭದ್ರ ನೆಲೆ ಒದಗಿಸಲು ಒಂದು ಕಾಲದಲ್ಲಿ ಶ್ರಮ ಹಾಕಿದ್ದ ಪ್ರಕಾಶ್ ಅಯ್ಯಂಗಾರ್ ಅವರ ಹತ್ತಿರದ ಸಂಬಂಧಿ ಅನೂಪ್ ಅಯ್ಯಂಗಾರ್ ಈ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಅರ್ಜಿ ಹಾಕಿದ್ದಾರೆ. ಇದು ಕುತೂಹಲಕಾರಿ ಬೆಳವಣಿಗೆ.

ಅಭಿವೃದ್ಧಿ ಹೊಂದಿ ಕ್ಷೇತ್ರವಾಗಿರುವ ಇಲ್ಲಿ ಜಾತಿ ಸಮೀಕರಣವೇ ಗೆಲುವನ್ನು ನಿರ್ಧರಿಸುವ ಪ್ರಧಾನ ಅಂಶ. ಸಂಚಾರದಟ್ಟಣೆ, ರಸ್ತೆಯಲ್ಲಿ ವಾಹನ ನಿಲುಗಡೆ ಸಮಸ್ಯೆಯೂ ಈ ಕ್ಷೇತ್ರವನ್ನು ಕಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.