ಆನೇಕಲ್: ಕಾಂಗ್ರೆಸ್ ಅಭ್ಯರ್ಥಿ ಬಿ.ಶಿವಣ್ಣ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. 1,34,797 ಮತ ಪಡೆಯುವ ಮೂಲಕ 31,325 ಮತಗಳ ಅಂತರದಲ್ಲಿ ಗೆಲುವು ಪಡೆದಿದ್ದಾರೆ. ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್.ಸಿ.ಹುಲ್ಲಹಳ್ಳಿ 1,03,472 ಮತ ಪಡೆದು ಪರಾಭವಗೊಂಡರು.
21 ಸುತ್ತುಗಳಲ್ಲಿ ಮತ ಎಣಿಕೆ ನಡೆದಿದ್ದು ಒಂದು ಸುತ್ತು ಹೊರತುಪಡಿಸಿ ಉಳಿದ 20 ಸುತ್ತುಗಳಲ್ಲಿಯೂ ಶಿವಣ್ಣ ಲೀಡ್ ಕಾಯ್ದುಕೊಂಡರು. ಕಸಬಾ ಹೋಬಳಿಯಲ್ಲಿ 11,419 ಮತಗಳ ಲೀಡ್ ಪಡೆದಿದ್ದಾರೆ.
ಚುನಾವಣೆ ಹಿನ್ನೆಲೆಯಲ್ಲಿ ಕಾರ್ಯಕರ್ತರು, ಮುಖಂಡರು ಹಗಲಿರುಳು ಶ್ರಮಿಸಿದ್ದಾರೆ. ಶಾಸಕ ರಾಮಲಿಂಗಾರೆಡ್ಡಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಈ ಭಾಗದಲ್ಲಿ ಕೆಲಸ ಮಾಡಿದ್ದಾರೆ. ರಾಹುಲ್ ಗಾಂಧಿ ಅವರ ರೋಡ್ ಶೋ ನಂತರ ಕಾರ್ಯಕರ್ತರಲ್ಲಿ ಮತ್ತಷ್ಟು ಉತ್ಸಾಹ ಹೆಚ್ಚಾಯಿತು ಎಂದು ಕಾಂಗ್ರೆಸ್ ಅಭ್ಯರ್ಥಿ ಶಿವಣ್ಣ ಹೇಳಿದರು.
ತಾಲ್ಲೂಕಿನ ವಿವಿಧೆಡೆ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು.
ಸಚಿವ ಸ್ಥಾನದ ನಿರೀಕ್ಷೆ
ಆನೇಕಲ್ ವಿಧಾನಸಭಾ ಕ್ಷೇತ್ರದ ಜನತೆ ಮೂರು ಬಾರಿ ಆಶೀರ್ವಾದ ಮಾಡುವ ಮೂಲಕ ನಮ್ಮ ಜವಾಬ್ದಾರಿ ಹೆಚ್ಚಿಸಿದ್ದಾರೆ ಎಂದು ಶಾಸಕ ಬಿ.ಶಿವಣ್ಣ ಹೇಳಿದರು. ಬಿಜೆಪಿ ಪಕ್ಷದ ಆಡಳಿತದ ಬಗ್ಗೆ ಅಸಮಾಧಾನ ಹೊಂದಿದ್ದ ಜನತೆ ರಾಜ್ಯದಾದ್ಯಂತ ಕಾಂಗ್ರೆಸ್ ಪಕ್ಷಕ್ಕೆ ಭರ್ಜರಿ ಗೆಲುವು ನೀಡುವ ಮೂಲಕ ಉತ್ತಮ ಆಡಳಿತ ನೀಡಲು ಬಲ ನೀಡಿದ್ದಾರೆ. ಮೂರು ಬಾರಿ ಶಾಸಕರಾಗಿರುವುದರಿಂದ ಮತ್ತು ಈ ಭಾಗದಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳಿಗೆ ಬಲ ನೀಡಲು ಪಕ್ಷದ ಮುಖಂಡರು ಸಚಿವ ಸ್ಥಾನ ನೀಡುವರು ಎಂಬ ನಂಬಿಕೆಯಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.