ADVERTISEMENT

ದಟ್ಟಣೆ ಕಾರಿಡಾರ್‌: ಅಲ್ಪಾವಧಿ ಟೆಂಡರ್‌ಗೆ ಅಸ್ತು

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2021, 20:24 IST
Last Updated 23 ಡಿಸೆಂಬರ್ 2021, 20:24 IST
 ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಳಗಾವಿ (ಸುವರ್ಣ ವಿಧಾನಸೌಧ): ಬೆಂಗಳೂರು ನಗರದಲ್ಲಿ ಅತಿಯಾದ ವಾಹನ ದಟ್ಟಣೆ ಹೊಂದಿರುವ 191 ಕಿ.ಮೀ. ಉದ್ದದ 12 ರಸ್ತೆಗಳನ್ನು ₹ 1,120.48 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿಗಳ ಗುತ್ತಿಗೆ ನೀಡುವ ಸಲುವಾಗಿ ಅಲ್ಪಾವಧಿ ಟೆಂಡರ್‌ ಪ್ರಕ್ರಿಯೆ ನಡೆಸಲು ಸಮ್ಮತಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಗುರುವಾರ ಕಾಂಗ್ರೆಸ್‌ನ ಪಿ.ಆರ್‌. ರಮೇಶ್‌ ಪ್ರಶ್ನೆಗೆ ಉತ್ತರಿಸಿದ ಅವರು, ‘ಈ ಕಾಮಗಾರಿಗಳಿಗೆ ಟೆಂಡರ್‌ ಪ್ರಕ್ರಿಯೆ ನಡೆಸಲು ಅನುಮೋದನೆ ಕೋರಿ ಪ್ರಸ್ತಾವ ಸಲ್ಲಿಸಲಾಗಿತ್ತು. ಆದರೆ, ಅದರಲ್ಲಿ ಕೆಲವು ಲೋಪಗಳಿದ್ದವು.ಈ ಕುರಿತು ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ(ಕೆಆರ್‌ಡಿಸಿಎಲ್‌)ದಿಂದ ಸ್ಪಷ್ಟನೆ ಪಡೆದ ಬಳಿಕ ಅಲ್ಪಾವಧಿ ಟೆಂಡರ್‌ ನಡೆಸಲು ಅನುಮತಿ ನೀಡಲಾಗಿದೆ’ ಎಂದರು.

ರಸ್ತೆ ನಿರ್ಮಾಣಕ್ಕೆ ₹ 336 ಕೋಟಿ ವೆಚ್ಚವಾದರೆ, ರಸ್ತೆ ನಿರ್ವಹಣೆಗೆ ₹ 785 ಕೋಟಿ ವೆಚ್ಚ ಮಾಡುವ ಪ್ರಸ್ತಾವವಿತ್ತು. 53 ಕಿ.ಮೀ. ಉದ್ದದ ರಸ್ತೆಯನ್ನು ವೈಟ್‌ ಟಾ‍ಪಿಂಗ್‌ ಮಾಡುವ ಪ್ರಸ್ತಾವವಿದೆ. ಕಪ್ಪು ಪಟ್ಟಿಗೆ ಸೇರಿರುವ ಒಬ್ಬ ಗುತ್ತಿಗೆದಾರನಿಗೆ ಟೆಂಡರ್‌ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ನೀಡುವ ಪ್ರಸ್ತಾವವೂ ಇತ್ತು. ಈ ಎಲ್ಲ ಲೋಪಗಳನ್ನೂ ಸರಿಪಡಿಸುವಂತೆ ನಿಗಮದ ಅಧಿಕಾರಿಗಳಿಗೆ ನೋಟಿಸ್‌ ನೀಡಲಾಗಿತ್ತು ಎಂದು ಹೇಳಿದರು.

ADVERTISEMENT

ಕೆಆರ್‌ಡಿಸಿಎಲ್‌ ಅಧಿಕಾರಿಗಳು ಆಕ್ಷೇಪಣೆಗಳಿಗೆ ಸ್ಪಷ್ಟನೆ ನೀಡಿದ ಬಳಿಕ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆ ಅಡಿಯಲ್ಲೇ ಟೆಂಡರ್‌ ನಡೆಸಲು ನಿರ್ದೇಶನ ನೀಡಲಾಗಿದೆ. ಯಾವುದೇ ರೀತಿಯಲ್ಲೂ ಲೋಪ ಆಗದಂತೆ ಟೆಂಡರ್‌ ಪ್ರಕ್ರಿಯೆ ನಡೆಸಲಾಗುವುದು ಎಂದರು.

ಕೆಆರ್‌ಡಿಸಿಎಲ್‌ಗೆ ಏಕೆ: ‘ಬಿಬಿಎಂಪಿ ವ್ಯಾಪ್ತಿಯ ರಸ್ತೆಗಳನ್ನು ಕೆಆರ್‌ಡಿಸಿಎಲ್‌ಗೆ ಏಕೆ ವಹಿಸಬೇಕು? ಈಗಾಗಲೇ ಎಚ್‌ಎಎಲ್‌ ವಿಮಾನ ನಿಲ್ದಾಣ ರಸ್ತೆ ಮತ್ತು ಮಾಗಡಿ ರಸ್ತೆಯಲ್ಲಿ ನಿಗಮ ನಡೆಸಿರುವ ಕಳಪೆ ಕಾಮಗಾರಿಗಳನ್ನು ಪರಿಶೀಲಿಸಿ. ಬಿಬಿಎಂಪಿ ವ್ಯಾಪ್ತಿಯಲ್ಲಿ ಕೆಆರ್‌ಡಿಸಿಎಲ್‌ ರಸ್ತೆ ಕಾಮಗಾರಿ ನಿರ್ವಹಿಸುತ್ತಿದೆ. ಮುಂದೆ ಯಾರು ಹೊಣೆ ಎನ್ನುವುದೇ ಅರ್ಥವಾಗುತ್ತಿಲ್ಲ’ ಎಂದು ಪಿ.ಆರ್‌. ರಮೇಶ್‌ ಕೇಳಿದರು.

ಅದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ‘ಕೆಆರ್‌ಡಿಸಿಎಲ್‌ ನಡೆಸಿರುವ ಎರಡೂ ಕಾಮಗಾರಿಗಳ ಕುರಿತು ಪರಿಶೀಲನಾ ವರದಿ ಪಡೆಯಲಾಗುವುದು. ಆ ಬಳಿಕ ನಿಗಮಕ್ಕೆ ಈ ಕಾಮಗಾರಿಗಳನ್ನು ವಹಿಸಬೇಕೆ? ಬೇಡವೆ? ಎಂಬುದರ ಕುರಿತು ನಿರ್ಧರಿಸಲಾಗುವುದು’ ಎಂದರು.

18.52 ಲಕ್ಷ ಆಸ್ತಿಗಳು ತೆರಿಗೆ ವ್ಯಾಪ್ತಿಯಲ್ಲಿ
‘ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 18.52 ಲಕ್ಷ ಆಸ್ತಿಗಳು ತೆರಿಗೆ ವ್ಯಾಪ್ತಿಯಲ್ಲಿವೆ. ಈ ಪೈಕಿ 13.56 ಲಕ್ಷ ಆಸ್ತಿಗಳ ಮಾಲೀಕರು 2021–22ರಲ್ಲಿ ಆಸ್ತಿ ತೆರಿಗೆ ಪಾವತಿ ಮಾಡಿದ್ದಾರೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಗುರುವಾರ ಬಿಜೆಪಿಯ ಎನ್‌. ರವಿಕುಮಾರ್‌ ಪ್ರಶ್ನೆಗೆ ಉತ್ತರಿಸಿ ‘ತೆರಿಗೆ ಪಾವತಿಸಿರುವವರ ಪೈಕಿ 12.59 ಲಕ್ಷ ವಾಸಯೋಗ್ಯ ಮನೆಗಳು, 97,057 ವಾಣಿಜ್ಯ ಕಟ್ಟಡಗಳು ಮತ್ತು 9,112 ಬಹುಮಹಡಿ ವಸತಿ ಸಮುಚ್ಚಯಗಳು ಇವೆ’ ಎಂದರು.

‘ನಗರದ ಲ್ಲಿ ‘ಎ’ ಖಾತಾ ಆಸ್ತಿಗಳಿಗೆ ಮಾತ್ರ ತೆರಿಗೆ ವಿಧಿಸಲಾಗುತ್ತಿದೆ. ‘ಬಿ’ ಖಾತೆಯ ಆಸ್ತಿಗಳಿಗೂ ‘ಎ’ ಖಾತಾ ನೀಡಬೇಕು. ಇದರಿಂದ ಬಿಬಿಎಂಪಿಯ ಬೊಕ್ಕಸಕ್ಕೂ ಹೆಚ್ಚಿನ ತೆರಿಗೆ ಸಂಗ್ರಹವಾಗುತ್ತದೆ’ ಎಂದು ರವಿಕುಮಾರ್‌ ಆಗ್ರಹಿಸಿದರು.

‘ಅಕ್ರಮ– ಸಕ್ರಮಕ್ಕೆ ಸಂಬಂಧಿಸಿದ ವ್ಯಾಜ್ಯ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ. ತೀರ್ಪು ಬಂದ ಬಳಿಕ ‘ಬಿ’ ಖಾತಾ ಆಸ್ತಿಗಳಿಗೆ ‘ಎ’ ಖಾತೆ ನೀಡುವ ಪ್ರಕ್ರಿಯೆ ನಡೆಸಲಾಗುವುದು.’ ಎಂದು ಸಿ.ಎಂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.