ADVERTISEMENT

ಬಂದ್‌ ನೀರಸ: ಪ್ರತಿಭಟಿಸಲು ಹರಸಾಹಸ!

ರ‍್ಯಾಲಿಗೂ ಮುನ್ನವೇ ಹೋರಾಟಗಾರರ ಬಂಧನ * ಸರ್ಕಾರದ ವಿರುದ್ಧ ಘೋಷಣೆಗೆ ಸೀಮಿತವಾದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2020, 16:52 IST
Last Updated 5 ಡಿಸೆಂಬರ್ 2020, 16:52 IST
ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್‌ ಅವರನ್ನು ಟೌನ್‌ ಹಾಲ್‌ ಬಳಿ ಪೊಲೀಸರು ವಶಕ್ಕೆ ಪಡೆದರು ಪ್ರಜಾವಾಣಿ ಚಿತ್ರ
ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್‌ ಅವರನ್ನು ಟೌನ್‌ ಹಾಲ್‌ ಬಳಿ ಪೊಲೀಸರು ವಶಕ್ಕೆ ಪಡೆದರು ಪ್ರಜಾವಾಣಿ ಚಿತ್ರ   

ಬೆಂಗಳೂರು: ಮರಾಠ ಅಭಿವೃದ್ಧಿ ನಿಗಮ ರಚನೆಯ ವಿರುದ್ಧ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ವಾಹನ ಸಂಚಾರ ವಿರಳವಾಗಿದ್ದರೂ ಜನ–ಜೀವನಕ್ಕೆ ಯಾವುದೇ ತೊಂದರೆಯಾಗಲಿಲ್ಲ. ರ‍್ಯಾಲಿ, ಮೆರವಣಿಗೆ ನಡೆಸುವುದಕ್ಕೂ ಮುನ್ನವೇ ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆ ಪಡೆದರು.

ಪುರಭವನ, ಮೌರ್ಯ ವೃತ್ತ, ಸ್ವಾತಂತ್ರ್ಯ ಉದ್ಯಾನ ಸೇರಿದಂತೆ ನಗರದ ಪ್ರಮುಖ ಸ್ಥಳಗಳಲ್ಲಿ ಶನಿವಾರ ಪ್ರತಿಭಟನೆ ನಡೆಸುವುದಕ್ಕೆ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಸಜ್ಜಾಗಿದ್ದರು. ಈ ಸ್ಥಳಗಳಲ್ಲೆಲ್ಲ ಪೊಲೀಸ್‌ ಸರ್ಪಗಾವಲು ಇತ್ತು. ಅಲ್ಲಲ್ಲಿ ಬ್ಯಾರಿಕೇಡ್‌ಗಳನ್ನು ಹಾಕುವ ಮೂಲಕ ಹೆಚ್ಚು ಪ್ರತಿಭಟನಕಾರರು ಒಂದೆಡೆ ಸೇರದಂತೆ ಪೊಲೀಸರು ತಡೆದರು. ಅಲ್ಲಲ್ಲಿ ನಿಲ್ಲಿಸಲಾಗಿದ್ದ ಪೊಲೀಸ್‌ ವ್ಯಾನ್‌ಗಳಲ್ಲಿ ಹಾಗೂ ಬಾಡಿಗೆಗೆ ಪಡೆದಿದ್ದ ಬಿಎಂಟಿಸಿ ಬಸ್‌ಗಳಲ್ಲಿ ಹೋರಾಟಗಾರರನ್ನು ತುಂಬಿಸಿದ ಪೊಲೀಸರು, ಠಾಣೆಗಳಿಗೆ ಕರೆದೊಯ್ದು ನಂತರ ಬಿಡುಗಡೆಗೊಳಿಸಿದರು.

ಹೋರಾಟಗಾರರು ವಶಕ್ಕೆ

ADVERTISEMENT

ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿ.ಎ. ನಾರಾಯಣಗೌಡ ಅವರು ಕಾರ್ಯಕರ್ತರೊಂದಿಗೆ ತಮ್ಮ ಗಾಂಧಿನಗರ ಕಚೇರಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಲು ಮುಂದಾದರು. ಕಾಂಗ್ರೆಸ್‌ನ ಹಳೆಯ ಕಚೇರಿ ಬಳಿ ಅವರು ಬರುತ್ತಿದ್ದಂತೆಯೇ ಅವರನ್ನು ಲೀಸರು ವಶಕ್ಕೆ ತೆಗೆದುಕೊಂಡರು. ಸರ್ಕಾರದ ವಿರುದ್ಧ ಘೋಷಣೆ ಕೂಗುವುದಕ್ಕೆ ಮಾತ್ರ ಪ್ರತಿಭಟನೆ ಸೀಮಿತವಾಯಿತು.

ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್, ಡಾ. ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ. ಗೋವಿಂದು ಸೇರಿದಂತೆ ಜಯ ಕರ್ನಾಟಕ ಸಂಘಟನೆ, ಭೀಮ್‌ ಆರ್ಮಿ, ಕನ್ನಡ ಸೇನೆ ಮತ್ತಿತರ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಪುರಭವನದ ಬಳಿ ಕೆಲ ಹೊತ್ತು ಪ್ರತಿಭಟನೆ ನಡೆಸಿದರು. ಮರಾಠ ಅಭಿವೃದ್ಧಿ ನಿಗಮ ರದ್ದು ಮಾಡುವವರೆಗೂ ಹೋರಾಟ ಮುಂದುವರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆ ನಡೆಸಲೂ ಸರ್ಕಾರ ಅವಕಾಶ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಭಟನೆ ತಣ್ಣಗಾಗಿಸಿದ ಮಳೆ:

ಕನ್ನಡ ಒಕ್ಕೂಟದ ಕಾರ್ಯಕರ್ತರು ಪುರಭವನದ ಬಳಿ ಅರೆಬೆತ್ತಲೆ ಧರಣಿ ನಡೆಸಿದರು. ಈ ವೇಳೆ ಮಳೆ ಸುರಿಯಲು ಆರಂಭಿಸಿದ್ದು ಪೊಲೀಸರ ಕೆಲಸವನ್ನು ಸುಲಭವಾಗಿಸಿತು. ಕೆಲವರು ಮಳೆಯಲ್ಲಿಯೇ ಹೋರಾಟ ಮುಂದುವರಿಸಿದರೂ, ಅವರ ಸಂಖ್ಯೆ ಬೆರಳೆಣಿಕೆಯಷ್ಟು ಇತ್ತು. ಪ್ರತಿಭಟನೆ ನಡೆಯುತ್ತಿದ್ದ ಎಲ್ಲ ಕಡೆಗಳಲ್ಲಿ ಪ್ರತಿಭಟನಕಾರರಿಗಿಂತ ಪೊಲೀಸರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು.

ಕೆಎಸ್‌ಆರ್‌ಟಿಸಿ, ಬಿಎಂಟಿಸಿ ನಿಲ್ದಾಣಗಳು ಹಾಗೂ ಮೆಟ್ರೊ ರೈಲು ನಿಲ್ದಾಣಗಳ ಬಳಿ ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.