ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಭೂಸ್ವಾಧೀನ ಪಡಿಸಿಕೊಂಡಿದ್ದ ಜಮೀನುಗಳನ್ನು ಭೂಸ್ವಾಧೀನ ಕಾಯ್ದೆ 1894ರ ಕಲಂ48(1) ರಡಿ ಭೂಸ್ವಾಧೀನದಿಂದ ಕೈಬಿಟ್ಟಿರುವ 29 ಪ್ರಕರಣಗಳ ಅಧಿಸೂಚನೆಯನ್ನು ಹಿಂಪಡೆಯಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಅಲ್ಲದೇ, ಈ ಪ್ರಕರಣಗಳಲ್ಲಿ ಎಲ್ಲಾ ಬಾಧಿತ ವ್ಯಕ್ತಿಗಳಿಗೆ ನೋಟಿಸ್ ನೀಡಿ, ವಿವರಣೆ ಪಡೆದು ಇದಕ್ಕೆ ಕಾರಣಕರ್ತರಾಗಿರುವ ಅಧಿಕಾರಿ, ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಸಂಪುಟ ನಿರ್ಧರಿಸಿದೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ತಿಳಿಸಿದರು.
2009–2010 ರ ಅವಧಿಯಲ್ಲಿ ಬೆಂಗಳೂರು ದಕ್ಷಿಣ ತಾಲ್ಲೂಕು, ಬೆಂಗಳೂರು ಉತ್ತರ ತಾಲ್ಲೂಕುಗಳ ವಿವಿಧ ಹೋಬಳಿಗಳಲ್ಲಿ ಭೂಸ್ವಾಧೀನ ಕೈಬಿಟ್ಟು ಅಧಿಸೂಚನೆ ಹೊರಡಿಸಲಾಗಿತ್ತು.
ಕಾಂಗ್ರೆಸ್ ಕಚೇರಿಗೆ ಜಮೀನು:
ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೊಡ್ಡಬಳ್ಳಾಪುರ ತಾಲ್ಲೂಕು, ವೀರಭದ್ರನ ಪಾಳ್ಯ ಗ್ರಾಮದ ಸರ್ವೆ ನಂಬರ್ 66 ರಲ್ಲಿ 15 ಗುಂಟೆ ಖರಾಬು ಜಮೀನನ್ನು ಕಾಂಗ್ರೆಸ್ ಕಚೇರಿ ಕಟ್ಟಡ ನಿರ್ಮಾಣಕ್ಕಾಗಿ ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಗುತ್ತಿಗೆ ನೀಡಲು ಸಂಪುಟ ತೀರ್ಮಾನಿಸಿದೆ.
ಕೋಲಾರ, ಚಿಂತಾಮಣಿ: 126 ಕೆರೆಗಳಿಗೆ ನೀರು
ಕೋಲಾರ ಜಿಲ್ಲೆ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ಒಟ್ಟು 126 ಕರೆಗಳಿಗೆ ಬೆಂಗಳೂರು ನಗರದ ಸಂಸ್ಕರಿಸಿದ ತ್ಯಾಜ್ಯ ನೀರನ್ನು ತುಂಬಿಸುವ ಯೋಜನೆಗೆ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಈ ಯೋಜನೆಯ ಅಂದಾಜು ವೆಚ್ಚ ₹128 ಕೋಟಿ. 5 ವರ್ಷಗಳ ಪೋಷಣೆ ಮತ್ತು ನಿರ್ವಹಣೆಯ ಏತ ನೀರಾವರಿ ಕಾಮಗಾರಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.