ADVERTISEMENT

3 ತಿಂಗಳಲ್ಲಿ 68 ‘ಮ್ಯೂಲ್‌ ಹೆರ್ಡರ್‌’ ಬಂಧನ

ಸಾಮಾನ್ಯರ ವೈಯಕ್ತಿಕ ಮಾಹಿತಿ ಸಂಗ್ರಹಿಸಿ ಬ್ಯಾಂಕ್‌ ಖಾತೆ ತೆರೆದು ಮಾರಾಟ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 0:48 IST
Last Updated 20 ಫೆಬ್ರುವರಿ 2026, 0:48 IST
<div class="paragraphs"><p>ಬಂಧನ  </p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಬೆಂಗಳೂರು: ಬ್ಯಾಂಕ್‌ನಲ್ಲಿ ನಕಲಿ ಖಾತೆಗಳನ್ನು ತೆರೆದು ಜನರಿಗೆ ವಂಚಿಸುತ್ತಿದ್ದ ಸೈಬರ್‌ ಜಾಲದ ವಿರುದ್ಧ ವಿಶೇಷ ಕಾರ್ಯಾಚರಣೆ ಮುಂದುವರಿಸಿರುವ ರಾಜ್ಯ ಸೈಬರ್ ಕಮಾಂಡ್‌ ಘಟಕದ ಅಧಿಕಾರಿಗಳು, ಇದುವರೆಗೆ 68 ‘ಮ್ಯೂಲ್‌ ಹೆರ್ಡರ್‌’ಗಳನ್ನು (ಬ್ಯಾಂಕ್‌ ಖಾತೆಗಳನ್ನು ಸೈಬರ್ ವಂಚಕರಿಗೆ ಮಾರಾಟ ಮಾಡುವವರು) ಬಂಧಿಸಿದ್ದಾರೆ.

ADVERTISEMENT

ರಾಜ್ಯದಾದ್ಯಂತ ಮ್ಯೂಲ್‌ ಅಕೌಂಟ್‌ಗಳ (ನಕಲಿ ಖಾತೆಗಳು) ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದೆ. ಸೈಬರ್ ವಂಚನೆಗಳಿಗೆ ಬಳಸಲಾಗುತ್ತಿದ್ದ ಮ್ಯೂಲ್‌ ಬ್ಯಾಂಕ್‌ ಖಾತೆಗಳನ್ನು ಒಟ್ಟುಗೂಡಿಸುತ್ತಿದ್ದ ಮ್ಯೂಲ್‌ ಹೆರ್ಡರ್‌ಗಳನ್ನು ಪತ್ತೆ ಮಾಡಲಾಗುತ್ತಿದೆ. ಕಳೆದ ಡಿಸೆಂಬರ್‌ನಿಂದ ಫೆಬ್ರುವರಿ 19ರ ವರೆಗೆ ಒಟ್ಟು 68 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸೈಬರ್ ಕಮಾಂಡ್ ಸೆಂಟರ್‌ನ ಡಿಜಿಪಿ ಪ್ರಣವ್ ಮೊಹಂತಿ ತಿಳಿಸಿದ್ದಾರೆ.

‘ಸಾಮಾನ್ಯರ ವೈಯಕ್ತಿಕ ಮಾಹಿತಿ ಹಾಗೂ ದಾಖಲೆ ಸಂಗ್ರಹಿಸಿ ತಮ್ಮ ಹಾಗೂ ತಮ್ಮ ಸಂಬಂಧಿಕರ ಹೆಸರಿನಲ್ಲಿ ಮ್ಯೂಲ್‌ ಹೆರ್ಡರ್‌ಗಳು ಅನೇಕ ಬ್ಯಾಂಕ್‌ಗಳಲ್ಲಿ ಖಾತೆಗಳನ್ನು ತೆರೆದಿದ್ದರು. ಆ ಖಾತೆಗಳನ್ನು ಸೈಬರ್ ವಂಚಕರಿಗೆ ಮಾರಾಟ ಮಾಡಿ ಹಣ ಪಡೆಯುತ್ತಿದ್ದರು’ ಎಂದು ತಿಳಿಸಿದ್ದಾರೆ.

‘ಇದುವರೆಗೆ ನಡೆದಿರುವ ವಿಶೇಷ ಕಾರ್ಯಾಚರಣೆಯಲ್ಲಿ ಒಟ್ಟು 60 ಪ್ರಕರಣ ದಾಖಲು ಮಾಡಲಾಗಿದೆ. ಬ್ಯಾಂಕ್‌ನಲ್ಲಿ ತೆರೆಯಲಾಗಿದ್ದ 869 ನಕಲಿ ಖಾತೆ ಪತ್ತೆ ಹಚ್ಚಲಾಗಿದೆ. ನ್ಯಾಯಾಲಯದಿಂದ ಶೋಧನಾ ವಾರಂಟ್ ಪಡೆದು 35 ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ದೇಶದಾದ್ಯಂತ ಎನ್‌ಸಿಆರ್‌ಪಿ ಪೋರ್ಟಲ್‌ನಲ್ಲಿ ಈ ನಕಲಿ ಖಾತೆಗಳ ವಿರುದ್ಧ 8,788 ದೂರು ದಾಖಲಾಗಿದ್ದವು’ ಎಂದು ಮಾಹಿತಿ ನೀಡಿದ್ದಾರೆ.

‘ಬ್ಯಾಂಕ್‌ ಖಾತೆಗಳಲ್ಲಿದ್ದ ₹13.43 ಕೋಟಿ ಹಣದ ವರ್ಗಾವಣೆಗೆ ತಡೆಯೊಡ್ಡಲಾಗಿದೆ. 869 ನಕಲಿ ಖಾತೆಗಳಲ್ಲಿ ₹85 ಕೋಟಿ ವರ್ಗಾವಣೆ ಆಗಿರುವುದು ಪತ್ತೆಯಾಗಿದೆ. 35 ಎಟಿಎಂ ಕಾರ್ಡ್, 37 ಪಾಸ್‌ಬುಕ್‌, 80 ಮೊಬೈಲ್‌, 28 ಚೆಕ್‌ಬುಕ್‌, 22 ಸಿಮ್‌ಗಳನ್ನು ಆರೋಪಿಗಳಿಂದ ಜಪ್ತಿ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.