ADVERTISEMENT

ಅಸಮರ್ಪಕ ದಾಖಲೆ; ಅಕ್ರಮದ ವಾಸನೆ: ಕೆಎಫ್‌ಸಿಸಿ ಮಾಜಿ ಪದಾಧಿಕಾರಿಗಳ ಆರೋಪ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2022, 20:53 IST
Last Updated 4 ಆಗಸ್ಟ್ 2022, 20:53 IST
   

ಬೆಂಗಳೂರು: ‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನಡೆದ ಚುನಾವಣೆಯಲ್ಲಿ ಸಮರ್ಪಕವಾದ ದಾಖಲೆಗಳನ್ನು ನಿರ್ವಹಿಸದಿರುವುದು ಮತ್ತು ಮತಗಳ ಅಂಕಿ ಅಂಶಗಳಲ್ಲಿ ಭಾರೀ ಅಂತರವಿರುವುದು ಕಂಡುಬಂದಿದ್ದು, ಈ ಚುನಾವಣೆಯಲ್ಲಿ ಅಕ್ರಮ ನಡೆದಿರುವ ಸಾಧ್ಯತೆ ದಟ್ಟವಾಗಿದೆ’ ಎಂದು ನಿರ್ಮಾಪಕರಾದ ಸಾ.ರಾ. ಗೋವಿಂದು, ಕರಿಸುಬ್ಬು ದೂರಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಾ.ರಾ. ಗೋವಿಂದು, ‘ವಾಣಿಜ್ಯ ಮಂಡಳಿಯ ಚುನಾವಣೆಗೆ ಸಂಬಂಧಿಸಿ ಎಲೆಕ್ಟ್ರಾನಿಕ್‌ ಮತಯಂತ್ರಗಳ ಮೂಲಕ ಮತದಾನ ನಡೆಯಬೇಕು ಎಂದು ನಿರ್ಧಾರ ಆಗಿತ್ತು. ಆದರೆ, ಇಲ್ಲಿ ಮತಪತ್ರಗಳಮೂಲಕ ಮತದಾನ ನಡೆದಿದೆ. ಆದರೆ, ಮತಪತ್ರಗಳ ಕೌಂಟರ್‌ಫಾಯಿಲ್‌ನಲ್ಲಿ ಮತದಾರರ ಸಹಿಯನ್ನೂ ಪಡೆದಿಲ್ಲ. ಚುನಾವಣಾ ಪ್ರಕ್ರಿಯೆಯ ವಿಡಿಯೊ ದಾಖಲೆಯೂ ಸರಿಯಾಗಿ ನಡೆದಿಲ್ಲ. ಇಂಥ ಅನೇಕ ತಪ್ಪುಗಳಿಂದಾಗಿ ಸ್ಪರ್ಧಿಗಳು, ಮತದಾರರು ಸೇರಿ ಹಲವರಿಗೆ ಅನ್ಯಾಯವಾಗಿದೆ. ಇದನ್ನು ಚುನಾವಣಾಧಿಕಾರಿ ಗಮನಕ್ಕೆ ತಂದು ಸಮಜಾಯಿಷಿ ಕೇಳಿದರೂ ಅವರು ಪ್ರತಿಕ್ರಿಯಿಸಿಲ್ಲ’ ಎಂದು
ದೂರಿದರು.

ವಕೀಲ ರವಿಶಂಕರ್‌ ಎಸ್‌.ಎಸ್‌. ಮಾತನಾಡಿ, ‘ಸಹಕಾರ ಸಂಘಗಳ ಉಪನಿಬಂಧಕರಿಗೆ ಈ ಬಗ್ಗೆ ದೂರು ನೀಡಿದಾಗ ಅವರು, ವಾಣಿಜ್ಯ ಮಂಡಳಿಯಲ್ಲಿ ಯಾವುದೇ ಸಭೆ ಅಥವಾ ಹಣಕಾಸು ವ್ಯವಹಾರಗಳನ್ನು ನಡೆಸುವಂತಿಲ್ಲ ಎಂದು ಆದೇಶ ನೀಡಿದರು. ಈ ಬೆಳವಣಿಗೆಗಳು ತೀವ್ರಗೊಂಡಾಗ ಹೈಕೋರ್ಟ್‌ ಕೂಡಾ ಇದೇ ತೀರ್ಮಾನವನ್ನು ಕೊಟ್ಟಿತು’ ಎಂದರು.

ADVERTISEMENT

ನಿರ್ಮಾಪಕ ಕೆ.ಎಂ.ವೀರೇಶ್‌ ಮಾತನಾಡಿ, ‘ಸ್ಪರ್ಧಿಗಳಿಗೆ ಸಿಕ್ಕಿರುವ ಮತಗಳ ನಿಖರ ಸಂಖ್ಯೆಯನ್ನೂ ಕೊಟ್ಟಿಲ್ಲ. ಯಾವುದೇ ದಾಖಲೆಗಳಿಲ್ಲದೇ ಚುನಾವಣಾಧಿಕಾರಿ ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದಾರೆ. ನಾವು ಸ್ಪಷ್ಟನೆ ಕೇಳಿದಾಗ ಬ್ಯಾಲೆಟ್‌ ಪೇಪರ್‌ಗಳನ್ನು ಸುರಿದು ವಿವಿಧ ವಿಭಾಗವಾರು ಮತಗಳ ಬೇರೆಯೇ ಅಂಕಿಗಳನ್ನು ಹೇಳಿದ್ದಾರೆ. ಅಭ್ಯರ್ಥಿಗಳ ಸಮ್ಮುಖದಲ್ಲಿ ಮತಗಳ ಸಂಖ್ಯೆಯನ್ನು ಹೇಳಿಲ್ಲ. ಕೆಲವು ಮತಗಳು ಕುಲಗೆಟ್ಟಿವೆ. ಹಲವರು ಮತದಾನ ವಂಚಿತರಾಗಿದ್ದಾರೆ. ಈ ಎಲ್ಲ ಕಾರಣದಿಂದ ಇಲ್ಲಿ ಗೊಂದಲ ಉಂಟಾಗಿದೆ’
ಎಂದರು.

‘ಚುನಾವಣೆಯಲ್ಲಿ ಈಗ ಗೆದ್ದಿದೆ ಎನ್ನಲಾದ ಕಾರ್ಯಕಾರಿ ಸಮಿತಿಗೂ ಅಧಿಕೃತವಾಗಿ ದಾಖಲೆಗಳು ಇಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.