
ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ ಇರುವ ಹುದ್ದೆಗಳ ಪೈಕಿ ಶೇ 10 ಹುದ್ದೆಗಳನ್ನು ಮಹಿಳೆಯರಿಗೆ ಮೀಸಲಿಟ್ಟು ರಾಜ್ಯ ಸರ್ಕಾರ ಇತ್ತೀಚೆಗೆ ಆದೇಶ ಹೊರಡಿಸಿದೆ.
ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ ನೀಡುವ ಉದ್ದೇಶದಿಂದ ಅಗ್ನಿಶಾಮಕ ಹಾಗೂ ತುರ್ತು ಸೇವಾ ಇಲಾಖೆಯಲ್ಲಿರುವ ಹುದ್ದೆಗಳಿಗೆ ಮರು ನಾಮಕರಣ ಮಾಡಲಾಗಿದೆ.
ವೃಂದ ಮತ್ತು ನೇಮಕಾತಿ ನಿಯಮಗಳ ಪ್ರಕಾರ ‘ಫೈರ್‌ಮನ್’ ಮತ್ತು ‘ಲೀಡಿಂಗ್ ಫೈರ್‌ಮನ್’ ಎಂಬ ಹುದ್ದೆಗಳು ಇದ್ದವು. ಆ ಹುದ್ದೆಗಳ ಪದನಾಮವನ್ನು ‘ಫೈರ್‌ಫೈಟರ್’ ಮತ್ತು ‘ಲೀಡಿಂಗ್ ಫೈರ್‌ಫೈಟರ್’ ಎಂದು ಬದಲಾವಣೆ ಮಾಡಿ ರಾಜ್ಯ ಸರ್ಕಾರವು ಆದೇಶಿಸಿದೆ.
ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯು 1964ರಿಂದ ಕಾರ್ಯ ನಿರ್ವಹಿಸುತ್ತಿದೆ. ಇಲಾಖೆಯಲ್ಲಿ ಮಹಿಳೆಯರ ನೇಮಕಾತಿ ಇದುವರೆಗೂ ನಡೆದಿರಲಿಲ್ಲ. ಇಲಾಖೆಯ ನೇಮಕಾತಿ ವೇಳೆ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಬೇಕು ಎಂದು ಹೋರಾಟಗಳು ನಡೆದಿದ್ದವು. ಆ ಹೋರಾಟಗಳಿಗೆ ಇದೀಗ ಸ್ಪಂದನೆ ಸಿಕ್ಕಿದೆ.
ಅಗ್ನಿ ಅವಘಡ, ಪ್ರಕೃತಿ ವಿಕೋಪ, ನೆರೆ ಹಾವಳಿ, ಜಾನುವಾರುಗಳ ರಕ್ಷಣೆ, ವಿವಿಧ ಕಟ್ಟಡಗಳಲ್ಲಿ ಅಗ್ನಿ ದುರಂತದ ಸಂದರ್ಭದಲ್ಲಿ ಗಾಯಗೊಂಡ ಮಹಿಳೆಯರ ರಕ್ಷಣೆ, ಆಸ್ಪತ್ರೆಗೆ ದಾಖಲಿಸುವ ಕೆಲಸವನ್ನು ಪುರುಷ ಸಿಬ್ಬಂದಿ ನಿರ್ವಹಿಸುತ್ತಿದ್ದರು. ತೀವ್ರ ಗಾಯಗೊಂಡ ಹಾಗೂ ಅಸ್ವಸ್ಥ ಮಹಿಳೆಯರನ್ನು ಆಸ್ಪತ್ರೆಗೆ ದಾಖಲಿಸಲು ಮಹಿಳೆ ಸಿಬ್ಬಂದಿಯ ಅಗತ್ಯವಿತ್ತು. ನೇಮಕಾತಿಯಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಲಾಗಿದೆ ಎಂದು ಇಲಾಖೆಯ ಅಧಿಕಾರಿಗಳು ಹೇಳಿದರು.
ಇಲಾಖೆಗೆ ಒಟ್ಟು 7,159 ಹುದ್ದೆಗಳು ಮಂಜೂರಾಗಿದ್ದು, ಆ ಪೈಕಿ 5,272 ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಉಳಿದ ಹುದ್ದೆಗಳು ಖಾಲಿಯಿವೆ. ಇವುಗಳ ಪೈಕಿ ಅಗ್ನಿಶಾಮಕ ಮತ್ತು ಅಗ್ನಿಶಾಮಕ ಠಾಣಾಧಿಕಾರಿ ಹುದ್ದೆಗಳ ನೇರ ನೇಮಕಾತಿಯಲ್ಲಿ ಶೇ 10 ಮಹಿಳಾ ಅಭ್ಯರ್ಥಿಗಳಿಗೆ ಮೀಸಲಿರಿಸಿ ಆದೇಶ ಹೊರಡಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.