ADVERTISEMENT

‘ಸರ್ವೆ ಅಧಿಕಾರ ತಹಶೀಲ್ದಾರ್‌ಗಿದೆ’

ಮುನಿಸಿಪಲ್‌ ಕಾರ್ಪೊರೇಷನ್‌ ವ್ಯಾಪ್ತಿಯ ಜಮೀನು

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2022, 21:18 IST
Last Updated 18 ಮಾರ್ಚ್ 2022, 21:18 IST
   

ಬೆಂಗಳೂರು: ‘ಕರ್ನಾಟಕ ಭೂ ಕಂದಾಯ ಕಾಯ್ದೆ-1964ರ ಕಲಂ 140 (2)ರ ಅಡಿಯಲ್ಲಿ ಮುನಿಸಿಪಲ್‌ ಕಾರ್ಪೊರೇಷನ್‌ ವ್ಯಾಪ್ತಿಯಲ್ಲಿ ವ್ಯಾಜ್ಯದಲ್ಲಿರುವ ಜಮೀನುಗಳ ಸಮೀಕ್ಷೆ ನಡೆಸುವ ಹಾಗೂ ಗಡಿ ಮತ್ತು ಗುರುತಿಸುವ ಅಧಿಕಾರ ತಹಶೀಲ್ದಾರ್‌ಗೆ ಇದೆ’ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ಈ ಕುರಿತು ಏಕಸದಸ್ಯ ನ್ಯಾಯಪೀಠದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು, ನ್ಯಾಯಮೂರ್ತಿ ಅಲೋಕ್ ಅರಾಧೆ ಹಾಗೂ ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ನ್ಯಾಯಪೀಠ ಪುರಸ್ಕರಿಸಿದೆ.

‘ಸಮೀಕ್ಷೆ ಸಮಯದಲ್ಲಿ ಜಾಗದ ಗಡಿಯ ಸರ್ವೇ ನಂಬರ್‌ ಅಥವಾ ಉಪವಿಭಾಗದ ಸರ್ವೆ ನಂಬರ್ ಕುರಿತಂತೆ ಏನಾದರೂ ವ್ಯಾಜ್ಯ ಉದ್ಭವಿಸಿದಲ್ಲಿ ಸರ್ವೇ ಅಧಿಕಾರಿಯು ಜಮೀನಿನ ದಾಖಲೆಗಳ ಅನುಸಾರ ವಿಚಾರಣೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ. ಹೀಗಾಗಿ, ಭೂ ಕಂದಾಯ ಕಾಯ್ದೆ–1964ರ ಕಲಂ 140 (2)ರ ಅಡಿಯಲ್ಲಿ ತಹಶೀಲ್ದಾರ್ ಅವರು ಜಮೀನಿನ ಸಮೀಕ್ಷೆ ನಡೆಸಿ ಸರ್ವೆ ನಂಬರ್ ಅಥವಾ ಗಡಿಯನ್ನು ನಿರ್ಧರಿಸುವ ಅಧಿಕಾರವನ್ನು ಹೊಂದಿದ್ದಾರೆ’ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ADVERTISEMENT

‘ಸರ್ವೆ ಸಂಖ್ಯೆ ಅಥವಾ ಜಮೀನು ಮುನಿಸಿಪಲ್‌ ಕಾರ್ಪೊರೇಷನ್‌ ವ್ಯಾಪ್ತಿಯಲ್ಲಿದೆಯೇ ಅಥವಾ ಅದರ ಮಿತಿಯಿಂದ ಹೊರಗಿದೆಯೇ ಎಂಬ ಅಂಶವನ್ನು ಪರಿಗಣಿಸದೆಯೇ ತಹಶೀಲ್ದಾರ್ ತನ್ನ ಅಧಿಕಾರ ಚಲಾಯಿಸಿ ಗಡಿ ಗುರುತಿಸಬಹುದು’ ಎಂದು ನ್ಯಾಯಪೀಠ ಹೇಳಿದೆ.

‘ಭೂ ಕಂದಾಯ ಕಾಯ್ದೆ–1964ರ ಕಲಂ 2 (12) ಮತ್ತು 2 (32)ರಲ್ಲಿ ಬಳಸಲಾದ 'ಹಿಡುವಳಿ' ಮತ್ತು 'ಸರ್ವೇ ನಂಬರ್'ನಂತಹ ಅಭಿವ್ಯಕ್ತಿಗಳನ್ನು ಕಲಂ 140ರ ಜೊತೆಯಲ್ಲಿಯೇ ಪರಿಗಣಿಸಬೇಕು’ ಎಂದು ನ್ಯಾಯಪೀಠ ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.