ಬೆಂಗಳೂರು: ಜಾನಪದದ ಮಹಾಪ್ರಯಾಣದಲ್ಲಿ ಕಲಾವಿದರು ಹಾಗೂ ವಿದ್ವಾಂಸರು ಜೋಡೆತ್ತುಗಳಂತೆ ನಡೆದುಕೊಂಡು ಹೋಗಬೇಕು ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ತಿಳಿಸಿದರು.
ಬೆಂಗಳೂರಿನ ಕೆ.ನಾರಾಯಣಪುರದಲ್ಲಿರುವ ಕ್ರಿಸ್ತು ಜಯಂತಿ ಕಾಲೇಜಿನಲ್ಲಿ ಕನ್ನಡ ವಿಭಾಗದ ವತಿಯಿಂದ ಕರ್ನಾಟಕ ಜಾನಪದ ಅಕಾಡೆಮಿ ಹಾಗೂ ಅಮೆರಿಕದ ಕನ್ನಡ ಸಾಹಿತ್ಯ ರಂಗದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ಕನ್ನಡ ಶಿಷ್ಟ ಪರಂಪರೆ ಮತ್ತು ಜಾನಪದ ಲೋಕ’ ಅಂತರರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
‘ಇಂದು ರಿಯಾಲಿಟಿ ಅಲ್ಲದ ರಿಯಾಲಿಟಿ ಹೆಸರಿನ ಶೋಗಳು ನಮ್ಮನ್ನು ದಿಕ್ಕು ತಪ್ಪಿಸುತ್ತಿವೆ. ಸಂಬಂಧಗಳು ನುಚ್ಚುನೂರಾಗುತ್ತಿವೆ. ಇದರ ನಡುವೆ ಸತ್ಯದ ಸೋಗಿನ ಸುಳ್ಳುಗಳು, ಥಳುಕು ಬಳುಕುಗಳು, ನಯವಂಚಕತನಗಳು ಮೆರೆದಾಡುತ್ತಿವೆ. ಸತ್ಯವನ್ನು, ಸಮತೆಯನ್ನು, ಜೀವಪರತೆಯನ್ನು ಜನಪರತೆಯನ್ನು ಬುಲ್ಡೋಜ್ ಮಾಡುವಂಥ ದುರಂತ ಕಾಲದಲ್ಲಿ ನಾವಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ರಂಗದ ಆಡಳಿತ ಮಂಡಳಿಯ ಅಧ್ಯಕ್ಷ ಮೈ.ಶ್ರೀ. ನಟರಾಜ್ ಅವರು ಅಮೆರಿಕದ ಡಲ್ಲಾಸ್‍ನಿಂದ ಆನ್‌ಲೈನ್ ಪ್ಲಾಟ್‌ಫಾರ್ಮ್ ಮೂಲಕ ಮಾತನಾಡಿ, ‘ಜಾನಪದವೆಂಬುದು ಜಗದಗಲ. ಅಮೆರಿಕದ ಮೂಲನಿವಾಸಿಗಳು ಮತ್ತು ಬುಡಕಟ್ಟು ಜನಾಂಗಗಳು ಎದುರಿಸಿದ ಸಮಸ್ಯೆಗಳು, ಸವಾಲುಗಳು ಬೇರೆಯಲ್ಲ. ಭಾರತದ ಆದಿವಾಸಿಗಳ ಸಮಸ್ಯೆ ಮತ್ತು ಸವಾಲುಗಳು ಬೇರೆಯಲ್ಲ. ತುಲನೆ ಮಾಡಿ ನೋಡಿದಾಗ ವಿವಿಧ ದೇಶಗಳ ಮೂಲನಿವಾಸಿಗಳ ಸಂಗ್ರಾಮದಲ್ಲಿ ಸಾಮ್ಯವಿದೆ’ ಎಂದು ಹೇಳಿದರು.
ಪ್ರಧಾನಗೋಷ್ಠಿಯಲ್ಲಿ ಕನ್ನಡ ಪ್ರಾಧ್ಯಾಪಕ ಡಿ.ಕೆ.ಚಿತ್ತಯ್ಯ ಪೂಜಾರ್ ವಿಚಾರ ಮಂಡನೆ ಮಾಡಿದರು. ‘ಜಾನಪದ-ಶಿಷ್ಟ ಕಲಾಜಗತ್ತು ಮತ್ತು ಸ್ತ್ರೀ ಅಭಿವ್ಯಕ್ತಿ’ ಕುರಿತು ಜನಪದ ವಿದ್ವಾಂಸೆ ಸುಜಾತ ಅಕ್ಕಿ ವಿಚಾರ ಮಂಡಿಸಿದರು.‘ಜಾನಪದ ವಿಶ್ವಪಥ’ ಎರಡು ಸಂಪುಟಗಳನ್ನು ಬಿಡುಗಡೆ ಮಾಡಲಾಯಿತು.
ಮುಖವೀಣೆ ಕಲಾವಿದ ಮುಖವೀಣೆ ಆಂಜಿನಪ್ಪ ಅವರು ಏಕಕಾಲದಲ್ಲಿ ಹಲವು ವಾದ್ಯಗಳನ್ನು ನುಡಿಸುವ ಮೂಲಕ ನಾದಪ್ರದರ್ಶನ ನೀಡಿದರು. ಹಾಡುಗಾರ ಗಂಗಣ್ಣ ಅವರು ಮಂಟೇಸ್ವಾಮಿ ಹಾಗೂ ಜಾನಪದ ಹಾಡುಗಳನ್ನು ಪ್ರಸ್ತುತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.