ADVERTISEMENT

7,069 ಗ್ರಾಮಗಳಲ್ಲಿ ಸ್ಮಶಾನ ಇಲ್ಲ: ಕಂದಾಯ ಸಚಿವ ಆರ್. ಅಶೋಕ

ಅಗತ್ಯ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2021, 22:08 IST
Last Updated 10 ಮಾರ್ಚ್ 2021, 22:08 IST
ಕಂದಾಯ ಸಚಿವ ಆರ್. ಅಶೋಕ
ಕಂದಾಯ ಸಚಿವ ಆರ್. ಅಶೋಕ   

ಬೆಂಗಳೂರು: ‘ರಾಜ್ಯದ ಒಟ್ಟು 7,069 ಗ್ರಾಮಗಳಲ್ಲಿ ಸ್ಮಶಾನ ಇಲ್ಲ. ಪ್ರತಿ ಗ್ರಾಮದಲ್ಲಿಯೂ ಸ್ಮಶಾನ ಇರುವಂತೆ ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ’ ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದರು.

ವಿಧಾನ ಪರಿಷತ್‌ನಲ್ಲಿ ಬಿಜೆಪಿಯ ತಳವಾರ ಸಾಬಣ್ಣ, ‘ಶಹಾಬಾದ ತಾಲ್ಲೂಕಿನ ಭಂಕೂರು ಗ್ರಾಮದಲ್ಲಿ ಸ್ಮಶಾನ ಇಲ್ಲ. ಶವಸಂಸ್ಕಾರಕ್ಕೆ ಜಾಗ ಇಲ್ಲದೆ ಸ್ಥಳೀಯರು ದೇಹದಾನ ಮಾಡುತ್ತಿದ್ದಾರೆ’ ಎಂದಾಗ ಉತ್ತರಿಸಿದ ಸಚಿವರು, ‘ಭಂಕೂರು ಗ್ರಾಮದಲ್ಲಿ 23 ಎಕರೆ ಸರ್ಕಾರಿ ಜಮೀನಿದೆ. ಆದರೆ, ಈ ಭೂಮಿ ಜವಳು ಇರುವ ಕಾರಣ ಸ್ಮಶಾನಕ್ಕೆ ಬಳಸಲು ಸಾಧ್ಯವಿಲ್ಲ. ಸ್ಥಳೀಯವಾಗಿ 4 ಎಕರೆ ಜಮೀನು ಖರೀದಿ ಪ್ರಕ್ರಿಯೆ ನಡೆಯುತ್ತಿದೆ’ ಎಂದರು.

‘ಪ್ರತಿ ಹಳ್ಳಿಯಲ್ಲೂ ಸ್ಮಶಾನ ಇರಬೇಕು. ಇದು ಸರ್ಕಾರದ ಆದ್ಯತೆ. ಸ್ಮಶಾನಕ್ಕೆ ಜಮೀನು ಒದಗಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೇರಿದಂತೆ ಜಿಲ್ಲಾ ಹಂತದಲ್ಲಿ ನಿರ್ಧಾರ ತೆಗೆದುಕೊಳ್ಳಲು ಸೂಚಿಸಿದ್ದೇನೆ’ ಎಂದರು.

ADVERTISEMENT

ಭೂ ಗೊಂದಲ ಸರಿಪಡಿಸಲು ಸಮಿತಿ: ‘ಕುಮ್ಕಿ, ಜಮ್ಮಾಬಾಣೆ ಸೇರಿದಂತೆ ರಾಜ್ಯದ ವಿವಿಧ ಭಾಗದಲ್ಲಿ ಈ ರೀತಿಯ ಭೂ ಗೊಂದಲಗಳಿದ್ದು, ಜಮೀನಿನ ಮಾಲೀಕತ್ವ, ಕಾನೂನಾತ್ಮಕ ಪರಿಹಾರಕ್ಕೆ ಸಮಿತಿ ರಚಿಸಲಾಗುವುದು’ ಎಂದು ಸಚಿವ ಆರ್. ಅಶೋಕ ಹೇಳಿದರು.

ಕೊಡಗು ಜಿಲ್ಲೆಯ ಜಮ್ಮಾ ಬಾಣೆಯ ಪಹಣಿಯಲ್ಲಿರುವ ಕುಟುಂಬದ ಮುಖ್ಯಸ್ಥ (ಪಟ್ಟೇದಾರರ) ತೆಗೆದು ಹಾಕುವ ಕುರಿತು ಕಾಂಗ್ರೆಸ್‌ನ ವೀಣಾ ಅಚ್ಚಯ್ಯ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಪಟ್ಟೇದಾರರ ಮಕ್ಕಳಿಗೆ ಜಮೀನು ನೀಡುವ ಸಂಬಂಧ ಕ್ರಮ ತೆಗೆದುಕೊಳ್ಳಲಾಗುತ್ತಿದೆ’ ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವೀಣಾ ಅಚ್ಚಯ್ಯ, ‘ಪಟ್ಟೇದಾರರ ಮಕ್ಕಳಿಗೆ ಜಮೀನು ವರ್ಗಾವಣೆಯಾದರೆ, ಒಂದು ಕುಟುಂಬದಲ್ಲಿ 100ರಿಂದ 200ರವರೆಗೆ ಮನೆತನ ಇರುತ್ತದೆ. ಅವರೆಲ್ಲರಿಗೂ ಅನ್ಯಾಯವಾಗುತ್ತದೆ. ಈ ಕ್ರಮ ಬದಲಾಗಬೇಕು. ಜಮ್ಮಾ ಬಾಣೆ ಜಮೀನು ನಮ್ಮ ಹೆಗ್ಗಳಿಕೆ. ಸರ್ಕಾರದಿಂದ ನಮಗೆ ಭೂಮಿ ಬೇಕಾಗಿಲ್ಲ. ವ್ಯವಸ್ಥೆ ಸರಿಪಡಿಸಬೇಕು’ ಎಂದು ಮನವಿ ಮಾಡಿದರು.

ಆಗ ಸಚಿವರು, ‘ರಾಜ್ಯದಾದ್ಯಂತ ಬೇರೆ ಬೇರೆ ಹೆಸರಿನಲ್ಲಿ ಈ ರೀತಿಯ ಸಮಸ್ಯೆಯಿದೆ. ರೈತರಿಗೆ ಅಥವಾ ಉಳುಮೆ ಮಾಡುವವರಿಗೆ ಭೂಮಿಯ ಹಕ್ಕು ನೀಡುವ ಸಂಬಂಧ ಸಮಿತಿ ರಚಿಸಿ, ಕಾನೂನಾತ್ಮಕವಾಗಿ ಪರಿಹಾರ ಒದಗಿಸಲಾಗುವುದು’ ಎಂದು ಭರವಸೆ ನೀಡಿದರು.

ರೈತರ ನೆರವಿಗೆ ಸಿದ್ಧ
‘ರೈತರ ನೆರವಿಗೆ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲು ಸರ್ಕಾರ ಸಿದ್ಧವಿದೆ. ಆತ್ಮಹತ್ಯೆಗೆ ಶರಣಾದ ರೈತ ಕುಟುಂಬಕ್ಕೆ ಪರಿಹಾರ ನೀಡಲಾಗಿದೆ. ರೈತರು ಆತ್ಮಹತ್ಯೆಯಂಥ ಪ್ರಯತ್ನಕ್ಕೆ ಕೈ ಹಾಕಬಾರದು’ ಎಂದು ಆರ್. ಅಶೋಕ ಮನವಿ ಮಾಡಿದರು.

ಕಾಂಗ್ರೆಸ್‌ನ ಡಾ. ಚಂದ್ರಶೇಖರ್ ಪಾಟೀಲ ಕಲ್ಯಾಣ ಕರ್ನಾಟಕ ಭಾಗದಲ್ಲಿ ಆತ್ಯಹತ್ಯೆ ಮಾಡಿಕೊಂಡ ರೈತರ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಶೋಕ, ‘ಈ ಭಾಗದ ಬಳ್ಳಾರಿ (64), ಬೀದರ್ (100), ರಾಯಚೂರು (10), ಯಾದಗಿರಿ (21), ಕಲಬುರ್ಗಿ (62), ಕೊಪ್ಪಳ (109) ಜಿಲ್ಲೆಗಳಲ್ಲಿ ಮೂರು ವರ್ಷಗಳಲ್ಲಿ 366 ಆತ್ಮಹತ್ಯೆ ನಡೆದಿದೆ. ಇದರಲ್ಲಿ 357 ರೈತ ಕುಟುಂಬಗಳಿಗೆ ಪರಿಹಾರ ನೀಡಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.