
ಬೆಂಗಳೂರು: ‘ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಅಕ್ರಮ ನಡೆದಿದ್ದು, ಮರು ಚುನಾವಣೆ ನಡೆಸಬೇಕು’ ಎಂದು ಪರಾಜಿತ ಅಭ್ಯರ್ಥಿ ನಿರ್ಮಲಾ ಸಿ.ಎಲಿಗಾರ್ ಆಗ್ರಹಿಸಿದರು.
ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮತ ಎಣಿಕೆ ಸಂದರ್ಭದಲ್ಲಿ ಚುನಾವಣಾ ಅಧಿಕಾರಿ ತಾರತಮ್ಯ ನೀತಿ ಅನುಸರಿಸಿದ್ದಾರೆ. ಪೊಲೀಸ್ ಇಲಾಖೆ ಸಿಬ್ಬಂದಿಯ ನಡವಳಿಕೆ ಬಗ್ಗೆ ಅನೇಕ ಸಂಶಯಗಳು ಹುಟ್ಟಿಕೊಂಡಿವೆ. ಮತದಾನದ ನಂತರ ಸಂಜೆ 5.45ರವರೆಗೆ ಪೊಲೀಸರ ರಕ್ಷಣೆಯಲ್ಲಿ ಚುನಾವಣಾ ಅಧಿಕಾರಿಯೊಬ್ಬರೇ ಕೊಠಡಿಗೆ ಬೀಗ ಹಾಕಿಕೊಂಡು ಯಾರನ್ನೂ ಕರೆಯದೇ ಮತದಾನದ ಲಕೋಟೆಗಳನ್ನು ತೆರೆದಿದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.
‘ಕಾರ್ಯಕಾರಿಣಿ ಸಭೆಯನ್ನು ಕರೆಯದೇ ಚುನಾವಣಾ ಅಧಿಕಾರಿಯನ್ನು ನೇಮಿಸಿದ್ದು, ಪರಿಷ್ಕೃತ ಮತದಾನ ಪಟ್ಟಿಯನ್ನು ಮೂರು ತಿಂಗಳ ಮೊದಲೇ ಪ್ರಕಟಿಸದೇ ಇರುವುದು ಸಂಘದ ಬೈಲಾಗೆ ವಿರುದ್ಧವಾಗಿದೆ. ಪೂರ್ವ ಸಿದ್ಧತೆ ಇಲ್ಲದೇ ಚುನಾವಣೆಯ ವೇಳಾ ಪಟ್ಟಿಯನ್ನು ಪ್ರಕಟಿಸಿದ್ದು, ಅನೇಕ ಸಂಶಯಗಳಿಗೆ ಕಾರಣವಾಗಿದೆ. ಬೆಂಗಳೂರಿನ ಮತದಾರರಿಗೆ ಮಾತ್ರ ಗುರುತಿನ ಚೀಟಿ ಕಡ್ಡಾಯಗೊಳಿಸಲಾಗಿದೆ. ಆದರೆ ಅಂಚೆ ಮೂಲಕ ಮತದಾನ ಮಾಡುವ ಸದಸ್ಯರಿಗೆ ಯಾವುದೇ ಗುರುತಿನ ಚೀಟಿ ಕುರಿತು ಉಲ್ಲೇಖಿಸಿಲ್ಲ’ ಎಂದು ಆರೋಪಿಸಿದರು.
‘ಬೆಂಗಳೂರಿನಲ್ಲಿ ನಡೆದ ಮತದಾನದಲ್ಲಿ ಇಬ್ಬರು ಸ್ಪರ್ಧಿಗಳು ಪಡೆದ ಮತಗಳು ಸಮವಾಗಿದ್ದು, ಅಂಚೆ ಮೂಲಕ ಬಂದ ಮತಗಳ ಏಣಿಕೆ ಕುರಿತು ಅನುಮಾನವಿದೆ. ಈ ಬಗ್ಗೆ ತನಿಖೆ ನಡೆಸಬೇಕು. ಸಿಸಿಟಿವಿ ಕ್ಯಾಮೆರಾ ಅಳವಡಿಸದೇ ಮತದಾನ ಪ್ರಕ್ರಿಯೆ ನಡೆಸಲಾಗಿದೆ. ಇದರಿಂದ ಹಲವು ಅನುಮಾನಗಳು ಹುಟ್ಟಿಕೊಳ್ಳುತ್ತಿವೆ. ನ್ಯಾಯಬದ್ಧವಾಗಿ ನಡೆಯದ ಚುನಾವಣೆ ಹಾಗೂ ಫಲಿತಾಂಶಕ್ಕೆ ಯಾವುದೇ ಅರ್ಥವಿಲ್ಲ. ಆದ್ದರಿಂದ ಮರು ಚುನಾವಣೆ ನಡೆಸಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.