ADVERTISEMENT

ಏಕಗವಾಕ್ಷಿ ಯೋಜನೆ: ಪೂರೈಕೆಯಾದ ಹಳೆ ಪುಸ್ತಕಗಳ ತನಿಖೆ

2024ರಲ್ಲಿ ಸರಬರಾಜಾದ 2020ರ ಆಯ್ದ ಪುಸ್ತಕಗಳ ಅಳತೆ, ಬೆಲೆ ಬಗ್ಗೆ ದೂರು *ಸಾರ್ವಜನಿಕ ಗ್ರಂಥಾಲಯ ಇಲಾಖೆ ನಡೆಗೆ ಪ್ರಕಾಶಕರ ಅಸಮಾಧಾನ

ವರುಣ ಹೆಗಡೆ
Published 15 ಫೆಬ್ರುವರಿ 2026, 23:30 IST
Last Updated 15 ಫೆಬ್ರುವರಿ 2026, 23:30 IST
ಬೆಂಗಳೂರು ಕೇಂದ್ರ ಗ್ರಂಥಾಲಯ
ಬೆಂಗಳೂರು ಕೇಂದ್ರ ಗ್ರಂಥಾಲಯ   

ಬೆಂಗಳೂರು: ಏಕಗವಾಕ್ಷಿ ಯೋಜನೆಯಡಿ ಆಯ್ಕೆಯಾದ 2020ರ ಪುಸ್ತಕಗಳನ್ನು 2024ರಲ್ಲಿ ಗ್ರಂಥಾಲಯಗಳಿಗೆ ಖರೀದಿಸಿದ್ದ ಸಾರ್ವಜನಿಕ ಗ್ರಂಥಾಲಯ ಇಲಾಖೆ, ಎರಡು ವರ್ಷಗಳ ಬಳಿಕ ಆಯ್ದ ಪುಸ್ತಕಗಳ ಬೆಲೆ ಹಾಗೂ ಅಳತೆಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಮುಂದಾಗಿದೆ.

ಇಲಾಖೆ ರಚಿಸಿದ ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿಯೇ ಆಯ್ಕೆ ಮಾಡಿರುವ ಪುಸ್ತಕಗಳನ್ನು, ಪ್ರಕಾಶಕರು ಇಲಾಖೆ ಆದೇಶದ ಅನುಸಾರ ಜಿಲ್ಲಾ ಹಾಗೂ ನಗರ ಕೇಂದ್ರ ಗ್ರಂಥಾಲಯಗಳಿಗೆ ಸರಬರಾಜು ಮಾಡುತ್ತಾರೆ. ಹೀಗೆ ಪೂರೈಸಿದ ಪುಸ್ತಕಗಳನ್ನು ಗ್ರಂಥಪಾಲಕರು ಶೀರ್ಷಿಕೆ, ಪುಟ, ಅಳತೆ ಹಾಗೂ ಬೆಲೆಯನ್ನು ಪರಿಶೀಲಿಸಿಯೇ ಸ್ವೀಕರಿಸಬೇಕಿದೆ. ಆದ್ದರಿಂದ ಅಳತೆ ಹಾಗೂ ಬೆಲೆಯ ವಿಚಾರವಾಗಿ ಈಗ ತನಿಖೆ ಕೈಗೊಂಡಿರುವುದು ಪ್ರಕಾಶಕರ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. 

ಸೃಷ್ಟಿ ನಾಗೇಶ್ ಅವರ ಸೃಷ್ಟಿ ಪಬ್ಲಿಕೇಷನ್ಸ್ ಮತ್ತು ಆಶಾ ನಾಗೇಶ್ ಅವರ ದೇಸಿ ಪುಸ್ತಕ ಸಂಸ್ಥೆಗಳ ಪುಸ್ತಕಗಳಿಗೆ ಸಂಬಂಧಿಸಿದಂತೆ ಇಲಾಖೆ ತನಿಖೆಗೆ ಆದೇಶ ಹೊರಡಿಸಿದೆ. 2020ರ ಪುಸ್ತಕ ಆಯ್ಕೆ ಪಟ್ಟಿಯಲ್ಲಿ ಈ ಸಂಸ್ಥೆಗಳ 20ಕ್ಕೂ ಅಧಿಕ ವಿವಿಧ ಶೀರ್ಷಿಕೆಗಳ ಪುಸ್ತಕಗಳು ಆಯ್ಕೆಯಾಗಿದ್ದವು. 

ADVERTISEMENT

‘ಇಲಾಖೆಯು ಪುಸ್ತಕದ ಅಳತೆ ಮತ್ತು ಕಾಗದದ ಗುಣಮಟ್ಟದ ಆಧಾರದ ಮೇಲೆ ದರ ನಿಗದಿಪಡಿಸಿ ಖರೀದಿ ಮಾಡುತ್ತಿದೆ. ಎರಡೂ ಪ್ರಕಾಶನ ಸಂಸ್ಥೆಗಳ ಆಯ್ಕೆಯಾದ ಪುಸ್ತಕಗಳ ಅಳತೆ ‘1/4 ಕ್ರೌನ್’ ಎಂದು ನಮೂದಿಸಲಾಗಿದೆ. ಆದರೆ, ಇದಕ್ಕಿಂತ ಕಡಿಮೆ ಅಳತೆಯ ಪುಸ್ತಕಕ್ಕೂ ‘1/4 ಕ್ರೌನ್‌’ ಎಂದು ತಪ್ಪು ಮಾಹಿತಿ ನಮೂದಿಸಿರುವ ಬಗ್ಗೆ ದೂರು ಬಂದಿದೆ’ ಎಂದು ತನಿಖಾ ಆದೇಶದಲ್ಲಿ ಉಲ್ಲೇಖಿಸಿರುವ ಇಲಾಖೆ ಆಯುಕ್ತ ಬಸವರಾಜೇಂದ್ರ ಎಚ್., ‘ಪುಸ್ತಕಗಳನ್ನು ಹೆಚ್ಚಿನ ಬೆಲೆಗೆ ಖರೀದಿಸುವ ಜತೆಗೆ, ಅಗತ್ಯಕ್ಕಿಂತ ಹೆಚ್ಚುವರಿ ಪುಸ್ತಕಗಳ ಖರೀದಿಗೆ ನಿಗದಿತ ಸಂಸ್ಥೆಯ ಪ್ರಕಾಶಕರು ಒತ್ತಡ ಹೇರಿರುತ್ತಾರೆ ಎಂಬ ಬಗ್ಗೆ ದೂರು ಸಲ್ಲಿಕೆಯಾಗಿದೆ’ ಎಂದಿದ್ದಾರೆ. 

ತಂಡ ರಚನೆ:

ಈ ದೂರಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಇಲಾಖೆಯ ಅಧಿಕಾರಿಗಳನ್ನೊಳಗೊಂಡ 16 ಜಿಲ್ಲಾವಾರು ತಂಡಗಳನ್ನು ಆಯುಕ್ತರು ರಚಿಸಿದ್ದಾರೆ. 2025ರ ನವೆಂಬರ್‌ನಲ್ಲಿಯೂ ಆಯುಕ್ತರ ಕಚೇರಿಯಿಂದ ಎರಡೂ ಸಂಸ್ಥೆಗಳ ಪುಸ್ತಕಗಳ ಖರೀದಿಗೆ ಸಂಬಂಧಿಸಿದಂತೆ ಸುತ್ತೋಲೆ ಹೊರಡಿಸಲಾಗಿತ್ತು. 2018ರಿಂದ 2020ವರೆಗೆ ಯೋಜನೆಯಡಿ ಆಯ್ಕೆಯಾದ ಈ ಸಂಸ್ಥೆಗಳ ಪುಸ್ತಕಗಳ ವಿವರ ಹಾಗೂ 2020–21ರಿಂದ 2022–23ನೇ ಸಾಲಿನವರೆಗೆ ಖರೀದಿಸಿದ ಪುಸ್ತಕಗಳ ಮಾಹಿತಿ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಈ ವರ್ಷ ಫೆ.3ರಂದು ತನಿಖೆಗೆ ಆದೇಶ ಹೊರಡಿಸಿದ್ದ ಆಯುಕ್ತರು, ಕಂದಾಯ ವಿಭಾಗವಾರು ನಾಲ್ಕು ತನಿಖಾ ತಂಡಗಳನ್ನು ರಚಿಸಿದ್ದರು. ಫೆ.9ರಂದು ಮತ್ತೊಂದು ಆದೇಶ ಹೊರಡಿಸಿದ ಅವರು, ಜಿಲ್ಲಾ ಹಾಗೂ ನಗರ ಕೇಂದ್ರ ಗ್ರಂಥಾಲಯ ಅನುಸಾರ ತನಿಖಾ ತಂಡ ರಚಿಸಿದ್ದಾರೆ. 

‘ಇಲಾಖೆಯ ಏಕಗವಾಕ್ಷಿ ಯೋಜನೆಯಡಿ ಖರೀದಿಸಲಾದ 2020ನೇ ಸಾಲಿನ ಪುಸ್ತಕಗಳ ಹಣ ಪೂರ್ಣ ಪ್ರಮಾಣದಲ್ಲಿ ಇನ್ನೂ ಪಾವತಿಯಾಗಿಲ್ಲ. ಮುಂದಿನ ಸಾಲಿನ ಪುಸ್ತಕಗಳನ್ನು ಖರೀದಿಸದೆ, ಯೋಜನೆಯನ್ನು ಸ್ಥಗಿತ ಮಾಡಲಾಗಿದೆ. ಈ ಬಗ್ಗೆ ಪ್ರಶ್ನಿಸಿಬಾರದು ಎಂಬ ಕಾರಣಕ್ಕೆ ಈ ರೀತಿ ತನಿಖೆಯ ಆದೇಶ ಹೊರಡಿಸಲಾಗುತ್ತಿದೆ’ ಎಂದು ಪ್ರಕಾಶಕರು ಅಸಮಾಧಾನ ವ್ಯಕ್ತಪಡಿಸಿದರು.

ಅಭಿನವ ರವಿಕುಮಾರ್
ಸೃಷ್ಟಿ ನಾಗೇಶ್
ಓದುಗರಿಗೆ ಪುಸ್ತಕ ತಲುಪಿಸುವುದು ಇಲಾಖೆಯ ಆದ್ಯತೆಯಾಗಬೇಕು. ಒಬ್ಬ ವ್ಯಕ್ತಿಯನ್ನು ಗುರಿಯಾಗಿಸಿ ತನಿಖೆ ಮಾಡುವುದು ಸರಿಯಲ್ಲ. ಅವ್ಯವಹಾರ ನಡೆದಿದ್ದಲ್ಲಿ ತನಿಖೆ ಮಾಡಲಿ
ಅಭಿನವ ರವಿಕುಮಾರ್ ಕರ್ನಾಟಕ ಪ್ರಕಾಶಕರ ಸಂಘದ ಕಾರ್ಯದರ್ಶಿ

‘15 ದಿನಗಳೊಳಗೆ ವರದಿ’‌‌

‘ಸೃಷ್ಟಿ ಹಾಗೂ ದೇಸಿ ಪ್ರಕಾಶನ ಸಂಸ್ಥೆಗಳು ಯೋಜನೆಯಡಿ 2020ರ ಆಯ್ಕೆಗೆ ಸಲ್ಲಿಸಿದ ಪುಸ್ತಕಗಳಲ್ಲಿ 2023–24ನೇ ಸಾಲಿನ ಆದೇಶದ ಅನ್ವಯ ಆಯ್ಕೆಯಾದ ಪುಸ್ತಕಗಳ ತಲಾ 300 ಪ್ರತಿಗಳನ್ನು ಖರೀದಿಸಲಾಗಿದೆ. ನಿಗದಿತ ಅಳತೆ ಹಾಗೂ ನಿಗದಿಪಡಿಸಿದ ದರಕ್ಕೆ ಅನುಗುಣವಾಗಿ ಸರಬರಾಜು ಮಾಡಲಾಗಿದೆಯೇ ಎಂಬ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿ 15 ದಿನಗಳೊಳಗೆ ವರದಿ ಸಲ್ಲಿಸಬೇಕು. ತನಿಖಾಧಿಕಾರಿಗಳು ಜಿಲ್ಲಾ ಹಾಗೂ ನಗರ ಕೇಂದ್ರ ಗ್ರಂಥಾಲಯಗಳ ಕಚೇರಿಗೆ ಖುದ್ದು ಭೇಟಿ ನೀಡಿ ದಾಖಲಾತಿ ಮತ್ತು ಪಾವತಿ ಮಾಡಿದ ಬಿಲ್‌ಗಳನ್ನು ಪರಿಶೀಲಿಸಿ ತನಿಖಾ ವರದಿ ಸಿದ್ಧಪಡಿಸಬೇಕು’ ಎಂದು ಇಲಾಖೆ ಆಯುಕ್ತ ಬಸವರಾಜೇಂದ್ರ ಎಚ್. ಅವರು ಆದೇಶದಲ್ಲಿ ತಿಳಿಸಿದ್ದಾರೆ.

‘ಧ್ವನಿ ಅಡಗಿಸುವ ಪ್ರಯತ್ನ’ 

‘ಯೋಜನೆಯಡಿ ಪುಸ್ತಕ ಖರೀದಿ ಪ್ರಕ್ರಿಯೆ ಮುಂದುವರಿಸುವಂತೆ ಹಾಗೂ ಪುಸ್ತಕೋದ್ಯಮದ ಸಮಸ್ಯೆಗಳ ಬಗ್ಗೆ ನಿರಂತರ ಹೋರಾಟ ಮಾಡುತ್ತಿರುವ ಕಾರಣ ತನಿಖೆಗೆ ಆದೇಶ ಮಾಡಲಾಗಿದೆ. ಇದು ಧ್ವನಿ ಅಡಗಿಸುವ ಪ್ರಯತ್ನವಾಗಿದೆ. ಇಲಾಖೆ ರಚಿಸಿದ ಸಮಿತಿಯೇ ಪುಸ್ತಕಗಳನ್ನು ಪರಿಶೀಲಿಸಿ ಆಯ್ಕೆ ಮಾಡಿದೆ. ಆ ಸಮಿತಿ ಲೇಖಕರು ಪ್ರಕಾಶಕರು ಮುದ್ರಕರನ್ನು ಒಳಗೊಂಡಿತ್ತು. ಇಲಾಖೆ ಆದೇಶದ ಅನುಸಾರವೇ ಪುಸ್ತಕಗಳನ್ನು ಸರಬರಾಜು ಮಾಡಲಾಗಿದೆ. ಹೀಗಿರುವಾಗ ಒತ್ತಡ ಹೇರುವಿಕೆ ಪುಸ್ತಕದ ಅಳತೆ ಹಾಗೂ ಬೆಲೆಗೆ ಸಂಬಂಧಿಸಿದಂತೆ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಪುಸ್ತಕದ ಪ್ರತಿಯೊಂದು ಪ್ರತಿಯಲ್ಲಿಯೂ ಅಗತ್ಯ ವಿವರ ಇರಲಿದೆ’ ಎಂದು ಸೃಷ್ಟಿ ನಾಗೇಶ್ ತಿಳಿಸಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.