ಬೆಂಗಳೂರು: ಕರ್ನಾಟಕ ನಾಟಕ ಅಕಾಡೆಮಿಯು 2025–26ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರಕಟಿಸಿದ್ದು, ‘ಜೀವಮಾನ ಸಾಧನೆ ಗೌರವ ಪ್ರಶಸ್ತಿ’ಗೆ ಕಲಾ ನಿರ್ದೇಶಕ ಶಶಿಧರ ಅಡಪ ಬಿ. ಆಯ್ಕೆಯಾಗಿದ್ದಾರೆ.
ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜ ಮೂರ್ತಿ ಅವರು ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ 34 ಮಂದಿ ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆ ಮಾಡಿದರು. ಈ ಸಾಲಿನ ವಾರ್ಷಿಕ ಪ್ರಶಸ್ತಿಗೆ 25 ಮಂದಿ ಭಾಜನರಾಗಿದ್ದಾರೆ. 2024–25ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದವರಲ್ಲಿ ನಟ ಪ್ರಕಾಶ್ ರಾಜ್ ಅವರು ಪ್ರಶಸ್ತಿ ನಿರಾಕರಿಸಿದ್ದರು. ಇದರಿಂದಾಗಿ ಬಾಕಿ ಉಳಿದಿದ್ದ ಕಳೆದ ಸಾಲಿನ ಒಂದು ವಾರ್ಷಿಕ ಪ್ರಶಸ್ತಿಗೆ ಕಲಾವಿದ ಶಂಕರ್ ಭಟ್ (ಉತ್ತರ ಕನ್ನಡ) ಅವರನ್ನು ಆಯ್ಕೆ ಮಾಡಲಾಗಿದೆ.
‘ಜೀವಮಾನ ಸಾಧನೆ ಪ್ರಶಸ್ತಿಯು ತಲಾ ₹50 ಸಾವಿರ ನಗದು ಹಾಗೂ ನಟರಾಜ ವಿಗ್ರಹ ಒಳಗೊಂಡಿದೆ. ವಾರ್ಷಿಕ ಪ್ರಶಸ್ತಿಯು ತಲಾ ₹25 ಸಾವಿರ ನಗದು ಹಾಗೂ ನಟರಾಜ ವಿಗ್ರಹ ಹೊಂದಿದೆ. ದತ್ತಿ ಪ್ರಶಸ್ತಿಗಳ ನಗದು ಬಹುಮಾನವನ್ನು ಈ ವರ್ಷದಿಂದ ₹5 ಸಾವಿರ ಹೆಚ್ಚಿಸಿದ್ದು, ಈ ಪ್ರಶಸ್ತಿಗಳು ತಲಾ ₹15 ಸಾವಿರ ನಗದು ಒಳಗೊಂಡಿವೆ’ ಎಂದು ನಾಗರಾಜ ಮೂರ್ತಿ ತಿಳಿಸಿದರು.
‘ಸೆಪ್ಟೆಂಬರ್ ತಿಂಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಸಲಾಗುತ್ತದೆ. ಸ್ಥಳ ಹಾಗೂ ದಿನಾಂಕ ನಿಗದಿಯಾಗಿಲ್ಲ’ ಎಂದು ಹೇಳಿದರು.
ಅಕಾಡೆಮಿ ರಿಜಿಸ್ಟ್ರಾರ್ ಎನ್. ನಮ್ರತ, ಸದಸ್ಯರಾದ ಎ.ಎಸ್. ಚಂದ್ರಶೇಖರ್ (ಜಿಪಿಒ ಚಂದ್ರು), ರವೀಂದ್ರನಾಥ ಸಿರಿವರ ಹಾಗೂ ಟಿ.ಎಚ್. ಲವಕುಮಾರ ಉಪಸ್ಥಿತರಿದ್ದರು.
ವಾರ್ಷಿಕ ಪ್ರಶಸ್ತಿ ಪುರಸ್ಕೃತರು
ಜಿ.ಎನ್. ಮೋಹನ್ (ಬೆಂಗಳೂರು) ಮಾಲತೇಶ ಬಡಿಗೇರ (ಗದಗ) ಟಿ. ರಘು (ಬೆಂಗಳೂರು) ವೆಂಕಟಾಚಲ (ಬೆಂಗಳೂರು) ಮುರ್ತುಜಸಾಬ ಘಟ್ಟಿಗನೂರ (ಬಾಗಲಕೋಟೆ) ಚೆನ್ನಕೇಶವಮೂರ್ತಿ ಎಂ. (ಬೆಂಗಳೂರು) ಗೋಪಾಲ ಯಲ್ಲಪ್ಪ ಉಣಕಲ್ (ಹುಬ್ಬಳ್ಳಿ–ಧಾರವಾಡ) ಚಿಕ್ಕಪ್ಪಯ್ಯ (ತುಮಕೂರು) ದೇವರಾಜ ಹಲಗೇರಿ (ಕೊಪ್ಪಳ) ವೈ.ಎಸ್. ಸಿದ್ಧರಾಮೇಗೌಡ (ಬೆಂಗಳೂರು ದಕ್ಷಿಣ) ಅರುಣ್‌ಕುಮಾರ್ ಆರ್.ಟಿ. (ದಾವಣಗೆರೆ) ರೋಹಿಣಿ ರಘುನಂದನ್ (ಬೆಂಗಳೂರು) ರತ್ನ ಸಕಲೇಶಪುರ (ಹಾಸನ) ವಿ.ಎನ್. ಅಶ್ವಥ್ (ಬೆಂಗಳೂರು) ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಶಿವಯ್ಯ ಸ್ವಾಮಿ ಬಿಬ್ಬಳ್ಳಿ (ಕಲಬುರಗಿ) ಕೆ.ಆರ್. ಪೂರ್ಣೇಂದ್ರ ಶೇಖರ್ (ಬೆಂಗಳೂರು) ಭೀಮನಗೌಡ ಬಿ. ಕಟಾವಿ (ಬೆಳಗಾವಿ) ಕೆ. ಮುರಳಿ (ಕೋಲಾರ) ಮುತ್ತುರಾಜ್ (ಬೆಂಗಳೂರು ಗ್ರಾಮಾಂತರ) ಮಲ್ಲೇಶ್ ಬಿ. ಕೋನಾಳ (ಯಾದಗಿರಿ) ಸುಗಂಧಿ ಉಮೇಶ್ ಕಲ್ಮಾಡಿ (ಉಡುಪಿ) ಮಹೇಶ ವಿ. ಪಾಟೀಲ (ಬೀದರ್) ಶಿವಪುತ್ರಪ್ಪ ಶಿವಸಿಂಪಿ (ಕೊಪ್ಪಳ) ಸದ್ಯೋಜಾತ ಶಾಸ್ತ್ರಿ ಹಿರೇಮಠ (ವಿಜಯನಗರ) ಹಾಗೂ ಉದಯ್ ಎಸ್.ಆರ್. (ಮೈಸೂರು) ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಏಳು ಮಂದಿಗೆ ದತ್ತಿನಿಧಿ ಪ್ರಶಸ್ತಿ
ಅಕಾಡೆಮಿಯ ದತ್ತಿನಿಧಿ ಪ್ರಶಸ್ತಿಗೆ ಏಳು ಮಂದಿ ಆಯ್ಕೆಯಾಗಿದ್ದಾರೆ. ‘ಎಚ್.ವಿ. ವೆಂಕಟಸುಬ್ಬಯ್ಯ ದತ್ತಿ ಪುರಸ್ಕಾರ’ಕ್ಕೆ ಮಂಜಪ್ಪ ಪಿ.ಎ. (ಕೊಡಗು) ‘ಬಿ.ಆರ್. ಅರಿಶಿಣಕೋಡಿ ದತ್ತಿ ಪುರಸ್ಕಾರ’ಕ್ಕೆ ಕಿರಣ್ ರತ್ನಾಕರ ನಾಯ್ಕ (ಉತ್ತರ ಕನ್ನಡ) ‘ಕೆ. ರಾಮಚಂದ್ರಯ್ಯ ದತ್ತಿ ಪುರಸ್ಕಾರ’ಕ್ಕೆ ಸಿ.ವಿ. ಲೋಕೇಶ್ (ದೊಡ್ಡಬಳ್ಳಾಪುರ) ‘ಶ್ರೀಮತಿ ಮಾಲತಿಶ್ರೀ ಮೈಸೂರು ದತ್ತಿ ಪುರಸ್ಕಾರ’ಕ್ಕೆ ಎಚ್.ಪಿ. ಈಶ್ವರಾಚಾರಿ (ಮಂಡ್ಯ) ‘ನಟರತ್ನ ಚಿಂದೋಡಿ ವೀರಪ್ಪನವರ ದತ್ತಿ ಪುರಸ್ಕಾರ’ಕ್ಕೆ ದೊಡ್ಡಮನೆ ವೆಂಕಟೇಶ್ (ಬೆಂಗಳೂರು) ‘ಪದ್ಮಶ್ರೀ ಚಿಂದೋಡಿ ಲೀಲಾ ದತ್ತಿ ಪುರಸ್ಕಾರ’ಕ್ಕೆ ಪಿ.ವಿ. ಕೃಷ್ಣಪ್ಪ (ಬೆಂಗಳೂರು) ಹಾಗೂ ‘ಕಲ್ಚರ್ಡ್ ಕಮೆಡಿಯನ್ ಕೆ.ಹಿರಣ್ಣಯ್ಯ ದತ್ತಿ ಪುರಸ್ಕಾರ’ಕ್ಕೆ ನಾಗೇಂದ್ರ ಪ್ರಸಾದ್ (ಬೆಂಗಳೂರು) ಆಯ್ಕೆಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.