ADVERTISEMENT

ಉತ್ತರಕ್ಕೆ 2–4 ವಾರ ಸಮಯ ಕೇಳಿದ ಸಚಿವರು!

ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಭಾಪತಿ ಹೊರಟ್ಟಿ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2022, 22:02 IST
Last Updated 16 ಮಾರ್ಚ್ 2022, 22:02 IST
ಬಸವರಾಜ ಹೊರಟ್ಟಿ
ಬಸವರಾಜ ಹೊರಟ್ಟಿ   

ಬೆಂಗಳೂರು: ‘ಇದೇ 7ರಿಂದ ಬುಧವಾರದವರೆಗೆ (ಮಾರ್ಚ್ 16) ನಡೆದ ವಿಧಾನ ಪರಿಷತ್‌ ಕಲಾಪದಲ್ಲಿ ಸದಸ್ಯರು ಕೇಳಿದ 51 ಪ್ರಶ್ನೆಗಳಿಗೆ ಉತ್ತರಿಸಬೇಕಾದ ಸಚಿವರು, ಎರಡರಿಂದ ನಾಲ್ಕು ವಾರಗಳ ಕಾಲಾವಕಾಶ ಕೇಳಿದ್ದಾರೆ.

ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಭಾಪತಿ ಬಸವರಾಜ ಹೊರಟ್ಟಿ, ಕಾಲಾವಕಾಶ ಕೇಳಿದ ಸಚಿವರ ಪಟ್ಟಿ ಸಹಿತ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಪತ್ರ ಬರೆದಿದ್ದಾರೆ. ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ಮತ್ತು ಉತ್ತರಿಸಬೇಕಾದ ಪ್ರಮುಖ ವೇದಿಕೆಯಾಗಿರುವ ಅಧಿವೇಶನದಲ್ಲಿ ಸಚಿವರು ಉತ್ತರ ನೀಡಿದಿರುವುದು ಸರಿಯಲ್ಲ. ಸದಸ್ಯರ ಪ್ರಶ್ನೆಗಳಿಗೆ ಕಲಾಪದ ಅವಧಿಯಲ್ಲೇ ಎಲ್ಲ ಸಚಿವರು ಉತ್ತರ ನೀಡುವಂತೆ ಕಟ್ಟುನಿಟ್ಟಾಗಿ ಸೂಚಿಸಬೇಕು ಎಂದೂ ಅವರಿಗೆ ತಿಳಿಸಿದ್ದಾರೆ.

ಬುಧವಾರ ಮಧ್ಯಾಹ್ನದ ನಂತರ ಕಲಾಪ ಆರಂಭವಾಗುತ್ತಿದ್ದಂತೆ, ‘ಸದ್ಯ ಸದನದಲ್ಲಿ ಆರು ಸಚಿವರು ಹಾಜರಿದ್ದಾರೆ’ ಎಂದು ಸಭಾಪತಿಗೆ ಕೋಟ ಅವರು ಮಾಹಿತಿ ನೀಡಿದರು. ಅದಕ್ಕೆ ಸಭಾಪತಿ, ‘ಈ ಕೆಲಸ ಮೊದಲು ಮಾಡಬೇಕಿತ್ತು. ಕಡ್ಡಾಯವಾಗಿ ಹಾಜರಿರಬೇಕಾದ ಸಚಿವರ ಬಗ್ಗೆ ಸಭಾ ನಾಯಕರು ಮತ್ತು ಮುಖ್ಯ ಸಚೇತಕರು ನಿಗಾ ವಹಿಸಬೇಕು’ ಎಂದರು.

ADVERTISEMENT

ಆಗ ಸಚಿವರಾದ ಸಿ.ಸಿ. ಪಾಟೀಲ ಮತ್ತು ಉಮೇಶ ಕತ್ತಿ, ‘ವಿಧಾನಸಭೆಯಲ್ಲಿ ತುರ್ತು ಹಾಜರಿ ಇರಬೇಕಾದ ಸಂದರ್ಭದಲ್ಲಿ ಪರಿಷತ್‌ನಲ್ಲಿ ಹಾಜರಾಗುವುದು ಕಷ್ಟ’ ಎಂದು ಸಮಜಾಯಿಷಿ ನೀಡಿದರು. ಪ್ರಶ್ನೋತ್ತರ ವೇಳೆ ಆಯಾ ಸಚಿವರು ಕಡ್ಡಾಯವಾಗಿ ಹಾಜರಿರುವಂತೆ ಮಾಡಿದರೆ ಅನುಕೂಲ ಎಂದೂ ಸಲಹೆ ನೀಡಿದರು. ‘ಕಲಾಪ ಸಲಹಾ ಸಮಿತಿ (ಬಿಎಸಿ) ಸಭೆಯಲ್ಲಿ ನಾನು ಈ ಬಗ್ಗೆ ಈಗಾಗಲೇ ತಿಳಿಸಿದ್ದೇನೆ’ ಎಂದು ಹೊರಟ್ಟಿ ಹೇಳಿದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.