ADVERTISEMENT

ರಾಜಕಾಲುವೆ ಒತ್ತುವರಿ: 30 ಕಿ.ಮೀ ಕಾಲುವೆಯಲ್ಲಿ ಹೂಳು, ನಿಂತ ಕಾಮಗಾರಿ

75 ಕೆರೆಗಳಿಗೆ ಏತ ನೀರಾವರಿ ಮೂಲಕ ನೀರು * ಶೇ 98ರಷ್ಟು ಹಣ ಪಾವತಿ

Published 2 ಸೆಪ್ಟೆಂಬರ್ 2022, 20:15 IST
Last Updated 2 ಸೆಪ್ಟೆಂಬರ್ 2022, 20:15 IST
   

ಬೆಂಗಳೂರು: ನಗರ ಜಿಲ್ಲೆಯ ಪೂರ್ವ, ಆನೇಕಲ್‌ ತಾಲ್ಲೂಕು ಹಾಗೂ ರಾಮನಗರ ಜಿಲ್ಲೆಯ ಕನಕಪುರದಲ್ಲಿ 75 ಕೆರೆಗಳನ್ನು ಏತ ನೀರಾವರಿ ಮೂಲಕ ತುಂಬುವ ಯೋಜನೆಗೆ ಶೇ 98ರಷ್ಟು ಹಣ ಗುತ್ತಿಗೆದಾರರಿಗೆ ಪಾವತಿಯಾಗಿದ್ದರೂ ಕಾಮಗಾರಿ ಸ್ಥಗಿತಗೊಂಡಿದೆ. ಇದಕ್ಕೆ ಕಾರಣ, 30 ಕಿ.ಮೀಗೂ ಹೆಚ್ಚು ಉದ್ದದ ರಾಜಕಾಲುವೆ ಒತ್ತುವರಿ.

ಸಣ್ಣ ನೀರಾವರಿ ಇಲಾಖೆ ಯೋಜನೆಯ ಒಪ್ಪಂದದ ಪ್ರಕಾರ 15 ತಿಂಗಳಲ್ಲಿ ಕಾಮಗಾರಿ ಮುಗಿದು, ನಂತರದ ಐದು ವರ್ಷ ನಿರ್ವಹಣೆ ಮಾಡಬೇಕಿತ್ತು. ಯೋಜನೆ ಆರಂಭವಾಗಿ ಐದು ವರ್ಷ ಕಳೆದರೂ ಘಟಕ ಹಾಗೂ ಪೈಪ್‌ಲೈನ್‌ ಕೆಲಸ ಭಾಗಶಃ ಮಾತ್ರ ಮುಗಿದಿದೆ. ಈವರೆಗೆ ತುಂಬಿರುವುದು 27 ಕೆರೆಗಳು ಮಾತ್ರ. ಉಳಿದ ಕೆರೆಗಳಿಗೆ ನೀರು ಹರಿಯಲು ರಾಜಕಾಲುವೆ ಒತ್ತುವರಿಯಾಗಬೇಕು. ಇದಕ್ಕೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಆದರೆ ಗುತ್ತಿಗೆದಾರ ಸಂಸ್ಥೆ ಮೆಘಾ ಎಂಜಿನಿಯರಿಂಗ್‌ ಆ್ಯಂಡ್‌ ಇನ್‌ಫ್ರಾಸ್ಟ್ರಕ್ಚರ್‌ಗೆ ಬಹುತೇಕ ಹಣ ಪಾವತಿ ಮಾಡಲಾಗಿದೆ.

ನಗರದ ಕೋರಮಂಗಲ–ಚಲ್ಲಘಟ್ಟ ಕಣಿವೆಯ ಒಳಚರಂಡಿ ನೀರನ್ನು ಸಂಸ್ಕರಿಸಿ ಪ್ರತಿ ದಿನ 120 ದಶಲಕ್ಷ ಲೀಟರ್‌ ನೀರು ಹರಿಸುವ ಯೋಜನೆಯಲ್ಲಿ ರಸ್ತೆಯಲ್ಲಿ ಪೈಪ್‌ಲೈನ್‌ ಕಾಮಗಾರಿ ಪೂರ್ಣಗೊಂಡಿದೆ. ಈ ಕೆರೆಗಳಿಗೆ ನೀರೂ ತಲುಪುತ್ತಿದೆ. ಆದರೆ ಅಲ್ಲಿಂದ ನೀರು ಮುಂದಿನ ಕೆರೆಗೆ ಹೋಗುತ್ತಿಲ್ಲ. ರಾಜಕಾಲುವೆ ಒತ್ತುವರಿಯಾಗಿರುವುದರಿಂದಜಮೀನುಗಳಿಗೆ ತುಂಬಿಕೊಳ್ಳುತ್ತಿದೆ. ಮನೆಗಳತ್ತ ಹೋಗುತ್ತಿದೆ.

ADVERTISEMENT

ಕಲ್ಮಶವಾಗುತ್ತಿದೆ ಸಂಸ್ಕರಿತ ನೀರು
ಮುತ್ತಾನಲ್ಲೂರು ಕೆರೆಗೆ ಸಂಸ್ಕರಿತ ನೀರು ಪಂಪ್‌ ಆಗುತ್ತಿದೆ. ಆದರೆ, ಈ ಕೆರೆಗೆ ಚಂದಾಪುರ ಕೆರೆಯಿಂದ ಕಲ್ಮಶ ನೀರು ಬಂದು ಸೇರುತ್ತಿದೆ. ಹೀಗಾಗಿ ಈ ಸಂಸ್ಕರಿತ ನೀರು ಮತ್ತೆ ಕಲ್ಮಶವಾಗಿ ಕೆರೆಗಳಿಗೆ ಹರಿಯುತ್ತಿರುವುದು ಯೋಜನೆಯ ವೈಫಲ್ಯ ಎಂಬುದು ಸ್ಥಳೀಯರ ಆರೋಪ.

‘ಚಂದಾಪುರ ಕೆರೆ ನಮ್ಮ ಯೋಜನೆಯಲ್ಲಿಲ್ಲ. ಆದರೂ ಅದನ್ನು ಸ್ವಚ್ಛಗೊಳಿಸದ ಹೊರತು ಯೋಜನೆ ಪೂರ್ಣವಾಗುವುದಿಲ್ಲ ಎಂಬುದನ್ನು ಅರಿತು ಚಂದಾಪುರ ಕೆರೆ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುತ್ತಿದೆ’ ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.