ಬೆಂಗಳೂರು: ಕರ್ನಾಟಕದ ಶ್ರೀಮಂತ ಸಂಸ್ಕೃತಿ, ಕಲೆ, ಸಾಹಿತ್ಯ, ಆಹಾರ ಸೇರಿ ಹಲವು ವೈವಿಧ್ಯಗಳನ್ನು ಒಂದೇ ಸೂರಿನಡಿ ತರಲು ಮುಂದಾಗಿರುವ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ, ನ.9 (ಶನಿವಾರ) ಮತ್ತು 10ರಂದು (ಭಾನುವಾರ) ದೊಮ್ಮಲೂರಿನಲ್ಲಿರುವ ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದಲ್ಲಿ (ಬಿಐಸಿ) ‘ಕೃಷ್ಣೆಯಿಂದ ಕಾವೇರಿಯವರೆಗೆ’ ಶೀರ್ಷಿಕೆಯಡಿ ಉತ್ಸವ ಹಮ್ಮಿಕೊಂಡಿದೆ.
ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಬಿಐಸಿ ಸಹಯೋಗದಲ್ಲಿ ವಿಶ್ವವಿದ್ಯಾಲಯವು ಈ ಉತ್ಸವ ಆಯೋಜಿಸಿದೆ. ಎರಡು ದಿನಗಳ ಉತ್ಸವದಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ಐದು ವೇದಿಕೆಗಳಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಜಾನಪದ ಕಲಾ ಪ್ರದರ್ಶನ, ಗಾಯನ, ಪುಸ್ತಕ ಬಿಡುಗಡೆ, ಉಪನ್ಯಾಸ, ವಿಚಾರ ಸಂಕಿರಣ, ಆಹಾರ ಮೇಳ, ಕಾರ್ಯಾಗಾರ, ಚರ್ಚೆ, ಸಾಂಸ್ಕೃತಿಕ ಕಾರ್ಯಕ್ರಮ ಸೇರಿ ಹಲವು ವೈವಿಧ್ಯತೆಗಳನ್ನು ಈ ಉತ್ಸವ ಒಳಗೊಂಡಿರಲಿದೆ.
ಬುಧವಾರ ಈ ಕುರಿತು ವಿವರ ನೀಡಿದ ಅಜೀಂ ಪ್ರೇಮ್‌ಜಿ ಫೌಂಡೇಷನ್‌ನ ಸಹ ನಿರ್ದೇಶಕ ಮಂಜುನಾಥ್, ‘ಕರ್ನಾಟಕ ಹಲವು ವೈವಿಧ್ಯಗಳ ನಾಡಾಗಿದೆ. ಸಾಮಾನ್ಯ ಜನರು ಹಾಗೂ ವಿದ್ವಾಂಸರನ್ನು ಒಳಗೊಳ್ಳುವಂತೆ ಕಾರ್ಯಕ್ರಮ ರೂಪಿಸಿದ್ದೇವೆ. ಕರ್ನಾಟಕದಲ್ಲಿ ಹರಿಯುತ್ತಿರುವ ನದಿಗಳಲ್ಲಿ ಕೃಷ್ಣ ಮತ್ತು ಕಾವೇರಿ ಪ್ರಮುಖವಾಗಿವೆ. ಎರಡೂ ನದಿಗಳು ಈ ರಾಜ್ಯದ ವಿವಿಧ ಭೂ ಭಾಗಗಳಲ್ಲಿ ಹರಿಯುತ್ತಿರುವ ಹಾಗೆಯೇ, ನಮ್ಮ ಉತ್ಸವವೂ ಕರ್ನಾಟಕದ ವಿವಿಧ ಸಂಸ್ಕೃತಿ ಮತ್ತು ಭಾಷೆಗಳೊಂದಿಗೆ ಕೊಂಡಿ ಬೆಸೆಯುವ ಆಶಯ ಹೊಂದಿದೆ’ ಎಂದು ತಿಳಿಸಿದರು.
ಬಿಐಸಿ ಕಾರ್ಯಕ್ರಮ ನಿರ್ದೇಶಕಿ ಹಾಗೂ ಉತ್ಸವದ ಕ್ಯೂರೇಟರ್ ಲೇಖಾ ನಾಯ್ಡು, ‘ನ.9ರಂದು ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಗಲಿದೆ. ಡೊಳ್ಳು ಕುಣಿತ ಸೇರಿ ವಿವಿಧ ಜಾನಪದ ಕಲಾ ಪ್ರದರ್ಶನಗಳ ಮೆರವಣಿಗೆ ನಡೆಯಲಿದೆ. 11 ಗಂಟೆಗೆ ಹಿಂದೂಸ್ತಾನಿ ಸಂಗೀತದ ಬಗ್ಗೆ ಹಿಂದೂಸ್ತಾನಿ ಗಾಯಕ ನಾಗರಾಜರಾವ್ ಹವಾಲ್ದಾರ್ ಅವರು ಉಪನ್ಯಾಸ ಹಾಗೂ ಪ್ರಾತ್ಯಕ್ಷಿಕೆ ನೀಡಲಿದ್ದಾರೆ. ಬಳಿಕ, ಕರ್ನಾಟಕದಲ್ಲಿ ಕ್ರೀಡೆಗಳ ಕುರಿತು ವಿಚಾರಸಂಕಿರಣ, ಹಸೆ ಚಿತ್ರದ ಕಾರ್ಯಾಗಾರ, ರಂಗಗೀತೆಗಳ ಪ್ರಸ್ತುತಿ, ತೊಗಲು ಬೊಂಬೆಯಾಟ ಪ್ರದರ್ಶನ, ಪ್ರಕೃತಿ ಸಂರಕ್ಷಣೆ ಬಗ್ಗೆ ಉಲ್ಲಾಸ್ ಕಾರಂತ್ ಅವರಿಂದ ಉಪನ್ಯಾಸ, ಕರ್ನಾಟಕ ಏಕೀಕರಣ ಚಳವಳಿಯ ಬಗ್ಗೆ ವಿಚಾರಸಂಕಿರಣ ಹಾಗೂ ಜನಪದ ನೃತ್ಯಗಳ ಪ್ರದರ್ಶನ ನಡೆಯಲಿದೆ’ ಎಂದರು.
‘ನ.10ರಂದು ಬೆಳಿಗ್ಗೆ 11 ಗಂಟೆಗೆ ಯಕ್ಷಗಾನ ಪ್ರದರ್ಶನ ಇರಲಿದೆ. ತದನಂತರ, ಅಡುಗೆಗಳ ಪ್ರಾತ್ಯಕ್ಷಿಕೆ, ಪುಸ್ತಕಗಳ ಬಿಡುಗಡೆ, ಅಡುಗೆ ಕುರಿತು ಮಾತುಕತೆ, ಕೌದಿ ಕಲೆಯ ಕಾರ್ಯಾಗಾರ, ‘ಕನ್ನಡ ಪ್ರಜ್ಞೆಯ ವಿಕಾಸ ಮತ್ತು ಜ್ಞಾನಪೀಠ ಪುರಸ್ಕೃತರು’ ವಿಷಯದ ಬಗ್ಗೆ ಚರ್ಚೆ, ಫ್ಯೂಶನ್ ಸಂಗೀತ ಕಛೇರಿ ಸೇರಿ ಹಲವು ಕಾರ್ಯಕ್ರಮಗಳು ನಡೆಯಲಿವೆ’ ಎಂದು ಮಾಹಿತಿ ನೀಡಿದರು.
ಅಜೀಂ ಪ್ರೇಮ್‌ಜಿ ಫೌಂಡೇಷನ್‌ನ ಮುಖ್ಯ ಸಂವಹನ ಅಧಿಕಾರಿ ಸುದೀಶ್ ವೆಂಕಟೇಶ್, ಹಿಂದೂಸ್ತಾನಿ ಗಾಯಕ ನಾಗರಾಜರಾವ್ ಹವಾಲ್ದಾರ್, ಲೇಖಕಿ ರೂಪಾ ಪೈ, ಬಿಐಸಿ ಕಾರ್ಯಕ್ರಮ ಸಮಿತಿಯ ಪ್ರತೀತಿ ಬಲ್ಲಾಳ್ ಉಪಸ್ಥಿತರಿದ್ದರು.
ಕಲಾ ಪ್ರದರ್ಶನ ಆಹಾರ ಮೇಳ
‘ಎರಡೂ ದಿನಗಳು ವಿವಿಧ ಮಹಡಿಗಳಲ್ಲಿ ಕಲಾ ಪ್ರದರ್ಶನ ಹಾಗೂ ಆಹಾರ ಮೇಳ ನಡೆಯಲಿದೆ. ಕುಶಲಕರ್ಮಿಗಳೊಂದಿಗೆ ಮುಖಾಮುಖಿಯಾಗಿ ಅವರ ಅನುಭವಗಳನ್ನು ಕೇಳುವ ಅವಕಾಶವೂ ಇರಲಿದೆ. ಈ ಉತ್ಸವಕ್ಕೆ ಪ್ರವೇಶ ಉಚಿತವಾಗಿರಲಿದೆ’ ಎಂದು ಮಂಜುನಾಥ್ ತಿಳಿಸಿದರು. ಬಿಐಸಿ ನಿರ್ದೇಶಕ ವಿಕ್ರಂ ಭಟ್ ‘ಕನ್ನಡೇತರರಿಗೆ ಕರ್ನಾಟಕದ ಸಂಸ್ಕೃತಿ ಮತ್ತು ಕಲೆಯ ಬಗ್ಗೆ ತಿಳಿಸಬೇಕು. ನಾವು ನಿರಂತರ ಕನ್ನಡ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ. ಎರಡು ದಿನಗಳ ಈ ಉತ್ಸವವು ಜನರ ಸ್ಮರಣೆಯಲ್ಲಿ ಇರುತ್ತದೆ’ ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.