ADVERTISEMENT

ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ವ್ಯಾಪ್ತಿಗೆ ಬಿಡಿಎ: ಆದೇಶ

ನಾಡಪ್ರಭು ಕೆಂಪೇಗೌಡ ಬಡಾವಣೆ ನೋಂದಾಯಿಸಲು ಸೂಚನೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 0:08 IST
Last Updated 11 ನವೆಂಬರ್ 2025, 0:08 IST
ಬಿಡಿಎ
ಬಿಡಿಎ   

ಬೆಂಗಳೂರು: ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (ರೇರಾ) ವ್ಯಾಪ್ತಿಯಿಂದ ಹೊರಗಿಡಬೇಕೆಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದ ರೇರಾ, ನಾಡಪ್ರಭು ಕೆಂಪೇಗೌಡ ಬಡಾವಣೆ (ಎನ್‌ಪಿಕೆಎಲ್) ಅನ್ನು ನೋಂದಾಯಿಸಲು ಬಿಡಿಎಗೆ ನಿರ್ದೇಶನ ನೀಡಿ ಆದೇಶ ಹೊರಡಿಸಿದೆ. 

ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸುವಲ್ಲಿ ವಿಳಂಬವಾಗುತ್ತಿರುವ ಬಗ್ಗೆ ತನ್ನ ವಿರುದ್ಧ ರೇರಾದಲ್ಲಿ ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯೆ ನೀಡಿದ ಸಂದರ್ಭದಲ್ಲಿ ‘ಬಿಡಿಎ ಶಾಸನಬದ್ಧ ಸಂಸ್ಥೆಯಾಗಿದ್ದು, ರಿಯಲ್ ಎಸ್ಟೇಟ್ ಯೋಜನೆಗಳ ಪ್ರವರ್ತಕನಲ್ಲ. ಹಾಗಾಗಿ ರೇರಾ ವ್ಯಾಪ್ತಿಯಿಂದ ಹೊರಗಿಡಬೇಕು’ ಎಂಬ ವಾದವನ್ನು ಮಂಡಿಸಿತ್ತು.

ಅರ್ಜಿಗೆ ಸಂಬಂಧಿಸಿದ ಆದೇಶದಲ್ಲಿ, ರೇರಾ ಕಾಯ್ದೆಯ ಕಲಂ 2ಝಡ್‌ಕೆ (iii) ಅನ್ವಯ, ಸಾರ್ವಜನಿಕರಿಗೆ ಮಾರಾಟಕ್ಕಾಗಿ ನಿವೇಶನ ಅಥವಾ ಕಟ್ಟಡಗಳನ್ನು ನಿರ್ಮಿಸುವ ಅಥವಾ ಅಭಿವೃದ್ಧಿಪಡಿಸುವ ಯಾವುದೇ ಅಭಿವೃದ್ಧಿ ಪ್ರಾಧಿಕಾರ ಅಥವಾ ಸಾರ್ವಜನಿಕ ಸಂಸ್ಥೆಯನ್ನು ‘ಪ್ರವರ್ತಕ ’ ಎಂದು ಪರಿಗಣಿಸಬೇಕು ಎಂದು ರೇರಾ ತಿಳಿಸಿದೆ. ಆದ್ದರಿಂದ, ಬಿಡಿಎಗೆ ವಿನಾಯಿತಿ ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ADVERTISEMENT

‘1976ರ ಬಿಡಿಎ ಕಾಯ್ದೆ ಯೋಜನೆ ಮತ್ತು ಭೂ ಅಭಿವೃದ್ಧಿಯನ್ನು ನಿಯಂತ್ರಿಸಿದರೂ, ರೇರಾ, ರಿಯಲ್ ಎಸ್ಟೇಟ್ ಯೋಜನೆಗಳನ್ನು ನಿಯಂತ್ರಿಸಲು ಮತ್ತು ಮನೆ ಖರೀದಿದಾರರ ಹಿತವನ್ನು ರಕ್ಷಿಸಲು ಜಾರಿಗೆ ತಂದ (2016) ವಿಶೇಷ ಕಾಯ್ದೆಯಾಗಿದೆ. ಈ ಕಾಯ್ದೆ  ಪ್ರಾಧಿಕಾರದ ಯೋಜನಾ ಅಥವಾ ನಿಯಂತ್ರಣ ಕಾರ್ಯಗಳನ್ನು ನಿಯಂತ್ರಿಸುವುದಿಲ್ಲ. ಇದು ಕೇವಲ ಅಭಿವೃದ್ಧಿ ಮತ್ತು ಹಂಚಿಕೆದಾರರಿಗೆ ಮಾರಾಟವನ್ನು ಒಳಗೊಂಡ ವ್ಯವಹಾರಗಳನ್ನು ಮಾತ್ರ ನಿಯಂತ್ರಿಸುತ್ತದೆ. ಆದ್ದರಿಂದ, ರೇರಾ ಯೋಜನಾ ಅಧಿಕಾರಗಳಲ್ಲಿ ಹಸ್ತಕ್ಷೇಪ ಮಾಡುತ್ತದೆ ಎಂಬ ವಾದವು ತಾರ್ಕಿಕವಲ್ಲ. ಹಾಗಾಗಿ ನಿವೇಶನಗಳ ಅಭಿವೃದ್ಧಿ, ಮಾರಾಟ ಮತ್ತು ಜಾಗ ಹಸ್ತಾಂತರದ ಮಟ್ಟಿಗೆ ರೇರಾ ಕಾಯ್ದೆಗೆ ಅಧಿಕಾರ ಇದೆ’ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

‘ತಾನು ಕೈಗೆತ್ತಿಕೊಂಡ ಯೋಜನೆಗಳು ವಾಣಿಜ್ಯ ಉದ್ದೇಶದ್ದಲ್ಲ. ಆದ್ದರಿಂದ ಅವುಗಳನ್ನು ರಿಯಲ್ ಎಸ್ಟೇಟ್ ಯೋಜನೆಗಳೆಂದು ಕರೆಯಲು ಆಗುವುದಿಲ್ಲ’ ಎಂಬ ಬಿಡಿಎ ವಾದಕ್ಕೆ ಪ್ರತಿಕ್ರಿಯಿಸಿರುವ ರೇರಾ, ‘ಲಾಭ ಅಥವಾ ನಷ್ಟ ಎಂಬ ಉದ್ದೇಶವು ಅಪ್ರಸ್ತುತ’ ಎಂದು ಸ್ಪಷ್ಟಪಡಿಸಿದೆ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿರುವ ಲಾಭರಹಿತ ಸಂಸ್ಥೆಗಳೂ ತನ್ನ ವ್ಯಾಪ್ತಿಗೆ ಒಳಪಡುತ್ತವೆ ಎಂದು ಅಭಿಪ್ರಾಯಪಟ್ಟಿದೆ.

ಕೆಂಪೇಗೌಡ ಬಡಾವಣೆ ಯೋಜನೆಯನ್ನು ಬಿಡಿಎ, ರೇರಾದಲ್ಲಿ ನೋಂದಾಯಿಸಿಕೊಳ್ಳಬೇಕು. ಯೋಜನೆಗೆ ಸಂಬಂಧಿಸಿದ ಅಗತ್ಯ ವಿವರಗಳು, ಅನುಮೋದಿತ ಯೋಜನೆಗಳು, ಮಂಜೂರಾದ ಯೋಜನಾ ನಕ್ಷೆಗಳು, ಅಭಿವೃದ್ಧಿಯ ಸ್ಥಿತಿ, ಹಣಕಾಸು ವಿವರ ಹಾಗೂ ಯೋಜನೆಗೆ ಸಂಬಂಧಿಸಿದ ಇತರ ದಾಖಲೆಗಳು ಸೇರಿ ಎಲ್ಲ ಯೋಜನಾ ವಿವರಗಳನ್ನು ಸಲ್ಲಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.