ADVERTISEMENT

ಸಚಿವಾಲಯ ಬಂದ್‌: ಬಹುಪಾಲು ಯಶಸ್ವಿ

​ಪ್ರಜಾವಾಣಿ ವಾರ್ತೆ
Published 27 ಮೇ 2022, 20:06 IST
Last Updated 27 ಮೇ 2022, 20:06 IST
ವಿಧಾನಸೌಧದ ಸಚಿವಾಲಯದ ಕಚೇರಿಯೊಂದರ ಶುಕ್ರವಾರದ ದೃಶ್ಯ
ವಿಧಾನಸೌಧದ ಸಚಿವಾಲಯದ ಕಚೇರಿಯೊಂದರ ಶುಕ್ರವಾರದ ದೃಶ್ಯ   

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸರ್ಕಾರದ ಸಚಿವಾಲಯ ನೌಕರರ ಸಂಘ ಕರೆ ನೀಡಿದ್ದ ‘ಸಚಿವಾಲಯ ಬಂದ್‌’ಗೆ ಬಹುತೇಕ ನೌಕರರು ಸ್ಪಂದಿಸಿ, ಶುಕ್ರವಾರ ಕರ್ತವ್ಯಕ್ಕೆ ಗೈರಾಗಿದ್ದರು.

ವಿಧಾನಸೌಧ, ವಿಕಾಸಸೌಧ ಮತ್ತು ಎಂ.ಎಸ್‌.ಬಿಲ್ಡಿಂಗ್‌ನಲ್ಲಿ ನೌಕರರು ಮತ್ತು ಅಧಿಕಾರಿಗಳು ಇಲ್ಲದೇ ಕಚೇರಿಗಳು ಬಣಗುಡುತ್ತಿದ್ದವು. ಸುಮಾರು 3,000 ಸಿಬ್ಬಂದಿ ಕರ್ತವ್ಯಕ್ಕೆ ಗೈರಾಗಿದ್ದರು ಎಂದು ಮೂಲಗಳು ತಿಳಿಸಿವೆ.

ಆಡಳಿತ ಸುಧಾರಣೆ ಮತ್ತು ಆರ್ಥಿಕ ಮಿತವ್ಯಯದ ಹೆಸರಿನಲ್ಲಿ ಹಲವು ಹುದ್ದೆಗಳನ್ನು ಕಡಿತಗೊಳಿಸುತ್ತಿರುವುದನ್ನು ಮತ್ತು ಇತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬಂದ್‌ಗೆ ಕರೆ ನೀಡಲಾಗಿತ್ತು.

ADVERTISEMENT

‘ಸಚಿವಾಲಯ ಬಂದ್‌’ಗೆ ಕರೆ ನೀಡಿರುವುದು ಕಾನೂನು ಬಾಹಿರ. ಕಚೇರಿಗೆ ಹಾಜರಾಗಲು ಬರುವ ಅಧಿಕಾರಿ–ಸಿಬ್ಬಂದಿಗೆ ಅಡ್ಡಿಪಡಿಸಿದರೆ ಕ್ರಿಮಿನಲ್‌ ಮೊಕದ್ದಮೆ ಹೂಡಿ, ಶಿಸ್ತು ಕ್ರಮ ತೆಗೆದುಕೊಳ್ಳುತ್ತೇವೆ. ಸಚಿವಾಲಯದ ಎಲ್ಲಾ ಅಧಿಕಾರಿ, ಸಿಬ್ಬಂದಿ ಕಚೇರಿಗೆ ಕಡ್ಡಾಯವಾಗಿ ಹಾಜರಾಗಬೇಕು. ಒಂದು ವೇಳೆ ಪೂರ್ವಾನುಮತಿ ಪಡೆಯದೇ ಕಚೇರಿಗೆ ಗೈರು ಹಾಜರಾದರೆ ಅದನ್ನು ‘ಲೆಕ್ಕಕ್ಕಿಲ್ಲದ ಅವಧಿ’ ಎಂದು ಪರಿಗಣಿಸಲಾಗುವುದು ಎಂದು ಮುಖ್ಯಕಾರ್ಯದರ್ಶಿ ರವಿಕುಮಾರ್‌ ಹೇಳಿದ್ದರು.

‘ಮುಖ್ಯಕಾರ್ಯದರ್ಶಿಯವರ ಸುತ್ತೋಲೆಗೂ ಜಗ್ಗದೇ ಬಂದ್‌ ಶೇ 100ರಷ್ಟು ಯಶಸ್ವಿಯಾಗಿದೆ. ನೌಕರರೂ ಅಲ್ಲದೇ, ಗುತ್ತಿಗೆ ಸಿಬ್ಬಂದಿಯೂ ಕರ್ತವ್ಯಕ್ಕೆ ಗೈರಾಗುವ ಮೂಲಕ ಬೆಂಬಲ ನೀಡಿದ್ದಾರೆ’ ಎಂದು ಸಚಿವಾಲಯ ನೌಕರರ ಸಂಘ ತಿಳಿಸಿದೆ.

‘ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮೂರು ಹಂತಗಳಲ್ಲಿ ಹೋರಾಟ ಮಾಡಿದ್ದೇವೆ. ಆದರೆ ಮುಖ್ಯಕಾರ್ಯದರ್ಶಿಯವರು ನಮ್ಮನ್ನು ಕರೆದು ಮಾತನಾಡಿಸುವ ಸೌಜನ್ಯ ತೋರಿಲ್ಲ. ಸರ್ಕಾರದ ಗಮನ ಸೆಳೆಯಲು ಬಂದ್‌ ಮಾಡಿದ್ದೇವೆ. ಈಗಲೂ ನಮ್ಮ ಬೇಡಿಕೆ ಈಡೇರಿಸದೇ ಇದ್ದರೆ ಅನಿರ್ದಿಷ್ಟಾವಧಿ ಬಂದ್‌ ನಡೆಸಬೇಕಾಗುತ್ತದೆ’ ಎಂದು ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ಪಿ.ಗುರುಸ್ವಾಮಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.