ಬೆಂಗಳೂರು: ಮಹಿಳಾ ಕಲಾವಿದರಿಗೆ ಸಂಭಾವನೆ ನೀಡಲು ಹಾಗೂ ಧನ ಸಹಾಯ ಬಿಡುಗಡೆ ಮಾಡಲು ಹಣದ ಬೇಡಿಕೆ ಇಟ್ಟಿರುವ ಆರೋಪಕ್ಕೆ ಸಂಬಂಧಿಸಿದಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್ ಎನ್.ಛಲವಾದಿ ವಿರುದ್ಧ ಇಲಾಖಾ ತನಿಖೆ ನಡೆಸುವಂತೆ ರಾಜ್ಯ ಮಹಿಳಾ ಆಯೋಗ ಸೂಚಿಸಿದೆ.
ಈ ಸಂಬಂಧ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿರುವ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ, ‘ಹಣಕ್ಕೆ ಬೇಡಿಕೆ ಇಟ್ಟಿರುವ ಕುರಿತು ದಲಿತ ಸಂಘಟನೆಗಳ ಒಕ್ಕೂಟ ಮತ್ತು ಕಲಾವಿದರ ಸಂಘಟನೆಗಳ ಒಕ್ಕೂಟದ ಮಹಿಳಾ ಸದಸ್ಯರು ದೂರು ನೀಡಿದ್ದಾರೆ. ಹಾಗಾಗಿ ಅಧಿಕಾರಿ ವಿರುದ್ಧ ಕಾನೂನು ರೀತಿಯ ತನಿಖೆ ಕೈಗೊಳ್ಳಬೇಕು ಹಾಗೂ ಕೈಗೊಂಡ ಕ್ರಮದ ವರದಿಯನ್ನು ಆಯೋಗಕ್ಕೆ ಕಳುಹಿಸಬೇಕು’ ಎಂದು ಹೇಳಿದ್ದಾರೆ.
‘2025ನೇ ಮಾರ್ಚ್‌ನಲ್ಲಿ ಎಸ್‌ಸಿಎಸ್‌ಪಿ/ಟಿಎಸ್‌ಪಿಗೆ ಹಣ ಬಿಡುಗಡೆ ಮಾಡಿದ್ದರೂ ಅಶೋಕ್ ಛಲವಾದಿ ಅವರು ಕಲಾವಿದರಿಗೆ ಬಿಡುಗಡೆ ಮಾಡದೇ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಪ್ರಾಯೋಜನೆ, ಧನಸಹಾಯ, ಇಲಾಖೆ ಕಾರ್ಯಕ್ರಮ ನಡೆಯಬೇಕಾದರೂ ಹಣ ನೀಡದ ಹೊರತು ಕಡತವನ್ನು ಅನುಮೋದಿಸುವುದಿಲ್ಲ. ಅಧಿಕಾರಿ ವಿರುದ್ಧ ಪ್ರತಿಭಟನೆ ಮಾಡಿ ಅಮಾನತುಗೊಳಿಸುವಂತೆ ಮನವಿ ಮಾಡಿದ್ದರೂ ಸ್ವಾತಂತ್ರ್ಯೋತ್ಸವ ಆಚರಣೆಯ ಅನುಷ್ಠಾನಾಧಿಕಾರಿಯಾಗಿ ನೇಮಿಸಲಾಗಿದೆ. ತಕ್ಷಣ ಅನುಷ್ಟಾನ ಅಧಿಕಾರಿ ಜವಾಬ್ದಾರಿಯಿಂದ ಅವರನ್ನು ಬದಲಾಯಿಸಿ ಕಲಾವಿದರಿಗೆ ನ್ಯಾಯ ಒದಗಿಸಬೇಕು’ ಎಂದು ಕರ್ನಾಟಕ ರಾಜ್ಯ ಸಂವಿಧಾನ ಬಳಗವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಎಂ.ವಿ.ವೆಂಕಟೇಶ್ ಅವರಿಗೆ ಪತ್ರ ಬರೆದು ಮನವಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.