ADVERTISEMENT

ಕಸಾಪ ಅಧ್ಯಕ್ಷರ ಬಗ್ಗೆ ಮಾಡಿದ ಯಾವ ಆರೋಪ ಸುಳ್ಳೆಂದು ತೋರಿಸಿ: ರಾಮಲಿಂಗ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 4 ಜುಲೈ 2025, 15:54 IST
Last Updated 4 ಜುಲೈ 2025, 15:54 IST
ಮಹೇಶ ಜೋಶಿ
ಮಹೇಶ ಜೋಶಿ   

ಬೆಂಗಳೂರು: ‘ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಇತ್ತೀಚಿನ ಕಾರ್ಯಚಟುವಟಿಕೆಗಳು ಹಾಗೂ ಅಧ್ಯಕ್ಷರ ನಡೆ ಬಗ್ಗೆ ಮಾಡಿರುವ ಆರೋಪಗಳಲ್ಲಿ ಯಾವುದು ಸುಳ್ಳೆಂದು ತೋರಿಸಿ’ ಎಂದು ಕಸಾಪ ಮಾಜಿ ಗೌರವ ಕಾರ್ಯದರ್ಶಿ ನೇ.ಭ. ರಾಮಲಿಂಗ ಶೆಟ್ಟಿ ಸವಾಲು ಹಾಕಿದ್ದಾರೆ.  

‘ಗೌರವ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ನೇ.ಭ. ರಾಮಲಿಂಗ ಶೆಟ್ಟಿ ಅವರ ಆರೋಪಗಳು ಸತ್ಯಕ್ಕೆ ದೂರವಾಗಿವೆ’ ಎಂಬ ಕಸಾಪ ಅಧ್ಯಕ್ಷ ಮಹೇಶ ಜೋಶಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ‘ನನ್ನನ್ನು ಗೌರವ ಕಾರ್ಯದರ್ಶಿ ಸ್ಥಾನದಿಂದ ದೂರವಿಡಲು ಕಾರ್ಯಕಾರಿ ಸಮಿತಿಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದ್ದೀರಿ. ಈ ತೀರ್ಮಾನವನ್ನು ಯಾರು, ಯಾವ ದಿನಾಂಕದಲ್ಲಿ ತೆಗೆದುಕೊಂಡರು? ಈ ಬಗ್ಗೆ ಸುಳಿವು ಪಡೆದು ನಾನು ರಾಜೀನಾಮೆ ನೀಡಿದ್ದೇನೆ ಎಂದಿದ್ದೀರಿ. ಆ ಸುಳಿವು ನೀಡಿದವರು ಯಾರು’ ಎಂದು ಪ್ರಶ್ನಿಸಿದ್ದಾರೆ.

‘ಸಂವಿಧಾನದಡಿ ನನಗೆ ದಕ್ಕಿರುವ ಹಕ್ಕಿನ ಅಡಿ ಕಸಾಪದಲ್ಲಿ ನಡೆಯುತ್ತಿರುವ ಅನ್ಯಾಯವನ್ನು ಬಯಲು ಮಾಡಲು ಅವಕಾಶವಿದೆ. ಅದು ನನ್ನಿಂದ ಸಾಧ್ಯವೂ ಇದೆ. ಅದಕ್ಕಾಗಿ ನಾನು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳಲು ಅವಕಾಶವಿದೆ. ನಾನು ಅದನ್ನು ಬಳಸಿಕೊಂಡಿದ್ದೇನೆ’ ಎಂದು ಹೇಳಿದ್ದಾರೆ.

ADVERTISEMENT

‘ಪ್ರಶ್ನೆಗಳಿಗೆ ನೀವು ಶೀಘ್ರ ಉತ್ತರ ನೀಡುವಿರೆಂದು ನಾನು ನಿರೀಕ್ಷಿಸುತ್ತೇನೆ. ಇಲ್ಲದಿದ್ದಲ್ಲಿ ನಾನು ಕಾನೂನಿನ ಮೊರೆ ಹೋಗಬೇಕಾಗುವುದು ಅನಿವಾರ್ಯ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.