ADVERTISEMENT

ಕಸವನಹಳ್ಳಿ ಕೆರೆ: ನಾಮಗೋಳಿಗಳ ಸಾವು

62 ಎಕರೆ ವಿಸ್ತೀರ್ಣದ ಕೆರೆ l ನಿಖರ ಕಾರಣ ತಿಳಿಯದು: ಬಿಬಿಎಂಪಿ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2018, 20:43 IST
Last Updated 4 ನವೆಂಬರ್ 2018, 20:43 IST
ಕಸವನಹಳ್ಳಿ ಕೆರೆಯಲ್ಲಿ ಸತ್ತಿರುವ ನಾಮಗೋಳಿಗಳು
ಕಸವನಹಳ್ಳಿ ಕೆರೆಯಲ್ಲಿ ಸತ್ತಿರುವ ನಾಮಗೋಳಿಗಳು   

ಬೆಂಗಳೂರು: ಕಸವನಹಳ್ಳಿ ಕೆರೆಯಲ್ಲಿ ಏಳೆಂಟು ನಾಮಗೋಳಿಗಳು (common coot) ದಿಢೀರ್‌ ಮೃತಪಟ್ಟಿವೆ. ಈ ಬೆಳವಣಿಗೆ ಬಿಬಿಎಂಪಿ ಕೆರೆ ಅಭಿವೃದ್ಧಿ ಅಧಿಕಾರಿಗಳ ಚಿಂತೆಗೆ ಕಾರಣವಾಗಿದೆ.

ಈ ಕೆರೆಯಲ್ಲಿ ಹಕ್ಕಿಗಳು ಸತ್ತಿರುವುದು ಶುಕ್ರವಾರ ಸಂಜೆ ವಾಯುವಿಹಾರಕ್ಕೆ ಹೋಗಿದ್ದ ಸಾರ್ವಜನಿಕರ ಗಮನಕ್ಕೆ ಬಂದಿತ್ತು.

‘ಕೆರೆಯಲ್ಲಿ ಶುಕ್ರವಾರ ಬೆಳಿಗ್ಗೆ ಹಕ್ಕಿ ಗಳು ತೇಲುತ್ತಿರುವುದನ್ನು ಕೆಲವರು ನೋಡಿದ್ದರು.ನಾವು ಸ್ಥಳಕ್ಕೆ ಭೇಟಿ ನೀಡಿದಾಗಲೂ ಹಕ್ಕಿಗಳ ಮೃತ ದೇಹಗಳು ನೀರಿನಲ್ಲಿ ತೇಲುತ್ತಿದ್ದವು. ಸುಮಾರು 10 ಹಕ್ಕಿಗಳು ಸತ್ತಿವೆ’ ಎಂದು ಮಹದೇವಪುರ ಪರಿಸರ ಸಂರಕ್ಷಣೆ ಮತ್ತು ಅಭಿವೃದ್ಧಿ ಸಮಿತಿಯ ಸಿ.ಎಸ್‌.ದೇಚಮ್ಮ ತಿಳಿಸಿದರು.

ADVERTISEMENT

ಹಕ್ಕಿಗಳು ಸತ್ತಿರುವ ಬಗ್ಗೆ ಸ್ಥಳೀಯರು ಬಿಬಿಎಂಪಿಯ ಕೆರೆ ಅಭಿವೃದ್ಧಿ ವಿಭಾಗದ ಅಧಿಕಾರಿಗಳ ಗಮನಕ್ಕೆ ತಂದಿದ್ದರು.

‘ನಮ್ಮ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಕೆರೆಗೆ ಕೊಳಚೆ ನೀರು ಸೇರುತ್ತಿಲ್ಲ. ನೀರಿನಲ್ಲಿ ಕರಗಿರುವ ಆಮ್ಲಜನಕದ ಪ್ರಮಾಣವೂ ವ್ಯತ್ಯಯವಾಗಿಲ್ಲ. ಆಮ್ಲಜನಕದ ಕೊರತೆ ಉಂಟಾದರೆ ಮೊದಲು ಮೀನಿನ ಮರಿಗಳು ಸಾಯುತ್ತವೆ. ನಂತರ ದೊಡ್ಡ ಮೀನುಗಳು ಸಾಯುತ್ತವೆ. ಸಾಮಾನ್ಯವಾಗಿ ಹಕ್ಕಿಗಳು ಇದರಿಂದ ಸಾಯುವುದಿಲ್ಲ. ಕೆರೆಗೆ ವಿಷ ಪದಾರ್ಥ ಸೇರುತ್ತಿದ್ದರೂ ಮೊದಲು ಮೀನು ಸಾಯಬೇಕಿತ್ತು. ಹಕ್ಕಿಗಳೇಕೆ ಸಾಯುತ್ತಿವೆ ಎಂದು ತಿಳಿಯುತ್ತಿಲ್ಲ’ ಎನ್ನುತ್ತಾರೆ ಬಿಬಿಎಂಪಿ ಕೆರೆ ಅಭಿವೃದ್ಧಿ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಪಿ.ಜಗನ್ನಾಥ ರಾವ್‌.

‘ಕೆಲವೊಮ್ಮೆ ವೈರಾಣು ಸೋಂಕಿನಿಂದ ಜ್ವರ ಬಂದರೂ ಹಕ್ಕಿಗಳು ಸಾಯುತ್ತವೆ. ಹಾಗಾಗುತ್ತಿದ್ದರೆ ಅಕ್ಕ ಪಕ್ಕದ ಕೆರೆಗಳಲ್ಲೂ ನಾಮಗೋಳಿ ಗಳೂ ಸಾಯಬೇಕಿತ್ತು. ಆದರೆ ಈ ಕೆರೆಯ ಸಮೀಪದಲ್ಲಿರುವ ಕೂಡ್ಲು ಕೆರೆ, ಹರಳೂರು ಕೆರೆ ಹಾಗೂ ಕೈಕೊಂಡ್ರಹಳ್ಳಿ ಕೆರೆಗಳಲ್ಲಿ ಇಂತಹ ಪ್ರಕರಣ ವರದಿಯಾಗಿಲ್ಲ’ ಎಂದರು.

‘ವಿಷಪ್ರಾಶನದಿಂದ ಅಥವಾ ಕಲುಷಿತ ಆಹಾರ ಸೇವನೆಯಿಂದಲೂ ಹಕ್ಕಿಗಳು ಸಾಯುವ ಸಾಧ್ಯತೆ ಇದೆ. ಇದನ್ನು ಪತ್ತೆಹಚ್ಚ ಬೇಕಾದರೆ ಸತ್ತ ನಾಲ್ಕು ಗಂಟೆಗಳ ಒಳಗೆ ಅವುಗಳ ಮರಣೋತ್ತರ ಪರೀಕ್ಷೆ ನಡೆಸಬೇಕು. ಹಕ್ಕಿಗಳು ಸತ್ತ ವಿಷಯ ನಮಗೆ ತಡ ವಾಗಿ ತಿಳಿಯಿತು. ಹಾಗಾಗಿ ಅವುಗಳ ಸಾವಿಗೆ ನಿಖರ ಕಾರಣ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ’ ಎಂದು ಅವರು ತಿಳಿಸಿದರು.

‘ಈ ಕೆರೆಯಲ್ಲಿ ಹಕ್ಕಿಗಳ ಚಲನವಲನದ ಮೇಲೆ ನಿಗಾ ಇಟ್ಟಿದ್ದೇವೆ. ಶನಿವಾರ ಹಾಗೂ ಭಾನುವಾರ ಯಾವುದೇ ಹಕ್ಕಿ ಸತ್ತಿಲ್ಲ. ಇನ್ನೂ ಕೆಲವು ದಿನಗಳು ನಿಗಾ ಇಡುತ್ತೇವೆ’ ಎಂದರು.

62 ಎಕರೆ ವಿಸ್ತೀರ್ಣದ ಈ ಕೆರೆಯನ್ನು ಬಿಬಿಎಂಪಿ 2015–16ನೇ ಸಾಲಿನಲ್ಲಿ ಅಭಿವೃದ್ಧಿ ಪಡಿಸಿತ್ತು. ಆ ಬಳಿಕ ಸ್ಥಳೀಯರೇ ನಿರ್ವಹಣೆ ಮಾಡುತ್ತಿದ್ದಾರೆ.

‘ಅಭಿವೃದ್ಧಿಯ ಬಳಿಕ ಈ ಕೆರೆ ಸ್ವಚ್ಛವಾಗಿದೆ. ಕಳೆ ಸಸ್ಯಗಳೂ ಬೆಳೆದಿಲ್ಲ’ ಎಂದು ಸ್ಥಳೀಯರೊಬ್ಬರು ತಿಳಿಸಿದರು.

**

ಇದೊಂದು ವಿಚಿತ್ರ ಘಟನೆ. ಇದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ವೈರಾಣು ಸೋಂಕಿನಿಂದ ಹಕ್ಕಿಗಳು ಸತ್ತಿರುವ ಸಾಧ್ಯತೆ ಕಡಿಮೆ.

-ಪಿ.ಜಗನ್ನಾಥ ರಾವ್‌, ಡಿಸಿಎಫ್‌ (ಕೆರೆ ಅಭಿವೃದ್ಧಿ) ಬಿಬಿಎಂಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.