ADVERTISEMENT

ಕೈಗಾರಿಕೆಗಳಿಗೆ ಸಾಲದ ಪ್ರಮಾಣ ಹೆಚ್ಚಿಸಿ: ಕಾಸಿಯಾ

ಸಣ್ಣ ಕೈಗಾರಿಕೆಗಳು ಸಹಜ ಸ್ಥಿತಿಗೆ ಮರಳಲು ಸರ್ಕಾರ ಕ್ರಮ ಕೈಗೊಳ್ಳಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 29 ಜೂನ್ 2020, 11:52 IST
Last Updated 29 ಜೂನ್ 2020, 11:52 IST
ಆರ್. ರಾಜು 
ಆರ್. ರಾಜು    

ಬೆಂಗಳೂರು: ‘ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಹಲವು ವರ್ಷಗಳಿಂದ ನೀಡುತ್ತಿರುವ ಬ್ಯಾಂಕ್‌ ಸಾಲದ ಪ್ರಮಾಣ ಶೇ 23ರಿಂದ ಶೇ 15ಕ್ಕೆ ಇಳಿದಿದೆ. ಈ ವಲಯಕ್ಕೆ ಹೆಚ್ಚಿನ ಹಣದ ಹರಿವು ಬರುವಂತೆ ಅಥವಾ ಹೆಚ್ಚು ಸಾಲ ಸೌಲಭ್ಯ ಒದಗಿಸಲು ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕು’ ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಒಕ್ಕೂಟದ (ಕಾಸಿಯಾ) ಅಧ್ಯಕ್ಷ ಆರ್. ರಾಜು ಹೇಳಿದರು.

‘ಕೈಗಾರಿಕೆಗಳಿಗೆ ನೀಡುವ ಸಾಲದ ಮೌಲ್ಯಮಾಪನ ಮಾಡುವ ಅಗತ್ಯವೂ ಇದೆ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಸಾಲದ ಬಡ್ಡಿದರವನ್ನು ಶೇ 4ಕ್ಕೆ ಇಳಿಸಬೇಕು, ಸಿಡ್ಬಿ ಅಥವಾ ನಬಾರ್ಡ್‌ನಿಂದ ನೀಡುವ ಮರುಸಾಲ ಪ್ರಮಾಣ ಮತ್ತು ವ್ಯಾಪ್ತಿಯನ್ನು ವಿಸ್ತರಿಸಬೇಕು. ಸಾಲದ ದಾಖಲೆಗಳ ನೋಂದಣಿಗೆ ಕಟ್ಟುವ ಸ್ಟ್ಯಾಂಪ್‌ ಡ್ಯೂಟಿ ಮನ್ನಾ ಮಾಡಬೇಕು’ ಎಂದು ಅವರು ಒತ್ತಾಯಿಸಿದರು.

ADVERTISEMENT

‘ಸಣ್ಣ ಕೈಗಾರಿಕೆಗಳು ಅತಿ ದೊಡ್ಡ ಉದ್ಯೋಗ ಕ್ಷೇತ್ರ. ದುರ್ಬಲರಿಗೆ ಉದ್ಯೋಗ ಮತ್ತು ಜೀವನೋಪಾಯ ಸೃಷ್ಟಿಸಲು ಈ ಕೈಗಾರಿಕೆಗಳ ಉಳಿವು ನಿರ್ಣಾಯಕವಾಗಿದೆ. ಕೈಗಾರಿಕೆಗಳು ಆದಷ್ಟು ಸಹಜ ಸ್ಥಿತಿಗೆ ಮರಳುವಂತೆ ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಅವರು ಹೇಳಿದರು.

‘ಬದಲಾದ ಸನ್ನಿವೇಶದಲ್ಲಿ ಕಾರ್ಮಿಕರ ವಿಷಯಗಳು ಸಮಸ್ಯೆಯಾಗಲಿವೆ.ಕನಿಷ್ಠ ವೇತನ ವಿಷಯಗಳಿಗೆ ಸಂಬಂಧಿಸಿದಂತೆ ಉದ್ಯಮ ಮತ್ತು ಕಾರ್ಮಿಕರ ನಡುವೆ ಯಾವುದೇ ಅನಗತ್ಯ ಸಂಘರ್ಷಗಳು ಏರ್ಪಡದಂತೆ ಸರ್ಕಾರ ನೋಡಿಕೊಳ್ಳಬೇಕು’ ಎಂದು ಅವರು ಹೇಳಿದರು.

‘ಈಗ ಉದ್ಯಮದ ಅಗತ್ಯಗಳಿಗೆ ಸಿದ್ಧವಾಗುವಂತೆ ಶಿಕ್ಷಣ ವ್ಯವಸ್ಥೆಯನ್ನೂ ಬದಲಾಯಿಸಬೇಕಾಗಿದೆ. ತಾಂತ್ರಿಕ ಶಿಕ್ಷಣದಲ್ಲಿ 6 ತಿಂಗಳ ಕೈಗಾರಿಕಾ ತರಬೇತಿಯನ್ನು ಕಡ್ಡಾಯಗೊಳಿಸಬೇಕು’ ಎಂದು ಅವರು ಸಲಹೆ ನೀಡಿದರು.

ಹೂಡಿಕೆ ಹೆಚ್ಚಳ:

‘ಭೂಸುಧಾರಣಾ ಕಾಯ್ದೆಗೆ ತರುತ್ತಿರುವ ತಿದ್ದುಪಡಿಗಳಿಂದಾಗಿಕೃಷಿ ಮತ್ತು ಆಹಾರ ಸಂಸ್ಕರಣೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಹೂಡಿಕೆ ಹೆಚ್ಚಾಗಲಿದೆ ಮತ್ತು ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಆರ್ಥಿಕ ಸಂಬಂಧಕ್ಕೆ ಹೊಡೆತ ಬೀಳದಿರಲಿ:

‘ಚೀನಾ ದೊಡ್ಡ ಉತ್ಪಾದನಾ ಆರ್ಥಿಕ ಹೊಂದಿರುವ ದೇಶ. ಭಾರತ ಸೇರಿದಂತೆ ವಿಶ್ವದ ಅನೇಕ ದೇಶಗಳು ಚೀನಾವನ್ನು ಅವಲಂಬಿಸಿವೆ. ಈಗಿನ ಸಂಘರ್ಷ ಉಭಯ ದೇಶಗಳ ನಡುವಣ ಆರ್ಥಿಕ ಸಂಬಂಧವನ್ನು ನಿಷ್ಕ್ರಿಯಗೊಳಿಸದಂತೆ ನೋಡಿಕೊಳ್ಳಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.