ಕಾರ್ಯಕ್ರಮದಲ್ಲಿ ಎನ್. ಸಂತೋಷ್ ಹೆಗ್ಡೆ ಅವರು (ಎಡದಿಂದ ನಾಲ್ಕನೆಯವರು) ಕೃತಕ ಬುದ್ಧಿಮತ್ತೆ ಆಧಾರಿತ ಜೀವನಶೈಲಿ ರೋಗಗಳ ಕೈಪಿಡಿ ಬಿಡುಗಡೆ ಮಾಡಿದರು. (ಎಡದಿಂದ) ಡಾ. ರಾಜಕುಮಾರ್ ಚನ್ನಬಸವಯ್ಯ, ಡಾ. ರಾಮ್ ಮೋಹನ್ ಭಟ್, ಡಾ.ಎಸ್. ಚಂದ್ರಕುಮಾರ್ ಮತ್ತು ಡಾ.ವಿಜಯ ಭಾಸ್ಕರ್ ಪಾಲ್ಗೊಂಡಿದ್ದರು
–ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಅನಾರೋಗ್ಯ ಸಮಸ್ಯೆಗಳನ್ನು ಪತ್ತೆ ಮಾಡಿ, ರೋಗಿಗೆ ನಿಖರ ಚಿಕಿತ್ಸೆ ಒದಗಿಸಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಸಹಕಾರಿ. ಆದ್ದರಿಂದ ವೈದ್ಯಕೀಯ ಕ್ಷೇತ್ರದಲ್ಲಿ ಈ ತಂತ್ರಜ್ಞಾನಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು’ ಎಂದು ನಿವೃತ್ತ ಲೋಕಾಯುಕ್ತ, ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ತಿಳಿಸಿದರು.
ಕಾವೇರಿ ಆಸ್ಪತ್ರೆಯು ನಗರದಲ್ಲಿ ಬುಧವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಜೀವನಶೈಲಿ ರೋಗಗಳ ಚಿಕಿತ್ಸಾ ವಿಭಾಗಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು.
‘ದೇಶದಲ್ಲಿನ ಎಲ್ಲರಿಗೂ ಗುಣಮಟ್ಟದ ವೈದ್ಯಕೀಯ ಸೇವೆ ಸಿಗಬೇಕಿದೆ. ಸರ್ಕಾರಿ ವ್ಯವಸ್ಥೆಯಡಿ ಇದು ಸಾಧ್ಯವಾಗದಿದ್ದರಿಂದ ಖಾಸಗಿ ಆಸ್ಪತ್ರೆಗಳು ಈ ಕೊರತೆ ನೀಗಿಸುತ್ತಿವೆ. ಈಗ ಕಾವೇರಿ ಆಸ್ಪತ್ರೆಯು ಎಐ ಆಧಾರಿತ ಚಿಕಿತ್ಸಾ ವಿಭಾಗ ಪ್ರಾರಂಭ ಮಾಡಿರುವುದು ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಯಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾವೇರಿ ಸಮೂಹ ಆಸ್ಪತ್ರೆಯ ಸಂಸ್ಥಾಪಕ ಡಾ.ಎಸ್. ಚಂದ್ರಕುಮಾರ್ ಮಾತನಾಡಿ, ‘ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಇತ್ತೀಚಿನ ವರದಿ ಪ್ರಕಾರ, ದೇಶದಲ್ಲಿ ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳು ಮತ್ತು ದೀರ್ಘಕಾಲೀನ ಶ್ವಾಸಕೋಶ ಸಂಬಂಧಿ ಸಮಸ್ಯೆಗಳು ಹೆಚ್ಚುತ್ತಿವೆ. ಶೇ 60ಕ್ಕಿಂತ ಹೆಚ್ಚು ಮರಣಗಳು ಈ ಕಾಯಿಲೆಗಳಿಂದ ವರದಿಯಾಗುತ್ತಿವೆ. ವೈದ್ಯಕೀಯ ಸೇವಾ ವ್ಯವಸ್ಥೆಯ ಲಭ್ಯತೆಯ ಕೊರತೆಯೇ ಇದಕ್ಕೆ ಕಾರಣ. ಆದ್ದರಿಂದ ಜನರಿಗೆ ಜೀವನಶೈಲಿ ಆಧಾರಿತ ಕಾಯಿಲೆಗಳ ತಪಾಸಣೆ ಮತ್ತು ಚಿಕಿತ್ಸೆಯ ಕುರಿತು ಅರಿವಿನ ಅಗತ್ಯವಿದೆ’ ಎಂದು ಹೇಳಿದರು.
ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ರಾಜಕುಮಾರ್ ಚನ್ನಬಸವಯ್ಯ ಮಾತನಾಡಿ, ‘ಎಐ ಆಧಾರಿತ ನೂತನ ವಿಭಾಗದಲ್ಲಿ ಜೀವನಶೈಲಿ ಆಧಾರದ ಮೇಲೆ ಆರಂಭಿಕ ಹಂತದಲ್ಲೇ ಸಮಗ್ರ ರೋಗ ಪತ್ತೆ ಮತ್ತು ಚಿಕಿತ್ಸೆ ಒದಗಿಸಲಾಗುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.