ಬೆಂಗಳೂರು: ಬೆಂಗಳೂರು ಜಲಮಂಡಳಿ ನೀರಿನ ದರ ಏರಿಕೆ ಮಾಡಿದ್ದು, ಗೃಹ ಬಳಕೆ ನೀರಿಗೆ ಪ್ರತಿ ಲೀಟರ್‌ಗೆ 0.15 ಪೈಸೆಯಿಂದ 1 ಪೈಸೆವರೆಗೂ ಹೆಚ್ಚಳವಾಗಲಿದೆ. ಏಪ್ರಿಲ್ 10ರಿಂದಲೇ ಹೊಸ ದರ ಜಾರಿಯಾಗಲಿದೆ.
ವಸತಿ ಸಮುಚ್ಛಯ ಕಟ್ಟಡಗಳಿಗೆ ಲೀಟರ್‌ಗೆ 0.30 ಪೈಸೆಯಿಂದ 1 ಪೈಸೆಯವರೆಗೂ ಹೆಚ್ಚಳವಾಗಿದೆ. ಹೆಚ್ಚು ನೀರು ಬಳಸುವ(ಬಲ್ಕ್) ವಸತಿಯೇತರ (ವಾಣಿಜ್ಯ/ಕೈಗಾರಿಕೆ) ಸಂಪರ್ಕಕ್ಕೆ 0.90 ಪೈಸೆಯಿಂದ 1.90 ಪೈಸೆವರೆಗೂ ಏರಿಕೆಯಾಗಿದೆ.
ನೀರಿನ ದರದ ಜೊತೆಗೆ ಒಳಚರಂಡಿ ಶುಲ್ಕವನ್ನು ಶೇಕಡ 25ರಷ್ಟು ಹೆಚ್ಚಿಸಲಾಗಿದೆ. ಜೊತೆಗೆ, ಕೊಳವೆ ಬಾವಿ/ ಬಾವಿ/ಸಾರ್ವಜನಿಕ ಕೊಳವೆ ಬಾವಿಗಳಿಗೆ ವಿಧಿಸುವ ಶುಲ್ಕವನ್ನು ಪ್ರತಿ ಮನೆಗೆ ₹30 ಮತ್ತು ವಸತಿಯೇತರ ಸಂಪರ್ಕಕ್ಕೆ ₹125ಕ್ಕೆ ಹೆಚ್ಚಳ ಮಾಡಲಾಗಿದೆ.
ಪ್ರತಿ ವರ್ಷ ಶೇ 3ರಷ್ಟು ಹೆಚ್ಚಳ: ಪ್ರತಿ ವರ್ಷ ಏಪ್ರಿಲ್ 1ರಿಂದ ನೀರಿನ ದರವನ್ನು ಶೇ 3ರಷ್ಟು ಏರಿಕೆ ಮಾಡಲು ನಿರ್ಧರಿಸಲಾಗಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ರಾಮ್‌ಪ್ರಸಾತ್ ಮನೋಹರ್ ತಿಳಿಸಿದರು.
‘ಒಮ್ಮೆಲೆ ದರ ಹೆಚ್ಚಳದ ಮೂಲಕ ಜನರಿಗೆ ಹೊರೆಯಾಗುವುದನ್ನು ಕಡಿಮೆ ಮಾಡುವ ಉದ್ದೇಶದಿಂದ ಹಾಗೂ ಕರ್ನಾಟಕ ರಾಜ್ಯ ಆಡಳಿತ ಸುಧಾರಣಾ ಆಯೋಗದ ಶಿಫಾರಸಿನಂತೆ 2026ರ ಏಪ್ರಿಲ್‌ನಿಂದ ಪ್ರತಿ ವರ್ಷ ನೀರಿನ ದರವನ್ನು ಶೇ 3ರಷ್ಟು ಹೆಚ್ಚಳ ಮಾಡಲು ಜಲಮಂಡಳಿ ನಿರ್ಧರಿಸಿದೆ’ ಎಂದು ಅವರು ವಿವರಿಸಿದರು.
‘11 ವರ್ಷಗಳಿಂದ ನೀರಿನ ದರವನ್ನು ಹೆಚ್ಚಿಸಿಲ್ಲ. ಸ್ವಾಯತ್ತ ಸಂಸ್ಥೆಯಾಗಿರುವ ಜಲಮಂಡಳಿಗೆ ಸರ್ಕಾರದಿಂದ ಹಣಕಾಸಿನ ನೆರವಿಲ್ಲ. ಕುಡಿಯುವ ನೀರಿಗೆ ವಿಧಿಸುವ ಶುಲ್ಕವೇ ಪ್ರಮುಖ ಆದಾಯವಾಗಿದೆ. ದಶಕದಲ್ಲಿ ವಿದ್ಯುತ್ ವೆಚ್ಚವು ಶೇಕಡ 107 ರಷ್ಟು ಹೆಚ್ಚಾಗಿದೆ’ ಎಂದು ವಿವರಿಸಿದರು.
‘ಪ್ರಸ್ತುತ ಬೆಂಗಳೂರು ಜಲಮಂಡಳಿಯ ತಿಂಗಳ ವೆಚ್ಚ ₹200 ಕೋಟಿ. ಆದರೆ, ಪ್ರತಿ ತಿಂಗಳು ಸಂಗ್ರಹಣೆ ಆಗುತ್ತಿರುವುದು ₹120 ಕೋಟಿ. ಪ್ರತಿ ತಿಂಗಳು ಸುಮಾರು ₹ 80 ಕೋಟಿ ಆರ್ಥಿಕ ಕೊರತೆಯನ್ನು ಜಲಮಂಡಳಿ ನಿಭಾಯಿಸಬೇಕಾಗಿದೆ. ಇದನ್ನು ಸರಿದೂಗಿಸುವುದಕ್ಕಾಗಿ ನೀರಿನ ದರವನ್ನು ಏರಿಸಲು ಉದ್ದೇಶಿಸಲಾಗಿದೆ’ ಎಂದು ರಾಮ್‌ಪ್ರಸಾತ್ ತಿಳಿಸಿದರು.
ಜನಸಾಮಾನ್ಯರಿಗೆ ಹೊರೆಯಾಗದಂತೆ ನೀರಿನ ದರವನ್ನು ಏರಿಕೆ ಮಾಡಲಾಗಿದೆ. ಇಂದಿನಿಂದ(ಏ.10) ದರ ಏರಿಕೆ ಅಧಿಕೃತವಾಗಿ ಜಾರಿಯಾಗಲಿದೆ.-ರಾಮ್ ಪ್ರಸಾತ್ ಮನೋಹರ್, ಅಧ್ಯಕ್ಷ, ಜಲಮಂಡಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.