ADVERTISEMENT

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ:ಟಿ–1 ಮುಂಭಾಗ ಪಿಕ್‌ಅಪ್‌ಗೆ ಹೊಸ ಆ್ಯಪ್

ವಿಮಾನ ನಿಲ್ದಾಣದ ಅಧಿಕಾರಿಗಳು, ಟ್ಯಾಕ್ಸಿ ಸಂಘಟನೆಗಳ ಜತೆ ಸಭೆ ನಡೆಸಿ ತಿರ್ಮಾನ

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 23:30 IST
Last Updated 24 ಜನವರಿ 2026, 23:30 IST
ದೇವನಹಳ್ಳಿ ಟರ್ಮಿನಲ್ 1 ಆಗಮನ ದ್ವಾರದ ಸಮೀಪವಿರುವ ಪಿಕಪ್ ಲೇನ್‌ನಲ್ಲಿ ಟ್ಯಾಕ್ಸಿಗೆ ಹತ್ತುತ್ತಿರುವ ವಿಮಾನಯಾನಿಗಳು 
ದೇವನಹಳ್ಳಿ ಟರ್ಮಿನಲ್ 1 ಆಗಮನ ದ್ವಾರದ ಸಮೀಪವಿರುವ ಪಿಕಪ್ ಲೇನ್‌ನಲ್ಲಿ ಟ್ಯಾಕ್ಸಿಗೆ ಹತ್ತುತ್ತಿರುವ ವಿಮಾನಯಾನಿಗಳು    

ದೇವನಹಳ್ಳಿ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್–1 ಮುಂಭಾಗದ ಕರ್ಬ್‌ಸೈಡ್‌ನಲ್ಲಿ ಆಗಮನ ದ್ವಾರದಿಂದ ಹೊರಬರುವ ಪ್ರಯಾಣಿಕರನ್ನು ನೇರವಾಗಿ ಹತ್ತಿಸಿಕೊಂಡು ಹೋಗಲು ಅಗ್ರಿಗೇಟರ್‌ ಕಂಪನಿಗಳಿಗೆ ಸೇರದ ಹಳದಿ ಬೋರ್ಡ್ ಖಾಸಗಿ ಟ್ಯಾಕ್ಸಿಗಳಿಗೆ ಹೊಸ ಮೊಬೈಲ್ ಆ್ಯಪ್‌ ಸಿದ್ಧಪಡಿಸಲಾಗುತ್ತಿದೆ.

ಕಳೆದ ಡಿಸೆಂಬರ್‌ನಲ್ಲಿ ವಿಮಾನ ನಿಲ್ದಾಣದ ಮುಂಭಾಗದಲ್ಲಿ ವಾಹನಗಳ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಖಾಸಗಿ ಟ್ಯಾಕ್ಸಿಗಳನ್ನು ಟರ್ಮಿನಲ್‌ನಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿರುವ ಪಿ3 ಹಾಗೂ ಪಿ4 ಪಾರ್ಕಿಂಗ್ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿತ್ತು. ಇದರಿಂದ ಟರ್ಮಿನಲ್–1ಕ್ಕೆ ಆಗಮಿಸುವ ಪ್ರಯಾಣಿಕರು ಲಗೇಜ್‌ ಹೊತ್ತು ದೂರ ನಡೆದು ಹೋಗಿ ಟ್ಯಾಕ್ಸಿ ಹತ್ತಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಈ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿ ಖಾಸಗಿ ಟ್ಯಾಕ್ಸಿ ಚಾಲಕರು ಹಲವು ದಿನಗಳ ಕಾಲ ಪ್ರತಿಭಟನೆ ನಡೆಸಿದ್ದರು. ಸಂಸದ ಡಾ.ಕೆ.ಸುಧಾಕರ್ ಹಾಗೂ ರಾಜ್ಯ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ, ಬಿಐಎಎಲ್‌ ನಿರ್ಧಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

ADVERTISEMENT

ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೂಚನೆ ನೀಡಿದ್ದರು. ಇದರ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ) ವಿಮಾನ ನಿಲ್ದಾಣದ ಅಧಿಕಾರಿಗಳು ಹಾಗೂ ಟ್ಯಾಕ್ಸಿ ಸಂಘಟನೆಗಳ ಜತೆ ಸಭೆ ನಡೆಸಿ, ಹೊಸ ಆ್ಯಪ್‌ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಹೊಸ ವ್ಯವಸ್ಥೆಯಂತೆ ಒಲಾ ಮತ್ತು ಉಬರ್‌ಗೆ ಸೇರದ ಸಾಮಾನ್ಯ ಹಳದಿ ಬೋರ್ಡ್ ಟ್ಯಾಕ್ಸಿಗಳು ಕೆಎಸ್‌ಟಿಡಿಸಿ ಅಧಿಕೃತ ಆ್ಯಪ್‌ ಅಥವಾ ವೆಬ್‌ಸೈಟ್ ಮೂಲಕ ಮುಂಚಿತವಾಗಿ ಬುಕಿಂಗ್ ಮಾಡಿಕೊಂಡರೆ ಟರ್ಮಿನಲ್–1ರ ಆಗಮನ ವಿಭಾಗದಲ್ಲಿರುವ ಪಿಕಪ್ ಲೇನ್‌ಗಳಿಗೆ ಪ್ರವೇಶ ಪಡೆಯಬಹುದು. ಇದರಿಂದ ಪ್ರಯಾಣಿಕರು ದೂರದ ಪಾರ್ಕಿಂಗ್ ಪ್ರದೇಶದವರೆಗೆ ನಡೆದು ಹೋಗುವ ತೊಂದರೆ ತಪ್ಪಲಿದೆ.

ಮೊದಲ ಹಂತದಲ್ಲಿ ಪ್ರಯೋಗಾತ್ಮಕವಾಗಿ 500 ಟ್ಯಾಕ್ಸಿಗಳನ್ನು ಒಳಗೊಂಡು ಯೋಜನೆ ಜಾರಿಗೊಳಿಸಲು ಕೆಎಸ್‌ಟಿಡಿಸಿ ಮುಂದಾಗಿದೆ. ಪ್ರಯಾಣಿಕರ ಸಂಖ್ಯೆ ಗಮನದಲ್ಲಿಟ್ಟು ಅಗತ್ಯವಿದ್ದರೆ ಲೇನ್‌ 2 ಮತ್ತು 3 ಬಳಸಲು ಸಹ ಅವಕಾಶ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಐಎಎಲ್‌ ವಕ್ತಾರರು, ವಿಮಾನ ನಿಲ್ದಾಣದೊಂದಿಗೆ ಒಪ್ಪಂದ ಮಾಡಿಕೊಂಡಿರುವ ಒಲಾ, ಉಬರ್ ಸೇರಿದಂತೆ ಅಗ್ರಿಗೇಟರ್‌ಗಳಿಗೆ ಈಗಾಗಲೇ ಪ್ರತ್ಯೇಕ ಪಿಕಪ್ ಸ್ಥಳಗಳನ್ನು ಒದಗಿಸಲಾಗಿದೆ ಎಂದು ಹೇಳಿದರು. ಈ ವ್ಯಾಪ್ತಿಗೆ ಸೇರದ ಖಾಸಗಿ ಟ್ಯಾಕ್ಸಿಗಳಿಗೂ ಅನುಕೂಲವಾಗುವಂತೆ ಕೆಎಸ್‌ಟಿಡಿಸಿ ಕ್ಯಾಬ್‌ಗಳಿಗೆ ಮೀಸಲಾದ ಸ್ಥಳದಲ್ಲಿ ಮುಂಚಿತ ಬುಕಿಂಗ್ ಆಧಾರದಲ್ಲಿ ಪಿಕಪ್‌ಗೆ ಅವಕಾಶ ನೀಡುವ ಡಿಜಿಟಲ್ ವ್ಯವಸ್ಥೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.

ಹೊಸ ವ್ಯವಸ್ಥೆ ಹೇಗೆ?
ಒಲಾ–ಉಬರ್‌ಗೆ ಸೇರದ ಹಳದಿ ಬೋರ್ಡ್ ಟ್ಯಾಕ್ಸಿಗಳು
ಕೆಎಸ್‌ಟಿಡಿಸಿ ಆ್ಯಪ್‌ / ವೆಬ್‌ಸೈಟ್‌ನಲ್ಲಿ ಮುಂಚಿತ ಬುಕಿಂಗ್
ಟರ್ಮಿನಲ್–1 ಆಗಮನ ಪಿಕಪ್ ಲೇನ್‌ಗೆ ನೇರ ಪ್ರವೇಶ

ಯಾರಿಗೆ ಲಾಭ?
ಪ್ರಯಾಣಿಕರಿಗೆ ದೂರ ನಡೆದು ಹೋಗುವ ತೊಂದರೆ ಇಲ್ಲ
ಖಾಸಗಿ ಟ್ಯಾಕ್ಸಿಗಳಿಗೆ ಸಮಾನ ಅವಕಾಶ

ಪ್ರಯೋಗ ಹಂತ
ಮೊದಲ ಹಂತದಲ್ಲಿ 500 ಟ್ಯಾಕ್ಸಿಗಳು
ಬೇಡಿಕೆಯಿದ್ದರೆ ಲೇನ್‌ 2 ಮತ್ತು 3 ಬಳಕೆಗೂ ಅವಕಾಶ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.