ADVERTISEMENT

70 ಸಾಧಕರಿಗಷ್ಟೇ ಕೆಂಪೇಗೌಡ ಪ್ರಶಸ್ತಿ?

ಅರ್ಹರ ಆಯ್ಕೆಗೆ ನ್ಯಾ.ಎ.ಜೆ.ಸದಾಶಿವ ನೇತೃತ್ವದ ಸಮಿತಿ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2019, 19:48 IST
Last Updated 6 ಆಗಸ್ಟ್ 2019, 19:48 IST
   

ಬೆಂಗಳೂರು: ಬಿಬಿಎಂಪಿ ವತಿಯಿಂದ ನೀಡುವ ನಾಡಪ್ರಭು ಕೆಂಪೇಗೌಡ ಪ್ರಶಸ್ತಿಗೆ ಈ ಬಾರಿ 70 ಸಾಧಕರನ್ನು ಮಾತ್ರ ಆಯ್ಕೆ ಮಾಡಲು ತೀರ್ಮಾನಿಸಲಾಗಿದೆ. ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡುವ ಸಲುವಾಗಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿದೆ.

ಕಳೆದ ವರ್ಷ 550ಕ್ಕೂ ಹೆಚ್ಚು ಮಂದಿಗೆ ಪ್ರಶಸ್ತಿ ನೀಡಲಾಗಿತ್ತು. ಪ್ರಶಸ್ತಿ ಪಟ್ಟಿಯಲ್ಲಿ ಹೆಸರು ಇಲ್ಲದವರಿಗೂ ಕೊನೆ ಕ್ಷಣದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು. ಇಡೀ ಕಾರ್ಯಕ್ರಮವೇ ಗೊಂದಲದ ಗೂಡಾಗಿತ್ತು. ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಲು
ನಿರ್ದಿಷ್ಟ ಮಾನದಂಡ ಅನುಸರಿಸದಿದ್ದುದು ಸಾರ್ವಜನಿಕರ ಟೀಕೆಗೆ ಗುರಿಯಾಗಿತ್ತು. ಹಾಗಾಗಿ ಈ ಬಾರಿ ಬಿಬಿಎಂಪಿ ಎಚ್ಚರಿಕೆ ವಹಿಸಿದೆ. ಅರ್ಹರ ಆಯ್ಕೆಗೆ ಸಮಿತಿ ರಚಿಸಿದೆ. ವಿವಿಧ ಕ್ಷೇತ್ರಗಳ 8 ಮಂದಿ ತಜ್ಞರು ಹಾಗೂಬಿಬಿಎಂಪಿಯ ಇಬ್ಬರು ಅಧಿಕಾರಿಗಳು ಈ ತಂಡದಲ್ಲಿದ್ದಾರೆ.

ನೃತ್ಯ, ಸಂಗೀತ, ಚಿತ್ರಕಲೆ, ಬಾಲ ಪ್ರತಿಭೆ, ಸಾಹಿತ್ಯ,ಸಾಂಸ್ಕೃತಿಕ, ವೈದ್ಯಕೀಯ, ಸಮಾಜಸೇವೆ, ಸರ್ಕಾರಿ ಸೇವೆ, ಶಿಕ್ಷಣ, ರಂಗಭೂಮಿ, ಕನ್ನಡ ಸೇವೆ, ಚಲನಚಿತ್ರ, ಮಾಧ್ಯಮ, ಕ್ರೀಡೆ ಹಾಗೂ ವಿವಿಧ ಸೇರಿ 16 ಕ್ಷೇತ್ರಗಳ ಸಾಧಕರಿಗೆ ಈ ಬಾರಿ ಪ್ರಶಸ್ತಿ ನೀಡಲಾಗುತ್ತಿದೆ.

ADVERTISEMENT

ಪ್ರಶಸ್ತಿ ಬಯಸಿ ಸಲ್ಲಿಕೆಯಾಗಿರುವ 450ಕ್ಕೂ ಹೆಚ್ಚು ಅರ್ಜಿಗಳನ್ನು ಬಿಬಿಎಂಪಿಯು ಆಯ್ಕೆ ಸಮಿತಿಗೆ ಹಸ್ತಾಂತರಿಸಿದೆ. ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡುವ ಸಲುವಾಗಿ ಎರಡು ಸುತ್ತುಗಳ ಸಭೆ ನಡೆಸಿರುವ ಸಮಿತಿ ಶೀಘ್ರವೇ ಅಂತಿಮ ಪಟ್ಟಿಯನ್ನು ಬಿಬಿಎಂಪಿಗೆ ಹಸ್ತಾಂತರಿಸಲಿದೆ.

‘ಈ ಹಿಂದೆ ಒತ್ತಡಕ್ಕೆ ಮಣಿದು ಕೆಲವರಿಗೆ ಪ್ರಶಸ್ತಿ ನೀಡಲಾಗುತ್ತಿತ್ತು. ಹಾಗಾಗಿ ಪುರಸ್ಕೃತರ ಸಂಖ್ಯೆ ಮಿತಿ ಮೀರುತ್ತಿತ್ತು. ಈ ಬಾರಿ ಅಂತಹ ತಪ್ಪಿಗೆ ಅವಕಾಶ ನೀಡುವುದಿಲ್ಲ. ಅರ್ಹರನ್ನಷ್ಟೇ ಆಯ್ಕೆ ಮಾಡುವ ಮೂಲಕ ಪ್ರಶಸ್ತಿಯ ಘನತೆ ಹೆಚ್ಚಿಸುವ ಉದ್ದೇಶ ನಮ್ಮದು. ಈ ಸಲುವಾಗಿ ತಜ್ಞರ ಸಮಿತಿ ರಚಿಸಿದ್ದು, ಅರ್ಹರ ಆಯ್ಕೆಯ ಜವಾಬ್ದಾರಿಯನ್ನು ಸಮಿತಿಗೆ ವಹಿಸಲಾಗಿದೆ’ ಎಂದು ಮೇಯರ್ ಗಂಗಾಂಬಿಕೆ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.