ADVERTISEMENT

ವಿಲಕ್ಷಣ ವ್ಯಕ್ತಿಗಳನ್ನು ಪಠ್ಯಪುಸ್ತಕ ಸಮಿತಿಗೆ ನೇಮಿಸಬಾರದು: ನಂಜಾವಧೂತ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 27 ಜೂನ್ 2022, 8:45 IST
Last Updated 27 ಜೂನ್ 2022, 8:45 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಶಾಲಾ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಗಳಿಗೆ ವಿಲಕ್ಷಣ ವ್ಯಕ್ತಿತ್ವದವರನ್ನು ನೇಮಿಸಬಾರದು. ಅಂತಹ ಸಮಿತಿಗಳಿಗೆ ನೇಮಕ ಮಾಡುವ ಮುನ್ನ ಸರ್ಕಾರ ಎಚ್ಚರಿಕೆ ವಹಿಸಬೇಕು ಎಂದು ಪಟ್ಟನಾಯಕನಹಳ್ಳಿ ಗುರುಗುಂಡ ಬ್ರಹ್ಮೇಶ್ವರ ಮಠದ ನಂಜಾವಧೂತ ಸ್ವಾಮೀಜಿ ಹೇಳಿದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಸೋಮವಾರ ನಡೆಯುತ್ತಿರುವ ಕೆಂಪೇಗೌಡ ಜಯಂತಿ ಸಮಾರಂಭದ ವೇದಿಕೆಯಲ್ಲೇ ಪಠ್ಯಪುಸ್ತಕ ಪರಿಷ್ಕರಣೆ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಸ್ವಾಮೀಜಿ, ರೋಹಿತ್ ಚಕ್ರತೀರ್ಥ ಅವರನ್ನು ಪಠ್ಯಪುಸ್ತಕ ಪರಿಶೀಲನಾ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದನ್ನು ವಿರೋಧಿಸಿದರು.

ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಸರ್ಕಾರ ರೂಪಿಸಿದ ಪಠ್ಯವನ್ನು ಓದಿ, ಕಲಿತು, ಪರೀಕ್ಷೆ ಬರೆಯಬೇಕು. ಅಂತಹ ಪಠ್ಯ ರೂಪಿಸುವವರು ಎಡ, ಬಲ ಅಥವಾ ಇನ್ನಿತರ ಸಿದ್ಧಾಂತದ ಹಿಂಬಾಲಕರು ಆಗಿರಬಾರದು. ಸಮಚಿತ್ತದಿಂದ ಎಲ್ಲವನ್ನೂ ನೋಡುವ ಪ್ರಾಜ್ಞರಾಗಿರಬೇಕು. ಆಳವಾದ ಅಧ್ಯಯನಶೀಲತೆ ಹೊಂದಿದ ವ್ಯಕ್ತಿಗಳನ್ನು ಪಠ್ಯಕ್ರಮ ರೂಪಿಸಲು ನೇಮಿಸಬೇಕು ಎಂದು ಹೇಳಿದರು.

ADVERTISEMENT

ಪವಿತ್ರವಾದ ನಾಡ ಬಾವುಟವನ್ನು ಯಾವುದೋ ಒಂದು ವಸ್ತುವಿಗೆ (ಚಡ್ಡಿ) ಹೋಲಿಸಿದ ವ್ಯಕ್ತಿಯನ್ನು ಪಠ್ಯಪುಸ್ತಕ ಪರಿಷ್ಕರಣೆಗೆ ನೇಮಿಸಿದ್ದು ಸರಿಯಲ್ಲ ಎಂದರು.

ಬಸವಣ್ಣ, ಡಾ.ಬಿ.ಆರ್. ಅಂಬೇಡ್ಕರ್ ಮುಂತಾದ ಮಹನೀಯರಿಗೆ ಅವಮಾನ ಹೊಸದೇನೂ ಅಲ್ಲ. ಈಗ ಶಾಲಾ ಪಠ್ಯಪುಸ್ತಕಗಳಲ್ಲಿ ಅವಮಾನ ಆಗಿರುವುದಕ್ಕೆ ಹೆಚ್ಚು ವಿರೋಧ ವ್ಯಕ್ತವಾಗಿದೆ‌. ಲೋಪವನ್ನು ಸರಿಪಡಿಸಿ ಮಹನೀಯರನ್ನು ಗೌರವಿಸುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.