ADVERTISEMENT

ಬೆಂಗಳೂರು ನಗರ ಇನ್ನಷ್ಟು ಬೆಳೆಯಬೇಕು: ಎಸ್.ಎಂ. ಕೃಷ್ಣ

​ಪ್ರಜಾವಾಣಿ ವಾರ್ತೆ
Published 27 ಜೂನ್ 2022, 7:30 IST
Last Updated 27 ಜೂನ್ 2022, 7:30 IST
   

ಬೆಂಗಳೂರು: ಜಗತ್ತಿನ ಗಮನ ಸೆಳೆಯುತ್ತಿರುವ ಬೆಂಗಳೂರು ನಗರ ಇನ್ನಷ್ಟು ಬೆಳೆಯಬೇಕು. ಆ ದಿಸೆಯಲ್ಲಿ ರಾಜ್ಯ ಸರ್ಕಾರ ದೃಢವಾದ ಹೆಜ್ಜೆಗಳನ್ನು ಇಡಬೇಕು ಎಂದು ಬಿಜೆಪಿ ನಾಯಕ ಎಸ್.ಎಂ. ಕೃಷ್ಣ ಹೇಳಿದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಸೋಮವಾರ ನಡೆದ ನಾಡಪ್ರಭು ಕೆಂಪೇಗೌಡರ 513ನೇ ಜಯಂತ್ಯುತ್ಸವದಲ್ಲಿ 'ನಾಡಪ್ರಭು ಕೆಂಪೇಗೌಡ ಅಂತರರಾಷ್ಟ್ರೀಯ ಪ್ರಶಸ್ತಿ' ಸ್ವೀಕರಿಸಿ ಮಾತನಾಡಿದರು.

1998-99ರಲ್ಲಿ ರಾಷ್ಟ್ರದ ಸಿಲಿಕಾನ್ ಕೇಂದ್ರ ಯಾವ ನಗರ ಆಗಬೇಕು ಎಂಬ ವಿಷಯದಲ್ಲಿ ಬೆಂಗಳೂರು ಮತ್ತು ಹೈದರಾಬಾದ್ ನಡುವೆ ತೀವ್ರ ಪೈಪೋಟಿ ಇತ್ತು. ಅಂತಿಮವಾಗಿ ಬೆಂಗಳೂರು ಯಶಸ್ಸು ಪಡೆಯಿತು. ಅದನ್ನು ಉಳಿಸಿಕೊಂಡು ಹೋಗಬೇಕಿದೆ ಎಂದರು.

ADVERTISEMENT

ಹುಬ್ಬಳ್ಳಿ- ಧಾರವಾಡ, ಶಿವಮೊಗ್ಗ, ಮೈಸೂರು, ಕಲಬುರ್ಗಿ ಸೇರಿದಂತೆ ಎರಡನೇ ಹಂತದ ನಗರಗಳೂ ಅಭಿವೃದ್ಧಿ ಹೊಂದಬೇಕು. ಅಭಿವೃದ್ಧಿಯನ್ನು ವಿಸ್ತರಿಸುವ ಕೆಲಸ ಆಗಬೇಕು ಎಂದು ಹೇಳಿದರು.

ಬೆಂಗಳೂರು ನಗರವನ್ನು ನಿರ್ಮಿಸಿದ ಕೆಂಪೇಗೌಡರ ಆಶಯಕ್ಕೆ ಪೂರಕವಾಗಿ ಈಗ ವಿಸ್ತಾರವಾಗಿ ಬೆಳೆದಿದೆ. ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ, ವಿಪ್ರೊ ಮುಖ್ಯಸ್ಥ ಅಝೀಂ ಪ್ರೇಂಜಿ ಸೇರಿದಂತೆ ಹಲವರು ಬೆಂಗಳೂರಿನ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ಇದರ ಪರಿಣಾಮವಾಗಿ, 'ಭಾರತವನ್ನು ಬೆಂಗಳೂರಿನ ಮೂಲಕ ನೋಡಬೇಕು ಎಂದು ಹಿಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ಹೇಳಿದ್ದರು' ಎಂದು ನೆನಪಿಸಿಕೊಂಡರು.

ಬೆಂಗಳೂರು ಒಂದು ಸುಂದರ ಮತ್ತು ಸಹೃದಯಿ ನಗರ. ಕುವೆಂಪು ಹೇಳಿದಂತೆ ನಿಜವಾದ ಅರ್ಥದಲ್ಲಿ ಸರ್ವ ಜನಾಂಗದ ಶಾಂತಿಯ ತೋಟ. ಬೇರೆ ಬೇರೆ ರಾಜ್ಯಗಳ ಲಕ್ಷಾಂತರ ಜನರು ಸೌಹಾರ್ದದಿಂದ ಜೀವಿಸುತ್ತಿದ್ದಾರೆ‌. ಬೆಂಗಳೂರು ಕಟ್ಟಿದ ಕೆಂಪೇಗೌಡ ಯಾರೊಬ್ಬರ ಸ್ವತ್ತೂ ಅಲ್ಲ. ಬೆಂಗಳೂರು ನಗರದಲ್ಲಿ ವಾಸಿಸುತ್ತಿರುವ ಜನಾಂಗದ ಸ್ವತ್ತು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.