ADVERTISEMENT

ಕೆಂಪೇಗೌಡರ ಆದರ್ಶ ಪಾಲಿಸೋಣ: ಶಾಸಕ ಎಸ್‌.ಆರ್‌.ವಿಶ್ವನಾಥ್‌

​ಪ್ರಜಾವಾಣಿ ವಾರ್ತೆ
Published 6 ಜುಲೈ 2025, 15:34 IST
Last Updated 6 ಜುಲೈ 2025, 15:34 IST
ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾದನೆ ಮಾಡಿದ ಗಣ್ಯರಿಗೆ ಕೆಂಪೇಗೌಡ ಪ್ರಶಸ್ತಿನೀಡಿ ಗೌರವಿಸಲಾಯಿತು.  
ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾದನೆ ಮಾಡಿದ ಗಣ್ಯರಿಗೆ ಕೆಂಪೇಗೌಡ ಪ್ರಶಸ್ತಿನೀಡಿ ಗೌರವಿಸಲಾಯಿತು.     

ಯಲಹಂಕ: ‘ಇಂದಿನ ಸ್ಮಾರ್ಟ್‌ ಸಿಟಿ ಯೋಜನೆಗೆ ಪೂರಕವೆಂಬಂತೆ ನಾಡಪ್ರಭು ಕೆಂಪೇಗೌಡರು ಐನೂರು ವರ್ಷಗಳ ಹಿಂದೆಯೇ ಬೆಂಗಳೂರು ನಗರವನ್ನು ನಿರ್ಮಿಸಿದ್ದಾರೆ’ ಎಂದು ಶಾಸಕ ಎಸ್‌.ಆರ್‌.ವಿಶ್ವನಾಥ್‌ ತಿಳಿಸಿದರು.

ಕರ್ನಾಟಕ ರಾಜ್ಯ ಖಾಸಗಿ ಶಾಲಾ-ಕಾಲೇಜು ಆಡಳಿತ ಮಂಡಳಿಗಳ ಒಕ್ಕೂಟದ ಆಶ್ರಯದಲ್ಲಿ ಉಪನಗರದ ಅಂಬೇಡ್ಕರ್‌ ಭವನದಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 516ನೇ ಜಯಂತ್ಯುತ್ಸವ ಹಾಗೂ ಕೆಂಪೇಗೌಡ ಪ್ರಶಸ್ತಿಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ದೂರದೃಷ್ಟಿತ್ವ ಹೊಂದಿದ್ದ ಕೆಂಪೇಗೌಡರು, ರಸ್ತೆಗಳು, ದೇವಸ್ಥಾನ, ಕಲ್ಯಾಣಿ, ಕೆರೆಗಳು ಹಾಗೂ ಉದ್ಯಾನಗಳನ್ನು ಅಭಿವೃದ್ಧಿಪಡಿಸುವುದರ ಜೊತೆಗೆ ಎಲ್ಲಾ ಜಾತಿಗಳವರೂ ವ್ಯಾಪಾರ ಮಾಡಲು ಪ್ರತ್ಯೇಕ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದರು. ಇಂತಹ ಮಹಾನ್‌ ವ್ಯಕ್ತಿಯ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದರು.

ADVERTISEMENT

ವಿಧಾನ ಪರಿಷತ್‌ ಸಭಾಪತಿ ಬಸವರಾಜ ಎಸ್‌ ಹೊರಟ್ಟಿ ಮಾತನಾಡಿ, ‘ಬೆಂಗಳೂರನ್ನು ಗುರುತಿಸುವ ರೀತಿಯಲ್ಲಿ ಕೆಂಪೇಗೌಡರು ಅಭಿವೃದ್ಧಿಪಡಿಸಿದ್ದಾರೆ. ಇಂತಹ ಮಹಾಪುರುಷನನ್ನು ನಾವೆಲ್ಲರೂ ಸದಾ ಸ್ಮರಿಸಬೇಕು’ ಎಂದು ಹೇಳಿದರು.

‘ಕರ್ನಾಟಕ ರಾಜ್ಯ ಖಾಸಗಿ ಶಾಲಾ-ಕಾಲೇಜು ಆಡಳಿತ ಮಂಡಳಿಗಳ ಒಕ್ಕೂಟ ಸದಸ್ಯರು ಖಾಸಗಿ ಶಾಲಾ ಶಿಕ್ಷಕರ ಸಮಸ್ಯೆಗಳ ಕುರಿತ ಮನವಿಪತ್ರ ನೀಡಿದ್ದಾರೆ. ಸರ್ಕಾರದ ಗಮನಕ್ಕೆ ತರುವುದರ ಜೊತೆಗೆ ಸಂಬಂಧಪಟ್ಟವರೊಂದಿಗೆ ಚರ್ಚಿಸಿ, ಬಗೆಹರಿಸಲು ಪ್ರಯತ್ನಿಸಲಾಗುವುದು’ ಎಂದು ತಿಳಿಸಿದರು.

ವಿಧಾನ ಪರಿಷತ್‌ನ ಮಾಜಿ ಸದಸ್ಯ ಎಚ್‌.ಎಂ.ರಮೇಶ್‌ಗೌಡ, ಶಾಲಾ ಶಿಕ್ಷಣ ಇಲಾಖೆಯ ಬೆಂಗಳೂರು ಉತ್ತರ ಜಿಲ್ಲಾ ಉಪ ನಿರ್ದೇಶಕ ಕೆ.ಜಿ.ಆಂಜಿನಪ್ಪ, ಒಕ್ಕೂಟದ ಅಧ್ಯಕ್ಷ ಶ್ರೀರಾಮಚಂದ್ರ, ಕಾರ್ಯದರ್ಶಿ ವಿ.ಸುರೇಶ್‌, ಉಪಾಧ್ಯಕ್ಷ ಸಿ.ಡಿ.ಪಾಪೇಗೌಡ, ಖಜಾಂಚಿ ಎಚ್‌.ವಿ.ಚಿಕ್ಕಹನುಮಂತೇಗೌಡ, ಸಹ ಕಾರ್ಯದರ್ಶಿ ಆರ್‌.ಬಿ.ಬೀರೇಗೌಡ ಮತ್ತಿತರರು ಉಪಸ್ಥಿತರಿದ್ದರು.

ಪ್ರಶಸ್ತಿ ಪ್ರದಾನ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 41 ಗಣ್ಯರಿಗೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ನೀಡಿ ಗೌರವಿಸಲಾಯಿತು. 

ಮೆರವಣಿಗೆ: ಇದಕ್ಕೂ ಮುನ್ನ ಮಿನಿ ವಿಧಾನಸೌಧದ ಆವರಣದಲ್ಲಿರುವ ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಕೆಂಪೇಗೌಡರ ಪ್ರತಿಮೆಯನ್ನು ಬೆಳ್ಳಿರಥದಲ್ಲಿ ಇಟ್ಟು, ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ವಿವಿಧ ಜಾನಪದ ಕಲಾತಂಡಗಳೊಂದಿಗೆ ಅಂಬೇಡ್ಕರ್‌ ಭವನದವರೆಗೆ ಮೆರವಣಿಗೆ ನಡೆಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.