ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆ ಕಾಮಗಾರಿಯನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸುವಂತೆ ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಟಿ. ಸೋಮಶೇಖರ್ ಅವರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧಿಕಾರಿಗಳಿಗೆ ಸೂಚಿಸಿದರು.
ಕೆಂಪೇಗೌಡ ಬಡಾವಣೆಗೆ ಭಾನುವಾರ ಭೇಟಿ ನೀಡಿದ ಸೋಮಶೇಖರ್, ರಸ್ತೆ, ಬಡಾವಣೆ ಕಾಮಗಾರಿ, ರೈಲ್ವೆ ಕೆಳಸೇತುವೆ ಹಾಗೂ ಎಸ್‌ಟಿಪಿ ಕಾರ್ಯಗಳನ್ನು ಪರಿಶೀಲಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
‘ಆರು ತಿಂಗಳಿನಿಂದ ಒಂದು ವರ್ಷದೊಳಗೆ ರಸ್ತೆ ಡಾಂಬರೀಕರಣ ಕಾಮಗಾರಿ ಪೂರ್ಣಗೊಳಿಸಿದರೆ ಉತ್ತಮ. ಇದರಿಂದ ಇಲ್ಲಿನ ರೈತರಿಗೂ ಅನುಕೂಲವಾಗಲಿದೆ. ಏಪ್ರಿಲ್‌ನಲ್ಲಿ ಮತ್ತೆ ಪರಿಶೀಲನೆ ನಡೆಸಲಾಗುವುದು’ ಎಂದು ಶಾಸಕರು ಹೇಳಿದರು.
‘ರೈಲ್ವೆ ಇಲಾಖೆಯಿಂದ ಅನುಮೋದನೆ ಪಡೆದು ರೈಲ್ವೆ ಕೆಳಸೇತುವೆ ಕಾಮಗಾರಿ ಮಾಡಲಾಗುತ್ತಿದೆ. ಕೆಳಸೇತುವೆಯಲ್ಲಿ ಇಳಿಜಾರು ಪ್ರದೇಶ ಇರುವುದರಿಂದ ಮಳೆ ನೀರು ಸಂಗ್ರಹವಾಗುತ್ತದೆ. ಮಳೆ ನೀರು ತೆರವುಗೊಳಿಸುವ ವಿಚಾರದ ಬಗ್ಗೆ ಬಿಎಂಆರ್‌ಸಿಎಲ್‌ಗೆ ಜಾಗ ತೋರಿಸುವ ಪ್ರಕ್ರಿಯೆಗೆ ಸಮಯ ಹಿಡಿದ ಕಾರಣ ಕಾಮಗಾರಿಯು ವಿಳಂಬವಾಗಿದೆ’ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದರು.
‘ಕೆಂಪೇಗೌಡ ಬಡಾವಣೆಯ 1, 2, 3, 4, 8 ಮತ್ತು 9ನೇ ಬ್ಲಾಕ್‌ನ ರಸ್ತೆಗಳ ಡಾಂಬರೀಕರಣಕ್ಕೆ ಟೆಂಡರ್ ಕರೆಯಲಾಗಿದ್ದು, ಕಾಮಗಾರಿ ಪೂರ್ಣಗೊಳಿಸಲು 24 ತಿಂಗಳು ನೀಡಲಾಗಿದೆ. 6 ಮತ್ತು 7ನೇ ಬ್ಲಾಕ್ ರಸ್ತೆಗಳ ಡಾಂಬರೀಕರಣ ಶೇಕಡ 90 ಹಾಗೂ 5ನೇ ಬ್ಲಾಕ್ ರಸ್ತೆ ಡಾಂಬರೀಕರಣ ಶೇಕಡ 60 ಪೂರ್ಣಗೊಂಡಿದೆ’ ಎಂದು ಹೇಳಿದರು.
ಬಳಿಕ ಕೆಂಪೇಗೌಡ ಬಡಾವಣೆಯ ಒಳಚರಂಡಿಯು ಸಂಪರ್ಕ ಪಡೆದುಕೊಂಡಿರುವ ಎಸ್‌ಟಿಪಿಗಳನ್ನು ಶಾಸಕರು ಪರಿಶೀಲಿಸಿದರು. ಬಡಾವಣೆ ಸಮೀಪದಲ್ಲಿರುವ ಗ್ರಾಮಗಳಿಂದಲೂ ಇದೇ ಎಸ್‌ಟಿಪಿಗೆ ಒಳಚರಂಡಿ ಸಂಪರ್ಕ ಕೊಡಲಾಗಿದೆ ಎಂಬ ಮಾಹಿತಿಗಳನ್ನು ಬಿಡಿಎ ಅಧಿಕಾರಿಗಳು ನೀಡಿದರು.
ಈ ಸಂದರ್ಭದಲ್ಲಿ ಪ್ರಾಧಿಕಾರದ ಕಾರ್ಯಪಾಲಕ ಎಂಜಿನಿಯರ್‌ಗಳು , ಅಧಿಕಾರಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.