ADVERTISEMENT

ಕಾರು ಡಿಕ್ಕಿ: ಎಂಬಿಎ ವಿದ್ಯಾರ್ಥಿನಿಗೆ ತೀವ್ರ ಗಾಯ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2023, 16:54 IST
Last Updated 4 ಫೆಬ್ರುವರಿ 2023, 16:54 IST

ಬೆಂಗಳೂರು: ಮೈಸೂರು ರಸ್ತೆಯಲ್ಲಿರುವ ಆರ್.ವಿ. ಕಾಲೇಜು ಎದುರು ಸ್ವಾತಿ (21) ಎಂಬುವವರಿಗೆ ಕಾರು ಡಿಕ್ಕಿ ಹೊಡೆದಿದ್ದು, ತೀವ್ರ ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

‘ಹುಬ್ಬಳ್ಳಿಯ ಸ್ವಾತಿ, ನಗರದ ಬಿಐಎಂಎಸ್ ಕಾಲೇಜಿನ ಎಂಬಿಎ ವಿದ್ಯಾರ್ಥಿನಿ. ಪಟ್ಟಣಗೆರೆಯ ಪೇಯಿಂಗ್ ಗೆಸ್ಟ್ ಕಟ್ಟಡದಲ್ಲಿ ನೆಲೆಸಿದ್ದರು. ಫೆ. 2ರಂದು ಮಧ್ಯಾಹ್ನ ಆರ್‌.ವಿ. ಕಾಲೇಜು ಎದುರು ರಸ್ತೆ ದಾಟುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದಿದೆ’ ಎಂದು ಕೆಂಗೇರಿ ಸಂಚಾರ ಠಾಣೆ ಪೊಲೀಸರು ಹೇಳಿದರು.

‘ರಸ್ತೆಯಲ್ಲಿ ಹಾರಿ ಬಿದ್ದಿದ್ದ ಸ್ವಾತಿಯವರ ತಲೆ, ಕೈ–ಕಾಲು ಹಾಗೂ ದೇಹದ ಹಲವು ಭಾಗಗಳಿಗೆ ತೀವ್ರ ಪೆಟ್ಟು ಬಿದ್ದಿದೆ. ಸ್ಥಳೀಯರೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ವಾತಿ ಅವರಿಗೆ ತೀವ್ರ ನಿಗಾ ಘಟಕದಲ್ಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ’ ಎಂದು ತಿಳಿಸಿದರು.

ADVERTISEMENT

‘ಅಪಘಾತದ ದೃಶ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಾರು ಚಾಲಕನ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಕಾರು ಸಮೇತ ಪರಾರಿಯಾಗಿದ್ದ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಹೇಳಿದರು.

ಕಾನ್‌ಸ್ಟೆಬಲ್ ಪುತ್ರಿ: ‘ಗಾಯಾಳು ಸ್ವಾತಿ ಅವರ ತಂದೆ ಪೊಲೀಸ್ ಕಾನ್‌ಸ್ಟೆಬಲ್. ಹುಬ್ಬಳ್ಳಿ–ಧಾರವಾಡ ಕಮಿಷನರೇಟ್ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದಾರೆ’ ಎಂದು ಪೊಲೀಸರು ಹೇಳಿದರು.

ಸ್ಥಳೀಯರಲ್ಲಿ ಭಯ: ‘ಆರ್‌.ವಿ. ಕಾಲೇಜು ಎದುರು ಪಾದಚಾರಿಗಳ ಸಂಚಾರಕ್ಕೆ ಯಾವುದೇ ಸೌಲಭ್ಯವಿಲ್ಲ. ಈ ರಸ್ತೆಯಲ್ಲಿ ವಾಹನಗಳು ಅತಿ ವೇಗದಲ್ಲಿ ಸಂಚರಿಸುತ್ತವೆ. ಭಯದಲ್ಲಿ ರಸ್ತೆ ದಾಟುವ ಸ್ಥಿತಿ ಇದೆ’ ಎಂದು ಸ್ಥಳೀಯರು ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.