ADVERTISEMENT

ಕಸ ನಿರ್ವಹಣೆಗೆ ವಾರ್ಷಿಕ ₹900 ತೆರಿಗೆ: ಪಿಡಿಒ ನಾಗರಾಜ್

​ಪ್ರಜಾವಾಣಿ ವಾರ್ತೆ
Published 31 ಜುಲೈ 2021, 19:31 IST
Last Updated 31 ಜುಲೈ 2021, 19:31 IST
ಗ್ರಾಮಸಭೆಯಲ್ಲಿ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ವಿತರಿಸಲಾಯಿತು. ವೈದ್ಯೆ ಉಮಾ, ಪಿಡಿಒ ನಾಗರಾಜ್, ಸೂಲಿಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ದಾಕ್ಷಾಯಿಣಿ, ಮೋಹನ್ ಕುಮಾರ್, ವಿಜಯ್ ಕುಮಾರ್ ಹಾಗೂ ಇದ್ದಾರೆ.
ಗ್ರಾಮಸಭೆಯಲ್ಲಿ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ವಿತರಿಸಲಾಯಿತು. ವೈದ್ಯೆ ಉಮಾ, ಪಿಡಿಒ ನಾಗರಾಜ್, ಸೂಲಿಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ದಾಕ್ಷಾಯಿಣಿ, ಮೋಹನ್ ಕುಮಾರ್, ವಿಜಯ್ ಕುಮಾರ್ ಹಾಗೂ ಇದ್ದಾರೆ.   

ಕೆಂಗೇರಿ: ‘ಕಸ ವೈಜ್ಞಾನಿಕ ನಿರ್ವಹಣೆಗಾಗಿ ಸೂಲಿಕೆರೆ ಪಂಚಾಯಿತಿ ವ್ಯಾಪ್ತಿಯ ಪ್ರತಿ ಮನೆಗೂ ಪ್ರಸಕ್ತ ಸಾಲಿನಿಂದ ₹900 ವಾರ್ಷಿಕ ತೆರಿಗೆ ನಿಗದಿ ಪಡಿಸಲಾಗಿದೆ’ ಎಂದುಸೂಲಿಕೆರೆ ಗ್ರಾಮ ಪಂಚಾಯಿತಿಅಭಿವೃದ್ಧಿ ಅಧಿಕಾರಿ (ಪಿಡಿಒ) ನಾಗರಾಜ್ ತಿಳಿಸಿದರು.

ಸೂಲಿಕೆರೆ ಸರ್ಕಾರಿ ಶಾಲೆಯ ಆವರಣದಲ್ಲಿ ನಡೆದ ಗ್ರಾಮಸಭೆಯಲ್ಲಿ ಅವರು ಮಾತನಾಡಿದರು.

‘ಅಡುಗೆ ಕೋಣೆಯ ಸಂಖ್ಯೆ ಆಧರಿಸಿ ದರ ನಿಗದಿ ಮಾಡಲಾಗುತ್ತಿದೆ. ಗ್ರಾಮೀಣ ಭಾಗಗಳಿಗೂ ಗುಣಮಟ್ಟದ ಮೂಲಸೌಕರ್ಯ ಒದಗಿಸಲು ಘನತ್ಯಾಜ್ಯದ ವೈಜ್ಞಾನಿಕ ನಿರ್ವಹಣೆಯ ಅಗತ್ಯವಿದೆ. ಇದಕ್ಕಾಗಿ ₹35 ಲಕ್ಷ ಮೊತ್ತದ ಕ್ರಿಯಾ ಯೋಜನೆ ರೂಪಿಸಲಾಗಿದೆ. ಈ ಹಣವನ್ನು ಬಳಕೆದಾರರಿಂದ ಪಡೆಯಲು ತೆರಿಗೆ ಸಂಗ್ರಹಕ್ಕೆ ಕ್ರಮ ವಹಿಸಲಾಗಿದೆ’ ಎಂದರು.

ADVERTISEMENT

‘ನೀರಿನ ದರ ಹಾಗೂ ಕಟ್ಟಡ ತೆರಿಗೆಯನ್ನೂ ಪರಿಷ್ಕರಿಸಲಾಗಿದೆ. ನಾಗರಿಕರು ಸಹಕಾರ ನೀಡುವ ಮೂಲಕ ಅಭಿವೃದ್ಧಿಗೆ ಸಹಕರಿಸಬೇಕು’ ಎಂದು ಮನವಿ ಮಾಡಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನಾಗವೇಣಿ,‘ಕೋವಿಡ್ ಮೂರನೇ ಅಲೆಯ ಸೂಚನೆ ಇದೆ. ಸೂಲಿಕೆರೆ ವ್ಯಾಪ್ತಿಯಲ್ಲಿ ಶೇ 80ರಷ್ಟು ಮಂದಿ ಲಸಿಕೆ ಪಡೆದಿದ್ದಾರೆ. ಉಳಿದವರೂ ಶೀಘ್ರವಾಗಿ ಲಸಿಕೆ ಹಾಕಿಸಿಕೊಳ್ಳಿ’ ಎಂದರು.

‘ಕೊಮ್ಮಘಟ್ಟ ಕೆರೆಗೆ ಸುತ್ತಮುತ್ತಲ ಬಡಾವಣೆಗಳ ಕೊಳಚೆ ನೀರು ಸೇರುತ್ತಿದೆ. ವರ್ಷ ಕಳೆದರೂ ವೃದ್ಧಾಪ್ಯ ವೇತನ, ವಿಧವಾ ವೇತನ ಖಾತೆಗೆ ಜಮಾ ಆಗುತ್ತಿಲ್ಲ.ಪಶುವೈದ್ಯರು ಗ್ರಾಮಗಳತ್ತ ಸುಳಿಯುತ್ತಲೇ ಇಲ್ಲ. ದನ–ಕರುಗಳಿಗೆ ಅನಾರೋಗ್ಯ ಉಂಟಾದರೆ ಏನು ಮಾಡಬೇಕು’ ಎಂದು ಗ್ರಾಮಸ್ಥರು ಸಭೆಯಲ್ಲಿ ಅಳಲು ತೋಡಿಕೊಂಡರು.

ಸಭೆಯಲ್ಲಿ 25 ಮಂದಿ ಫಲಾನುಭವಿಗಳಿಗೆ ಭಾಗ್ಯಲಕ್ಷ್ಮೀ ಬಾಂಡ್, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರಿಗೆ ಪ್ರೋತ್ಸಾಹಧನ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.