ADVERTISEMENT

 ಕೆಂಗೇರಿ: ಕೆರೆ ಪರಿಶೀಲನೆ ನಡೆಸಿದ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 25 ಮೇ 2023, 23:19 IST
Last Updated 25 ಮೇ 2023, 23:19 IST
ಬಿಬಿಎಂಪಿ ಹಾಗೂ ಜಲಮಂಡಳಿ ಅಧಿಕಾರಿಗಳು ಹೊಸಕೆರೆಯಲ್ಲಿನ ಸಮಸ್ಯೆ  ಪರಿಶೀಲಿಸಿದರು.  ಜಲ ಮಂಡಳಿ ಮುಖ್ಯ ಎಂಜಿನಿಯರ್  ದೇವರಾಜ್, ಕಾರ್ಯ ನಿರ್ವಾಹಕ ಎಂಜಿನಿಯರ್‌ ನವನೀತ್,  ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ದೀಪಕ್,  ಶಶಿಕುಮಾರ್, ಮಹೇಶ್, ವಳಗೆರೆಹಳ್ಳಿ ನಿವಾಸಿಗಳ ಒಕ್ಕೂಟದ   ಅಧ್ಯಕ್ಷ ಎನ್. ಕದರಪ್ಪ  ಇದ್ದರು.
ಬಿಬಿಎಂಪಿ ಹಾಗೂ ಜಲಮಂಡಳಿ ಅಧಿಕಾರಿಗಳು ಹೊಸಕೆರೆಯಲ್ಲಿನ ಸಮಸ್ಯೆ  ಪರಿಶೀಲಿಸಿದರು.  ಜಲ ಮಂಡಳಿ ಮುಖ್ಯ ಎಂಜಿನಿಯರ್  ದೇವರಾಜ್, ಕಾರ್ಯ ನಿರ್ವಾಹಕ ಎಂಜಿನಿಯರ್‌ ನವನೀತ್,  ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ದೀಪಕ್,  ಶಶಿಕುಮಾರ್, ಮಹೇಶ್, ವಳಗೆರೆಹಳ್ಳಿ ನಿವಾಸಿಗಳ ಒಕ್ಕೂಟದ   ಅಧ್ಯಕ್ಷ ಎನ್. ಕದರಪ್ಪ  ಇದ್ದರು.   

ಕೆಂಗೇರಿ: ಒಳಚರಂಡಿ ನೀರು ನುಗ್ಗಿ ಮಲಿನಗೊಂಡಿದ್ದ ಹೊಸಕೆರೆಗೆ ಬಿಬಿಎಂಪಿ ಹಾಗೂ ಜಲಮಂಡಳಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಗೆ ಕೆಂಗೇರಿ ಬಳಿಯ ಹೊಸಕೆರೆಗೆ ಒಳಚರಂಡಿ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು.

ಕೆರೆಯ ನೀರಿನಲ್ಲಿ ನೊರೆ ಕಾಣಿಸಿಕೊಂಡು ಆತಂಕ ಮೂಡಿತ್ತು. ನಿರ್ವಹಣೆಯ ಕೊರತೆಯಿಂದ ಕೆರೆ ಅವಸಾನದ ಅಂಚಿಗೆ ತಲುಪುತ್ತಿರುವ ಬಗ್ಗೆ ‘ಪ್ರಜಾವಾಣಿ’ಯಲ್ಲಿ ‘ಹೊಸಕೆರೆಗೆ ಒಳಚರಂಡಿ ನೀರು’ ಶೀರ್ಷಿಕೆಯಡಿ ವರದಿ ಪ್ರಕಟಿಸಲಾಗಿತ್ತು.

ADVERTISEMENT

ಜಲ ಮಂಡಳಿ ಮುಖ್ಯ ಎಂಜಿನಿಯರ್ ದೇವರಾಜ್, ಕಾರ್ಯನಿರ್ವಾಹಕ ಎಂಜಿನಿಯರ್‌(ಇ.ಇ) ನವನೀತ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗಳಾದ (ಎಇಇ) ದೀಪಕ್, ಶಶಿಕುಮಾರ್, ಬಿಬಿಎಂಪಿ ಕೆರೆ ಅಭಿವೃದ್ಧಿ ಪ್ರಾಧಿಕಾರದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌(ಎಇಇ) ಮಹೇಶ್ ಮತ್ತಿತರರು ಕೆರೆ ಅಚ್ಚುಕಟ್ಟು ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಬಿಬಿಎಂಪಿ ಕೆರೆ ಅಭಿವೃದ್ಧಿ ಪ್ರಾಧಿಕಾರದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಮಹೇಶ್ ಮಾತನಾಡಿ, ‘ಕೆರೆಯ ನೀರಿನ ಮಟ್ಟ ಹೆಚ್ಚಿದೆ. ನೀರನ್ನು ಮತ್ತೊಂದೆಡೆಗೆ ಪಂಪ್ ಮಾಡಿ ಇನ್ನೆರಡು ದಿನಗಳಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುವುದು’ ಎಂದು ತಿಳಿಸಿದರು.

‘ಕೆರೆಯ ಭಾಗದಲ್ಲೇ ಒಳಚರಂಡಿಯ ಪೈಪ್ ಅಳವಡಿಸಲಾಗಿದ್ದು, ನೀರು ಮಲಿನವಾಗುವ ಸಾಧ್ಯತೆ ಇದೆ. ಹೀಗಾಗಿ,  ಒಳಚರಂಡಿ ಪೈಪ್‌ಲೈನ್ ಸ್ಥಳಾಂತರಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಸಭೆ: ಅಧಿಕಾರಿಗಳ ಸಭೆ ನಡೆಸಿದ ಸ್ಥಳೀಯ ಶಾಸಕ ಎಸ್.ಟಿ.ಸೋಮಶೇಖರ್ ಮಳೆಗಾಲ‌ ಸಮೀಪಿಸುತ್ತಿದ್ದು, ಬಿಬಿಎಂಪಿ ಹಾಗೂ ಜಲ ಮಂಡಳಿ ಅಧಿಕಾರಿಗಳು ಯಾವುದೇ ಮಳೆಹಾನಿ ಪ್ರಕರಣ ಸಂಭವಿಸಿದಂತೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಒಳಚರಂಡಿ ನೀರು ಕೆರೆ ಸೇರದಂತೆ ಕ್ರಮವಹಿಸಬೇಕು. ರಸ್ತೆ, ಕೆಳಸೇತುವೆಯಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಮಳೆ ಹಾನಿ ತಡೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಯೋಜನೆ ಸಿದ್ಧಪಡಿಸುವಂತೆ ಹೇಳಿದರು. ವಳಗೆರೆಹಳ್ಳಿ ನಿವಾಸಿಗಳ ಒಕ್ಕೂಟದ ಅಧ್ಯಕ್ಷ ಎನ್. ಕದರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.