ADVERTISEMENT

ನಕಲಿ ಪೊಲೀಸರ ಬೆನ್ನಟ್ಟಿ ಹಿಡಿದ ಅಸಲಿ ಪೊಲೀಸರು

* ಮೂವರನ್ನು ಅಪಹರಿಸಿದ್ದ ಆರೋಪಿಗಳು * ಆಗ್ನೇಯ ವಿಭಾಗ ಪೊಲೀಸರ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2020, 13:34 IST
Last Updated 11 ಜೂನ್ 2020, 13:34 IST
ಮೊಹಮ್ಮದ್ ಖಲೀಲ್ 
ಮೊಹಮ್ಮದ್ ಖಲೀಲ್    

ಬೆಂಗಳೂರು: ಗಾರ್ಮೇಂಟ್ಸ್ ಕಾರ್ಖಾನೆ ವ್ಯವಹಾರ ನಡೆಸುತ್ತಿದ್ದ ಮೂವರನ್ನು ಪೊಲೀಸರ ಸೋಗಿನಲ್ಲಿ ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿಗಳನ್ನು ಆಗ್ನೇಯ ವಿಭಾಗದ ಪೊಲೀಸರು ರಾಜಾಜಿನಗರದ ರಾಮಮಂದಿರ ಬಳಿ ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಹಿಡಿದಿದ್ದಾರೆ.

ಮೊಹಮ್ಮದ್ ಖಲೀಲ್ (34), ಮುಬಾರಕ್ ಅಲಿಯಾಸ್ ಇಮ್ರಾನ್ ಹಾಗೂ ಸಾದಿಕ್ ಬಂಧಿತರು. ಇವರಿಂದ ಎರಡು ದ್ವಿಚಕ್ರ ವಾಹನ, ಡ್ರ್ಯಾಗರ್, ಚಾಕು ಹಾಗೂ ಮೊಬೈಲ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

‘ಗಾರ್ಮೇಂಟ್ಸ್ ಕಾರ್ಖಾನೆ ವ್ಯವಹಾರ ಮಾಡುವ ವ್ಯಕ್ತಿಗಳನ್ನು ಅಪಹರಿಸಿ ಹಣ ಮಾಡುವ ಉದ್ದೇಶದಿಂದ ಆರೋಪಿಗಳು ಸಂಚು ರೂಪಿಸಿದ್ದರು. ಯಾರನ್ನೆಲ್ಲ ಅಪಹರಣ ಮಾಡಬೇಕೆಂದು ಮೊದಲೇ ತೀರ್ಮಾನಿಸಿ ಪಟ್ಟಿ ಮಾಡಿದ್ದರು. ಮೂವರು ಆರೋಪಿಗಳು ಎರಡು ತಂಡವಾಗಿ ಕೃತ್ಯ ಎಸಗಿದ್ದರು’ ಎಂದು ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಜೋಷಿ ಹೇಳಿದರು.

ADVERTISEMENT

ಎರಡು ಠಾಣೆ ವ್ಯಾಪ್ತಿಯಲ್ಲಿ ಕೃತ್ಯ; ‘ಬೊಮ್ಮನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ವಾಸವಿದ್ದ ಜಹೀರ್‌ವುಲ್ಲಾ ಹುಸೇನ್ ಎಂಬುವರ ಮನೆಗೆ ಜೂನ್ 9ರಂದು ರಾತ್ರಿ 7.30ರ ಸುಮಾರಿಗೆ ಹೋಗಿದ್ದ ಆರೋಪಿಗಳು, ತಾವು ಪೊಲೀಸರೆಂದು ಹೇಳಿದ್ದರು. ನಂತರ, ಜಹೀರ್‌ವುಲ್ಲಾ ಅವರನ್ನು ದ್ವಿಚಕ್ರ ವಾಹನದಲ್ಲಿ ಕರೆದೊಯ್ದಿದ್ದರು’ ಎಂದು ಪೊಲೀಸರು ಹೇಳಿದರು.

‘ಗಾರ್ಮೇಂಟ್ಸ್ ಕಾರ್ಖಾನೆ ವ್ಯವಹಾರ ಮಾಡುತ್ತಿದ್ದ ಜಹೀರ್‌ವುಲ್ಲಾ ಅವರಿಗೆ ಡ್ರ್ಯಾಗರ್ ತೋರಿಸಿ ಬೆದರಿಸಿದ್ದ ಆರೋಪಿಗಳು, ವ್ಯವಹಾರದ ಪಾಲುದಾರರ ವಿಳಾಸದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು.’

‘ಮೈಕೊ ಲೇಔಟ್ ಠಾಣೆ ವ್ಯಾಪ್ತಿಯಲ್ಲಿದ್ದ ಪಾಲುದಾರರಾದ ಕಾಬೂಲ್ ಹಾಗೂ ಮೆಹಬೂಬ್‌ ಎಂಬುವರನ್ನೂ ಮನೆಯಿಂದಲೇ ಆರೋಪಿಗಳು ಅಪಹರಿಸಿದ್ದರು. ಮೂವರನ್ನು ಬಿಟಿಎಂ ಲೇಔಟ್‌ನ ಎನ್‌.ಎಸ್‌.ಪಾಳ್ಯದಲ್ಲಿರುವ ನಿರ್ಮಾಣ ಹಂತದ ಕಟ್ಟಡಕ್ಕೆ ಕರೆದೊಯ್ದು ಚಿತ್ರಹಿಂಸೆ ನೀಡಿದ್ದರು’ ಎಂದು ಪೊಲೀಸರು ಹೇಳಿದರು.

‘ಕೊಲೆ ಮಾಡುವುದಾಗಿ ಬೆದರಿಸಿದ್ದ ಆರೋಪಿಗಳು, ಜಹೀರ್‌ವುಲ್ಲಾ ಮೂಲಕ ಅವರ ಪತ್ನಿ ಹಾಗೂ ಸ್ನೇಹಿತರಿಗೆ ಕರೆ ಮಾಡಿಸಿದ್ದರು. ₹ 50 ಸಾವಿರ ತಂದುಕೊಟ್ಟರಷ್ಟೇ ಮೂವರನ್ನು ಬಿಡುವುದಾಗಿ ಬೆದರಿಸಿದ್ದರು. ಗಾಬರಿಗೊಂಡ ಪತ್ನಿ ಬೊಮ್ಮನಹಳ್ಳಿ ಠಾಣೆಗೆ ದೂರು ನೀಡಿದ್ದರು. ಕಾಬೂಲ್ ಹಾಗೂ ಮೆಹಬೂಬ್ ಅಪಹರಣದ ಬಗ್ಗೆಯೂ ಮೈಕೊ ಲೇಔಟ್‌ ಠಾಣೆಯಲ್ಲೂ ದೂರು ದಾಖಲಾಗಿತ್ತು’ ಎಂದು ಪೊಲೀಸರು ತಿಳಿಸಿದರು.

ಎರಡು ತಂಡದಲ್ಲಿ ಕಾರ್ಯಾಚರಣೆ: ‘ಆರೋಪಿಗಳ ಪತ್ತೆಗೆ ಎರಡು ವಿಶೇಷ ತಂಡ ರಚಿಸಲಾಗಿತ್ತು. ಹಣ ನೀಡುವ ಸೋಗಿನಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಕಟ್ಟಡದ ಮೇಲೆ ದಾಳಿ ಮಾಡಿ ಕಾಬೂಲ್ ಹಾಗೂ ಮೆಹಬೂಬ್‌ ಅವರನ್ನು ರಕ್ಷಿಸಿತ್ತು. ಆರೋಪಿ ಮೆಹಬೂಬ್ ಖಲೀಲ್‌ನನ್ನು ಬಂಧಿಸಿತ್ತು’ ಎಂದು ಪೊಲೀಸರು ವಿವರಿಸಿದರು.

‘ದಾಳಿಗೂ ಮುನ್ನವೇ ಇನ್ನಿಬ್ಬರು ಆರೋಪಿಗಳು, ಜಹೀರ್‌ವುಲ್ಲಾ ಸಮೇತ ಕಟ್ಟಡದಿಂದ ಪರಾರಿಯಾಗಿದ್ದರು. ಅವರೆಲ್ಲರೂ ರಾಜಾಜಿನಗರ ರಾಮಮಂದಿರ ಮೈದಾನ ಬಳಿ ಇರುವ ಮಾಹಿತಿ ಲಭ್ಯವಾಗಿತ್ತು. ಅಲ್ಲಿಗೆ ಹೋಗಿದ್ದ ಪೊಲೀಸರ ತಂಡ, ಅವರನ್ನು ಬೆನ್ನಟ್ಟಿ ಹಿಡಿದಿದೆ. ಜಹೀರ್‌ವುಲ್ಲಾ ಅವರನ್ನು ರಕ್ಷಿಸಿದೆ’ ಎಂದೂ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.