ADVERTISEMENT

ಲಕ್ಷ ಜನರಲ್ಲಿ 35 ಮಂದಿಗೆ ಸ್ತನ ಕ್ಯಾನ್ಸರ್

ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಿರ್ದೇಶಕ ಡಾ.ಸಿ. ರಾಮಚಂದ್ರ ಕಳವಳ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2021, 15:41 IST
Last Updated 9 ಅಕ್ಟೋಬರ್ 2021, 15:41 IST
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ನಯನಾ ನಾಗರಾಜ್ ಹಾಗೂ ನರ್ಸಿಂಗ್ ವಿದ್ಯಾರ್ಥಿಗಳು ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಿದರು – ಪ್ರಜಾವಾಣಿ ಚಿತ್ರ
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ನಯನಾ ನಾಗರಾಜ್ ಹಾಗೂ ನರ್ಸಿಂಗ್ ವಿದ್ಯಾರ್ಥಿಗಳು ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಿದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ನಗರದ ಪ್ರತಿ ಒಂದು ಲಕ್ಷ ಜನರಲ್ಲಿ ಸರಾಸರಿ 35 ಮಂದಿ ಸ್ತನ ಕ್ಯಾನ್ಸರ್ ಕಾಯಿಲೆಯನ್ನು ಎದುರಿಸುತ್ತಿದ್ದಾರೆ’ ಎಂದು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಿರ್ದೇಶಕ ಡಾ.ಸಿ. ರಾಮಚಂದ್ರ ಕಳವಳ ವ್ಯಕ್ತಪಡಿಸಿದರು.

ಅಂತರರಾಷ್ಟ್ರೀಯ ಸ್ತನ ಕ್ಯಾನ್ಸರ್ ಜಾಗೃತಿ ಮಾಸದ ಪ್ರಯುಕ್ತ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯು ನಗರದಲ್ಲಿ ಶನಿವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಗ್ಲೋಬಲ್ ಬ್ರೆಸ್ಟ್ ಕ್ಯಾನ್ಸರ್ ಫೌಂಡೇಷನ್ ಹಾಗೂ ಗ್ಲೋಬಲ್ ಪ್ರೋಸ್ಥೇಟ್ ಕ್ಯಾನ್ಸರ್ ಫೌಂಡೇಷನ್‌ ಉದ್ಘಾಟಿಸಿದರು.

‘ಸ್ತನ ಕ್ಯಾನ್ಸರ್ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಳವಾಗುತ್ತಿವೆ. ಸಣ್ಣ ಮಕ್ಕಳಲ್ಲಿಯೂ ಈ ಕಾಯಿಲೆ ಕಾಣಿಸಿಕೊಳ್ಳುತ್ತಿದೆ. ಬದಲಾದ ಜೀವನ ಶೈಲಿ, ಪಾಶ್ಚಿಮಾತ್ಯ ಆಹಾರ ಪದ್ಧತಿ ಹಾಗೂ ಧೂಮಪಾನ, ಮದ್ಯ ಸೇವನೆಯಂತಹ ವ್ಯಸನಗಳೂ ಕ್ಯಾನ್ಸರ್ ಕಾಣಿಸಿಕೊಳ್ಳಲು ಕಾರಣಗಳಾಗಿವೆ. ಈ ಕಾಯಿಲೆಯನ್ನು ಬೇಗ ಪತ್ತೆ ಮಾಡಿ, ಚಿಕಿತ್ಸೆ ಒದಗಿಸಿದಲ್ಲಿ ಗುಣಪಡಿಸಲು ಸಾಧ್ಯ. ಮೂರು ಮತ್ತು ನಾಲ್ಕನೇ ಹಂತದಲ್ಲಿ ಆಸ್ಪತ್ರೆಗಳಿಗೆ ಬಂದಲ್ಲಿ ರೋಗವನ್ನು ಗುಣಪಡಿಸುವುದು ಕಷ್ಟ’ ಎಂದು ಹೇಳಿದರು.

ADVERTISEMENT

ಮಾಹಿತಿ ಕೊರತೆ:ಗ್ಲೋಬಲ್ ಬ್ರೆಸ್ಟ್ ಕ್ಯಾನ್ಸರ್ ಫೌಂಡೇಷನ್ ಟ್ರಸ್ಟಿ ಕರ್ನಲ್ ಅಯ್ಯಪ್ಪ, ‘ನಾನು ಕೂಡ ಕ್ಯಾನ್ಸರ್ ಜಯಿಸಿದ್ದೇನೆ. ಈ ಕಾಯಿಲೆ ಪತ್ತೆಯಾಗುವವರೆಗೆ ನನಗೂ ಇದರ ಬಗ್ಗೆ ಮಾಹಿತಿ ಇರಲಿಲ್ಲ. ದೈಹಿಕ, ಮಾನಸಿಕ ಮತ್ತು ಆರ್ಥಿಕವಾಗಿ ಈ ಕಾಯಿಲೆ ಘಾಸಿಗೊಳಿಸುತ್ತದೆ.ದೇಶದ ಬಹುತೇಕರಿಗೆ ಕ್ಯಾನ್ಸರ್ ಕಾಯಿಲೆಯ ಬಗ್ಗೆ ಸರಿಯಾದತಿಳಿವಳಿಕೆಯಿಲ್ಲ. ಹಾಗಾಗಿ, ಜನರಲ್ಲಿ ಅರಿವು ಮೂಡಿಸಲು ಫೌಂಡೇಷನ್‍ಪ್ರಾರಂಭಿಸಲಾಗಿದೆ. ರೋಗಿಗಳಿಗೆ ಸೂಕ್ತ ಮಾರ್ಗದರ್ಶನ ಒದಗಿಸಿ, ಚಿಕಿತ್ಸೆ ಕೊಡಿಸಲು ನೆರವಾಗುತ್ತೇವೆ’ ಎಂದರು.

ಕಿರುತೆರೆ ಕಲಾವಿದೆ ನಯನಾ ನಾಗರಾಜ್, ‘ಕ್ಯಾನ್ಸರ್ ಬಗ್ಗೆ ಹಲವರಿಗೆ ಸೂಕ್ತ ಮಾಹಿತಿಯಿಲ್ಲ. ತಪಾಸಣೆ, ಚಿಕಿತ್ಸೆ ಬಗ್ಗೆಜಾಗೃತಿ ಮೂಡಿಸುವ ಕೆಲಸ ಆಗಬೇಕು’ ಎಂದು ಹೇಳಿದರು.

ಭಾರತ್ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಪ್ರಧಾನ ಸಲಹೆಗಾರಜಿ.ಎಂ. ಬಾಬು, ‘ಕ್ಯಾನ್ಸರ್ ಕಾಯಿಲೆ ಬಗ್ಗೆ ನಿರ್ಲಕ್ಷ್ಯ ಮಾಡಿದಲ್ಲಿ ಇಡೀ ಜೀವನ ಹಾಳಾಗಲಿದೆ. ಗ್ರಾಮೀಣ ಭಾಗದ ಮಹಿಳೆಯರು ಹಿಂಜರಿಕೆಯಿಂದ ತಪಾಸಣೆ ಮಾಡಿಸಿಕೊಳ್ಳುತ್ತಿಲ್ಲ. ಇದರಿಂದ ಸಮಸ್ಯೆ ಉಲ್ಬಣವಾಗುತ್ತಿದೆ. ಹಳ್ಳಿಗಳಲ್ಲಿ ಕ್ಯಾನ್ಸರ್ ತಪಾಸಣೆ ಹಾಗೂ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆಯನ್ನು ಒದಗಿಸುವ ಕೆಲಸವಾಗಬೇಕು’ ಎಂದು ತಿಳಿಸಿದರು.

ಇದಕ್ಕೂ ಮೊದಲು ಕೋರಮಂಗಲದ ಪೊಲೀಸ್ ಪಬ್ಲಿಕ್ ಸ್ಕೂಲ್‌ನಿಂದ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯವರೆಗೆಸ್ತನ ಕ್ಯಾನ್ಸರ್ ಜಾಗೃತಿ ಜಾಥಾವನ್ನು ನಡೆಸಲಾಯಿತು.

ಯುವತಿಯರಲ್ಲೂ ಸ್ತನ ಕ್ಯಾನ್ಸರ್

‘ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಸಾಮಾನ್ಯವಾಗಿದೆ. ದೇಶದಲ್ಲಿ ಪ್ರತಿವರ್ಷ 1.78 ಲಕ್ಷ ಸ್ತನ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗುತ್ತಿವೆ. ಮಹಿಳೆಯರಲ್ಲಿ ಕಾಣಿಸಿಕೊಳ್ಳುತ್ತಿರುವ ಕ್ಯಾನ್ಸರ್ ಪ್ರಕಾರಗಳಲ್ಲಿ ಸ್ತನ ಕ್ಯಾನ್ಸರ್ ಪ್ರಮಾಣವೇ ಜಾಸ್ತಿ. ಈ ಹಿಂದೆ 50ರಿಂದ 70 ವರ್ಷದೊಳಗಿನ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ 20ರಿಂದ30 ವರ್ಷದೊಳಗಿನವರಲ್ಲಿಯೂ ಹೆಚ್ಚಾಗಿ ಈ ಕಾಯಿಲೆ ಪತ್ತೆಯಾಗುತ್ತಿದೆ’ ಎಂದು ಡಾ.ಸಿ. ರಾಮಚಂದ್ರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.