ಬೆಂಗಳೂರು: ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಗೆ ಭೇಟಿ ನೀಡುವ ರೋಗಿಗಳು ನೋಂದಣಿ ಮಾಡಿಸಿಕೊಂಡ ಕೂಡಲೇ ಒಳರೋಗಿಯಾಗಿ ದಾಖಲಿಸಿಕೊಳ್ಳಬೇಕು ಎಂದು ಸಂಸ್ಥೆಯ ಆಡಳಿತಾಧಿಕಾರಿ ಸುತ್ತೋಲೆ ಹೊರಡಿಸಿದ್ದಾರೆ.
ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರು ಶುಕ್ರವಾರ ಸಂಸ್ಥೆಗೆ ಭೇಟಿ ನೀಡಿ ವ್ಯವಸ್ಥೆಯನ್ನು ಪರಿಶೀಲಿಸಿದರು. ರೋಗಿಗಳ ಅಲೆದಾಟ ತಪ್ಪಿಸಲು, ನೋಂದಣಿಯಾದ ಕೂಡಲೇ ಒಳರೋಗಿಯಾಗಿ ದಾಖಲಿಸಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಪರಿಶೀಲನೆಯ ವೇಳೆ, ‘ರೋಗಿಗಳ ಸಂಖ್ಯೆ ಹೆಚ್ಚಾಗಿದ್ದರೂ ಸಂಸ್ಥೆಯಲ್ಲಿನ ಬೆಡ್‌ಗಳು ಶೇ 70ಕ್ಕಿಂತ ಕಡಿಮೆ ಭರ್ತಿಯಾಗಿರುವುದು ಏಕೆ’ ಎಂದು ಸಚಿವರು ವೈದ್ಯಾಧಿಕಾರಿಗಳನ್ನು ಪ್ರಶ್ನಿಸಿದರು.
‘ಕ್ಯಾನ್ಸರ್ ಖಚಿತತೆ ಬಗ್ಗೆ ವರದಿ ಬಂದು, ರೋಗ ದೃಢಪಟ್ಟ ಬಳಿಕವೇ ಒಳರೋಗಿಯನ್ನಾಗಿ ದಾಖಲಿಸಿಕೊಳ್ಳಲಾಗುತ್ತಿದೆ’ ಎಂದು ವೈದ್ಯಾಧಿಕಾರಿಗಳು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಸಂಸ್ಥೆಯು ತನ್ನ ನೀತಿಯನ್ನು ಬದಲಾಯಿಸಿಕೊಂಡು, ರೋಗಿಗಳು ನೋಂದಣಿಯಾದ ಕೂಡಲೇ ವಾರ್ಡ್‌ಗಳಲ್ಲಿ ಇರಿಸಿಕೊಳ್ಳಬೇಕು’ ಎಂದು ಸೂಚನೆ ನೀಡಿದರು.
‘ಅನೇಕ ರೋಗಿಗಳು ಆರ್ಥಿಕವಾಗಿ ದುರ್ಬಲರಾಗಿರುತ್ತಾರೆ. ಅಂತಿಮ ವರದಿ ಬರುವವರೆಗೂ ಬೆಂಗಳೂರಿನಲ್ಲಿ ಖಾಸಗಿ ವಸತಿ ಸೌಕರ್ಯ ಪಡೆಯಲು ಸಾಧ್ಯವಾಗುವುದಿಲ್ಲ. ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸಿಸುವವರಿಗೆ ಈ ವ್ಯವಸ್ಥೆ ಅಗತ್ಯವಿಲ್ಲದಿರಬಹುದು, ದೂರದ ಪ್ರದೇಶಗಳಿಂದ ಬರುವ ರೋಗಿಗಳಿಗೆ ಈ ಕ್ರಮ ಅತ್ಯಗತ್ಯ’ ಎಂದು ಸಚಿವರು ಹೇಳಿದರು.
‘ಅಂತಿಮ ವರದಿಗಳನ್ನು ನೀಡಲು ಒಂದೆರಡು ದಿನಗಳಾಗಬಹುದು. ಈ ಅವಧಿಯಲ್ಲಿ ಒಳರೋಗಿಗಳಾಗಿ ದಾಖಲಾಗಲು ಬಯಸುವವರಿಗೆ ಒಪ್ಪಿಗೆ ಪತ್ರವನ್ನು ಒದಗಿಸಿ’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
‘ವರದಿಗಳಿಗಾಗಿ ಕಾಯುತ್ತಿರುವ ರೋಗಿಗಳಿಗೆ ಉಚಿತ ವಸತಿಯ ಜತೆಗೆ ಊಟವನ್ನು ನೀಡಬೇಕು. ಸಂಸ್ಥೆಯಲ್ಲಿ ಹಾಸಿಗೆಗಳು ಲಭ್ಯವಿದ್ದಾಗ ರೋಗಿಗಳನ್ನು ಧರ್ಮಶಾಲೆಗೆ ಕಳುಹಿಸುವ ಬದಲು, ವಾರ್ಡ್‌ಗಳಲ್ಲಿಯೇ ದಾಖಲಿಸಿಕೊಳ್ಳಬೇಕು. ಒಂದು ವೇಳೆ ಹಾಸಿಗೆಗಳು ಭರ್ತಿಯಾಗಿದ್ದರೆ ಧರ್ಮಶಾಲೆಯಲ್ಲಿ ಸ್ಥಳಾವಕಾಶ ಕಲ್ಪಿಸಬಹುದು’ ಎಂದು ಹೇಳಿದರು.
ಕಿದ್ವಾಯಿ ಸಂಸ್ಥೆಯ ಆಡಳಿತಾಧಿಕಾರಿ ವೈ. ನವೀನ್ ಭಟ್ ಮತ್ತು ನಿರ್ದೇಶಕ ಡಾ.ನವೀನ್ ಉಪಸ್ಥಿತರಿದ್ದರು.
‘ಕಿದ್ವಾಯಿ ಸಂಸ್ಥೆಗೆ ಬರುವ ಶೇ 90ಕ್ಕಿಂತ ಹೆಚ್ಚು ರೋಗಿಗಳು ಬಿಪಿಎಲ್ ಕುಟುಂಬಕ್ಕೆ ಸೇರಿದವರಾಗಿರುವುದರಿಂದ ವಿಶೇಷ ವಾರ್ಡ್ ಶಾಂತಿಧಾಮ ಮತ್ತು ಅನಿಕೇತನ ಅರೆ ವಿಶೇಷ ವಾರ್ಡ್ ಅನ್ನು ಸಾಮಾನ್ಯ ವಾರ್ಡ್‌ಗಳಾಗಿ ಪರಿವರ್ತಿಸಬೇಕು’ ಎಂದು ಅಧಿಕಾರಿಗಳಿಗೆ ಸಚಿವ ಶರಣಪ್ರಕಾಶ ಪಾಟೀಲ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.