ADVERTISEMENT

ಕಿದ್ವಾಯಿ ಸಂಸ್ಥೆ: ಹೆಚ್ಚಿದ ಹೊರ, ಒಳ ರೋಗಿಗಳು

ತಪಾಸಣೆ, ಅರಿವಿನಿಂದ ಹೊಸ ಪ್ರಕರಣಗಳು ಅಧಿಕ ಸಂಖ್ಯೆಯಲ್ಲಿ ಪತ್ತೆ

ವರುಣ ಹೆಗಡೆ
Published 19 ಏಪ್ರಿಲ್ 2025, 19:52 IST
Last Updated 19 ಏಪ್ರಿಲ್ 2025, 19:52 IST
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ   

ಬೆಂಗಳೂರು: ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಗೆ ಭೇಟಿ ನೀಡುವ ಹೊರ ಹಾಗೂ ಒಳ ರೋಗಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡಿದೆ. ತಪಾಸಣೆ ಹಾಗೂ ರೋಗದ ಬಗ್ಗೆ ಹೆಚ್ಚಿದ ಅರಿವಿನಿಂದಾಗಿ ಕ್ಯಾನ್ಸರ್ ಹೊಸ ಪ್ರಕರಣಗಳೂ ಅಧಿಕ ಸಂಖ್ಯೆಯಲ್ಲಿ ಪತ್ತೆಯಾಗುತ್ತಿವೆ.

ರಾಜ್ಯದ ವಿವಿಧ ಭಾಗಗಳ ಜತೆಗೆ ಹೊರ ರಾಜ್ಯಗಳಿಂದಲೂ ಇಲ್ಲಿನ ಹೊಂಬೇಗೌಡ ನಗರದಲ್ಲಿರುವ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಗೆ ರೋಗಿಗಳು ಭೇಟಿ ನೀಡುತ್ತಿದ್ದಾರೆ. ಸಂಸ್ಥೆಯು ಕ್ಯಾನ್ಸರ್ ಚಿಕಿತ್ಸೆಯ ಜತೆಗೆ ಶಿಕ್ಷಣ, ಸಂಶೋಧನೆ ಹಾಗೂ ರೋಗದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿಯೂ ತೊಡಗಿಕೊಂಡಿದೆ. ಇದರಿಂದಾಗಿ ಚಿಕಿತ್ಸೆಗಾಗಿ ಸಂಸ್ಥೆಗೆ ಬರುವ ರೋಗಿಗಳ ಸಂಖ್ಯೆ ಏರುಗತಿ ಪಡೆದಿದೆ. ಪ್ರತಿ ತಿಂಗಳು ಸರಾಸರಿ 33,946 ಹೊರ ರೋಗಿಳು ಭೇಟಿ ನೀಡಿದರೆ, 1,839 ಮಂದಿ ಒಳ ರೋಗಿಗಳಾಗಿ ದಾಖಲಾಗುತ್ತಿದ್ದಾರೆ. 2020ರಲ್ಲಿ ಈ ಸಂಖ್ಯೆ ಕ್ರಮವಾಗಿ 21,483 ಹಾಗೂ 795ರಷ್ಟಿತ್ತು. 

ಬದಲಾದ ಜೀವನಶೈಲಿ, ಪಾಶ್ಚಾತ್ಯ ಆಹಾರ ಪದ್ಧತಿ ಸೇರಿ ವಿವಿಧ ಕಾರಣಗಳಿಂದ ಕ್ಯಾನ್ಸರ್‌ ಹೊಸ ಪ್ರಕರಣಗಳು ಏರಿಕೆ ಕಂಡಿವೆ. ಸಂಸ್ಥೆಯ ನೋಂದಣಿ ಪ್ರಕಾರ, 2020ರಲ್ಲಿ ಪ‍್ರತಿನಿತ್ಯ ಸರಾಸರಿ 38 ಕ್ಯಾನ್ಸರ್ ಹೊಸ ಪ್ರಕರಣಗಳು ಪತ್ತೆಯಾದರೆ, 2024ರಲ್ಲಿ ಇದು 60ಕ್ಕೆ ಏರಿಕೆಯಾಗಿದೆ. ಕಳೆದ ವರ್ಷ 21 ಸಾವಿರಕ್ಕೂ ಅಧಿಕ ಹೊಸ ಪ್ರಕರಣಗಳು ದೃಢಪಟ್ಟಿವೆ. ಸಂಸ್ಥೆಯು ಸರ್ಕಾರೇತರ ಸಂಸ್ಥೆಗಳ ನೆರವಿನಿಂದ, ಸಂಚಾರಿ ಪ್ರಯೋಗಾಲಯಗಳ ಮೂಲಕವೂ ಕ್ಯಾನ್ಸರ್ ಪತ್ತೆಗೆ ಕ್ರಮವಹಿಸಿದೆ. ಇದರಿಂದಾಗಿ ಅಧಿಕ ಸಂಖ್ಯೆಯಲ್ಲಿ ಹೊಸ ಪ್ರಕರಣಗಳು ದೃಢಪಡುತ್ತಿವೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ. 

ADVERTISEMENT

ತಡವಾಗಿ ದಾಖಲು: ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ನೋಂದಣಿ ಪ್ರಕಾರ ಶೇ 50 ರಷ್ಟು ರೋಗಿಗಳು ಕ್ಯಾನ್ಸರ್ ಚಿಕಿತ್ಸೆಗೆ ಮೂರು ಹಾಗೂ ನಾಲ್ಕನೇ ಹಂತದಲ್ಲಿ ಬರುತ್ತಿದ್ದಾರೆ. ಶೇ 14.3 ರಷ್ಟು ಮಂದಿಗೆ ಮಾತ್ರ ಮೊದಲ ಹಾಗೂ ಎರಡನೇ ಹಂತದಲ್ಲಿ ಕ್ಯಾನ್ಸರ್ ಪತ್ತೆಯಾಗುತ್ತಿದೆ. ಪುರುಷರಲ್ಲಿ ಹೆಚ್ಚಾಗಿ ಬಾಯಿ ಮತ್ತು ಶ್ವಾಸಕೋಶದ ಕ್ಯಾನ್ಸರ್ ಕಾಣಿಸಿಕೊಂಡರೆ, ಸ್ತನ ಹಾಗೂ ಗರ್ಭಕಂಠದ ಕ್ಯಾನ್ಸರ್ ಮಹಿಳೆಯರಲ್ಲಿ ಹೆಚ್ಚಾಗಿ ಪತ್ತೆಯಾಗುತ್ತಿದೆ.

‘ಬದಲಾದ ಜೀವನಶೈಲಿ ಹಾಗೂ ಪಾಶ್ಚಾತ್ಯ ಆಹಾರ ಪದ್ಧತಿ ಜತೆಗೆ ಧೂಮಪಾನದಂತಹ ವ್ಯಸನ, ತಂಬಾಕು ಉತ್ಪನ್ನ ಸೇವನೆ, ಒತ್ತಡದ ಜೀವನ, ಕಲುಷಿತ ವಾತಾವರಣ ಸೇರಿ ವಿವಿಧ ಕಾರಣಗಳಿಂದ ಕ್ಯಾನ್ಸರ್ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಕ್ಯಾನ್ಸರ್ ಕಾಯಿಲೆ ಹಾಗೂ ಚಿಕಿತ್ಸೆ ಬಗ್ಗೆ ಜನರಲ್ಲಿ ಜಾಗೃತಿ ಮೂಡುತ್ತಿದೆ. ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಬರುತ್ತಿದ್ದಾರೆ. ಬೇಗ ಆಸ್ಪತ್ರೆಗಳಿಗೆ ತೆರಳಿ, ತಪಾಸಣೆ ಮಾಡಿಸಿಕೊಂಡಲ್ಲಿ ಜೀವಕ್ಕೆ ಅಪಾಯವಾಗುವುದನ್ನು ತಪ್ಪಿಸಲು ಸಾಧ್ಯ’ ಎಂದು ಸಂಸ್ಥೆಯ ನಿರ್ದೇಶಕ ಡಾ.ಟಿ.ನವೀನ್‌ ತಿಳಿಸಿದರು.

ಡಾ.ಟಿ.ನವೀನ್
ಕ್ಯಾನ್ಸರ್‌ ರೋಗವನ್ನು ಸೂಕ್ತ ಸಮಯದಲ್ಲಿ ಪತ್ತೆ ಹಚ್ಚಿ ಸಮರ್ಪಕ ಚಿಕಿತ್ಸೆ ಒದಗಿಸಿದರೆ ಗುಣಪಡಿಸಲು ಸಾಧ್ಯ. ಆದ್ದರಿಂದ ತಪಾಸಣೆಗೆ ಆದ್ಯತೆ ನೀಡಲಾಗಿದೆ. ಜನರಲ್ಲೂ ಅರಿವು ಮೂಡುತ್ತಿದೆ
ಡಾ.ಟಿ.ನವೀನ್‌ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.