ಬೆಂಗಳೂರು: ‘ಇತ್ತೀಚಿಗೆ ಹದಿಹರೆಯದವರಲ್ಲಿ ಮಾದಕ ವ್ಯಸನ ಹೆಚ್ಚುತ್ತಿದೆ. ಸಮಾಜದ ನಿರ್ಲಕ್ಷ್ಯದಿಂದಾಗಿ ಯುವಜನರು ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ’ ಎಂದು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಿರ್ದೇಶಕ ಡಾ.ಟಿ. ನವೀನ್ ಕಳವಳ ವ್ಯಕ್ತಪಡಿಸಿದರು.
ಕೇಂದ್ರ ಅಪರಾಧ ವಿಭಾಗದ (ಬೆಂಗಳೂರು ನಗರ) ಮಾದಕ ದ್ರವ್ಯ ನಿಗ್ರಹ ದಳ ಹಾಗೂ ಅನ್ವಯ ಟ್ರಸ್ಟ್ ಜಂಟಿಯಾಗಿ ಸಂಸ್ಥೆಯ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ‘ಮಾದಕ ದ್ರವ್ಯದ ದುಷ್ಪರಿಣಾಮ’ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದರು.
‘ಮಾದಕ ವಸ್ತುಗಳ ಸೇವನೆಯಿಂದ ಅನೇಕರು ನಾನಾ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಯುವಕ–ಯುವತಿಯರು ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಮಾದಕ ವ್ಯಸನವು ಯುವಜನರ ಆರೋಗ್ಯ ಮತ್ತು ವೃತ್ತಿ ಜೀವನದ ಮೇಲೆ ಪರಿಣಾಮ ಬೀರುವ ಜತೆಗೆ ಸಮಾಜದ ಸ್ವಾಸ್ಥ್ಯವನ್ನು ಹದಗೆಡಿಸುತ್ತಿದೆ. ಆದ್ದರಿಂದ ಮಾದಕ ವ್ಯಸನಗಳ ನಿರ್ಮೂಲನೆಗೆ ಪಣತೊಟ್ಟು, ತಂಬಾಕು ಮತ್ತು ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಿಸಬೇಕು. ಈ ಸಂಬಂಧ ಯುವಜನರಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಬೇಕು’ ಎಂದು ಹೇಳಿದರು.
ಬೆಂಗಳೂರು ನಗರ ಸಿಸಿಬಿ (ಅಪರಾಧ-2) ಡಿಸಿಪಿ ಪಿ. ರಾಜ ಇಮಾಮ್ ಖಾಸೀಂ, ‘ಯುವಜನರಲ್ಲಿ ಅನೇಕರು ತಂಬಾಕು, ಗುಟ್ಕಾ, ಕೊಕೇನ್, ಗಾಂಜಾ, ಅಫೀಮ್‌ನಂತಹ ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಮಾದಕ ವಸ್ತುಗಳ ಸೇವನೆಯಿಂದ ಕ್ಯಾನ್ಸರ್ ಸೇರಿದಂತೆ ಹಲವು ಕಾಯಿಲೆಗಳು ಕಾಡುತ್ತವೆ. ಮಾದಕ ವಸ್ತುಗಳ ಕಳ್ಳ ಸಾಗಣೆ ಸಮಾಜದಲ್ಲಿ ದೊಡ್ಡ ಪಿಡುಗಾಗಿದೆ. ಇವುಗಳ ದೀರ್ಘಾವಧಿ ಬಳಕೆಯು ಆರೋಗ್ಯ ಹದಗೆಡುವಿಕೆ, ಮಾನಸಿಕ ಅಸ್ವಸ್ಥತೆ ಹಾಗೂ ಸಾವಿಗೆ ಕಾರಣವಾಗುತ್ತದೆ. ಮಾದಕ ಹಾಗೂ ಮದ್ಯ ವ್ಯಸನದಿಂದ ದೂರು ಇರುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.