ADVERTISEMENT

ಮಕ್ಕಳಲ್ಲಿ ರಕ್ತ ಕ್ಯಾನ್ಸರ್ ಹೆಚ್ಚಳ: ಕಿದ್ವಾಯಿ ಸಂಸ್ಥೆಯಿಂದ ಜಾಗೃತಿ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2024, 15:33 IST
Last Updated 14 ಫೆಬ್ರುವರಿ 2024, 15:33 IST
 ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ
 ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ   

ಬೆಂಗಳೂರು: ಮಕ್ಕಳಲ್ಲಿಯೂ ಕ್ಯಾನ್ಸರ್ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಪ್ರತಿ ವರ್ಷ ಸರಾಸರಿ 500 ಪ್ರಕರಣಗಳು ಹೊಸದಾಗಿ ನೋಂದಣಿಯಾಗುತ್ತಿವೆ ಎಂದು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ತಿಳಿಸಿದೆ.

ಫೆ.15ರಂದು ಅಂತರರಾಷ್ಟ್ರೀಯ ಮಕ್ಕಳ ಕ್ಯಾನ್ಸರ್ ದಿನದ ಪ್ರಯುಕ್ತ ಸಂಸ್ಥೆಯು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಸಂಸ್ಥೆಯ ಮಕ್ಕಳ ಗಂಥಿ ವಿಜ್ಞಾನ ವಿಭಾಗದ ದಾಖಲಾತಿ ಪ್ರಕಾರ ಕಳೆದ ವರ್ಷ 1,800 ಹೊರರೋಗಿಗಳು ಭೇಟಿ ನೀಡಿದ್ದಾರೆ. ಕ್ಯಾನ್ಸರ್ ಪೀಡಿತ ಮಕ್ಕಳಲ್ಲಿ ಹೆಚ್ಚಿನವರು ರಕ್ತದ ಕ್ಯಾನ್ಸರ್‌ (ಲ್ಯುಕೇಮಿಯಾ ಮತ್ತು ಲಿಂಪೋಮಾ), ಮಿದುಳು ಕ್ಯಾನ್ಸರ್‌ಗೆ ಒಳಗಾಗುತ್ತಿದ್ದಾರೆ. 

‘ಯಾವುದೇ ಶಂಕಿತ ಕ್ಯಾನ್ಸರ್ ಗೆಡ್ಡೆ ಇದ್ದರೆ ಮಕ್ಕಳನ್ನು ತಪಾಸಣೆಗೆ ಒಳಪಡಿಸಬೇಕು. ತಡವಾಗಿ ತಪಾಸಣೆಗೆ ಒಳಪಡಿಸಿ, ಚಿಕಿತ್ಸೆ ನೀಡಿದಲ್ಲಿ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಳ್ಳಲಿದೆ. ಸಾರ್ವಜನಿಕರು ಮತ್ತು ವೈದ್ಯಕೀಯ ವೃತ್ತಿಪರರಲ್ಲಿ ಮಕ್ಕಳ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವುದು ಅಗತ್ಯ’ ಎಂದು ಸಂಸ್ಥೆ ನಿರ್ದೇಶಕ ಸೈಯದ್ ಅಲ್ತಾಫ್ ತಿಳಿಸಿದ್ದಾರೆ. 

ADVERTISEMENT

‘ಸಂಸ್ಥೆಗೆ ಚಿಕಿತ್ಸೆಗಾಗಿ ಕರ್ನಾಟಕ ಮಾತ್ರವಲ್ಲದೆ, ತಮಿಳುನಾಡು, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ ಹಾಗೂ ಈಶಾನ್ಯ ರಾಜ್ಯಗಳ ಜನರು ಬರುತ್ತಿದ್ದಾರೆ. ಸಂಸ್ಥೆಯಲ್ಲಿ 16 ಬೆಡ್‌ಗಳ ಮಕ್ಕಳ ತೀವ್ರ ನಿಗಾ ಘಟಕ (ಪಿಐಸಿಯು) ಇದೆ. 75 ಬೆಡ್‌ಗಳ ಕಪೂರ್ ವಾರ್ಡ್‌ ಮಕ್ಕಳ ಚಿಕಿತ್ಸೆಗೆ ಸಹಕಾರಿಯಾಗಿದೆ. ಸದ್ಯ ಸಂಸ್ಥೆಯಲ್ಲಿ ‘ಆಟೋಲೋಗಸ್’ ಕಸಿ ಮಾಡಲಾಗುತ್ತಿದ್ದು, ಶೀಘ್ರದಲ್ಲಿಯೇ ‘ಅಲೋಜೆನಿಕ್’ ಕಸಿ ಪ್ರಾರಂಭಿಸಲಾಗುವುದು’ ಎಂದು ಹೇಳಿದ್ದಾರೆ. 

‘ಅಸಹಜ ಗೆಡ್ಡೆ, ತೀವ್ರ ಜ್ವರ, ರಕ್ತಸ್ರಾವ, ವಾಂತಿಯೊಂದಿಗೆ ಆಗಾಗ ತಲೆನೋವು, ತೂಕ ನಷ್ಟ ಸೇರಿ ವಿವಿಧ ಕ್ಯಾನ್ಸರ್ ಲಕ್ಷಣಗಳು ಮಕ್ಕಳಲ್ಲಿ ಕಾಣಿಸಿಕೊಂಡರೆ ತಪಾಸಣೆಗೆ ಒಳಪಡಿಸಬೇಕು. ಚಿಕಿತ್ಸೆಗೆ ಸಂಬಂಧಿಸಿದಂತೆ ಸಂಸ್ಥೆಯು ವೈದ್ಯಕೀಯ ಅಧಿಕಾರಿಗಳಿಗೆ ತರಬೇತಿಯನ್ನೂ ನೀಡಲಾಗುತ್ತಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.