ಬೆಂಗಳೂರು: ‘ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಒಂದು ಸಾವಿರಕ್ಕೂ ಅಧಿಕ ರೋಬೊಟಿಕ್ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗಿದೆ. ಬಿಪಿಎಲ್ ಕುಟುಂಬದ ಸದಸ್ಯರಿಗೆ ಉಚಿತವಾಗಿ ಈ ಶಸ್ತ್ರಚಿಕಿತ್ಸೆಯನ್ನು ಮಾಡಲಾಗುತ್ತಿದೆ’ ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹಸಿನ್ ಹೇಳಿದರು.
ಸಂಸ್ಥೆಯ ಸ್ತ್ರೀರೋಗ ಗಂಥಿ ವಿಜ್ಞಾನ ವಿಭಾಗ ಮತ್ತು ಕರ್ನಾಟಕ ಸ್ಟೇಟ್ ಚಾಪ್ಟರ್ ಅಸೋಸಿಯೇಷನ್ ಆಫ್ ಗೈನಕಾಲಾಜಿಕ್ ಆಂಕಾಲಜಿಸ್ಟ್ ಆಫ್ ಇಂಡಿಯಾ ಜಂಟಿಯಾಗಿ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರೋಬೊಟಿಕ್ ಶಸ್ತ್ರಚಿಕಿತ್ಸೆ ಕಾರ್ಯಾಗಾರಕ್ಕೆ ಚಾಲನೆ ನೀಡಿ, ಮಾತನಾಡಿದರು.
‘ಬೆಳಗಾವಿ, ತುಮಕೂರು, ರಾಯಚೂರು ಸೇರಿದಂತೆ ರಾಜ್ಯದ ಹಲವೆಡೆ ಪೆರಿಫೆರೆಲ್ ಕ್ಯಾನ್ಸರ್ ಘಟಕಗಳನ್ನು ತೆರೆಯಲಾಗುತ್ತಿದೆ. ರಾಜ್ಯದಲ್ಲಿ ಕ್ಯಾನ್ಸರ್ ನಿಯಂತ್ರಣಕ್ಕೆ ಅಗತ್ಯವಿರುವ ವೈದ್ಯಕೀಯ ಸೌಲಭ್ಯಗಳನ್ನು ರಾಜ್ಯ ಸರ್ಕಾರ ಒದಗಿಸುತ್ತಿದೆ. ಸಂಸ್ಥೆಯ ಪ್ರಾಧ್ಯಾಪಕರು ವೈದ್ಯಕೀಯ ಸಂಶೋಧನೆಗಳಿಗೆ ಹೆಚ್ಚು ಒತ್ತು ನೀಡುವ ಮೂಲಕ, ಕ್ಯಾನ್ಸರ್ ನಿಯಂತ್ರಣಕ್ಕೆ ಆದ್ಯತೆ ನೀಡಬೇಕು. ವೈದ್ಯಕೀಯ ವಿದ್ಯಾರ್ಥಿಗಳ ಜತೆಗೆ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳೂ ಸಂಶೋಧನೆಯಲ್ಲಿ ತೊಡಗಬೇಕು. ವೈದ್ಯಕೀಯ ಅಭ್ಯಾಸ ಮಾಡುತ್ತಿರುವವರಿಗೆ ರೋಬೊಟಿಕ್ ಶಸ್ತ್ರಚಿಕಿತ್ಸೆ ಕಾರ್ಯಾಗಾರಗಳು ಕಲಿಕೆಗೆ ಆಧಾರವಾಗಲಿದೆ’ ಎಂದು ಅಭಿಪ್ರಾಯಪಟ್ಟರು.
ಸಂಸ್ಥೆಯ ನಿರ್ದೇಶಕ ಡಾ.ಟಿ. ನವೀನ್, ‘ಸಂಸ್ಥೆಯು ಅತ್ಯಾಧುನಿಕ ಸೌಲಭ್ಯಗಳನ್ನು ಅಳವಡಿಸಿಕೊಳ್ಳುತ್ತಿದ್ದು, ವಿಶ್ವಮಟ್ಟಕ್ಕೆ ಬೆಳೆಯುತ್ತಿದೆ. ಕ್ಯಾನ್ಸರ್ ರೋಗಿಗಳಿಗೆ ಬೇಕಾದ ಎಲ್ಲ ಮೂಲಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ರಾಜ್ಯದಲ್ಲಿ ಕ್ಯಾನ್ಸರ್ ನಿಯಂತ್ರಣ ಹಾಗೂ ತ್ವರಿತ ಚಿಕಿತ್ಸೆಗೆ ಫೆರಿಫೆರೆಲ್ ಕ್ಯಾನ್ಸರ್ ಘಟಕಗಳನ್ನು ತೆರೆಯಲಾಗುತ್ತಿದೆ’ ಎಂದು ಹೇಳಿದರು.
ಸ್ತ್ರೀರೋಗ ಗಂಥಿ ವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ.ಕೆ.ಶೋಭಾ, ‘ಈ ಕಾರ್ಯಾಗಾರದಿಂದ ವೈದ್ಯಕೀಯ ವಿದ್ಯಾರ್ಥಿಗಳ ಜ್ಞಾನ ವೃದ್ಧಿಯಾಗಲಿದೆ’ ಎಂದು ಅಭಿಪ್ರಾಯಪಟ್ಟರು.
ವಿಶ್ವ ಹಾಸ್ಪೈಸ್ ಮತ್ತು ಉಪಶಾಮಕ ಆರೈಕೆ ದಿನದ ಪ್ರಯುಕ್ತ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಹಮ್ಮಿಕೊಂಡಿದ್ದ ಜಾಗೃತಿ ಜಾಥಾದಲ್ಲಿ ವೈದ್ಯಕೀಯ ಸಿಬ್ಬಂದಿ ವಿದ್ಯಾರ್ಥಿಗಳು ಸೇರಿ ಎರಡು ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಸಂಸ್ಥೆಯ ಆವರಣದಲ್ಲಿ ಪ್ರಾರಂಭವಾದ ಈ ಜಾಥಾಕ್ಕೆ ಸಂಸ್ಥೆಯ ನಿರ್ದೇಶಕ ಡಾ.ಟಿ.ನವೀನ್ ಚಾಲನೆ ನೀಡಿದರು. ಲಾಲ್‌ಬಾಗ್‌ವರೆಗೆ ನಡೆದ ಈ ಜಾಥಾದಲ್ಲಿ ಕ್ಯಾನ್ಸರ್ ಸೇರಿ ವಿವಿಧ ಗಂಭೀರ ರೋಗಗಳಿಂದ ಬಳಲುತ್ತಿರುವ ರೋಗಿಗಳಿಗೆ ಸಾಂತ್ವಾನ ಮತ್ತು ಆರೈಕೆಯ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.