ADVERTISEMENT

20 ಸಾಧಕಿಯರಿಗೆ ‘ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ’ ಪ್ರದಾನ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಂತರರಾಷ್ಟ್ರೀಯ ಮಹಿಳಾ ದಿನ ಆಚರಣೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2025, 14:54 IST
Last Updated 8 ಮಾರ್ಚ್ 2025, 14:54 IST
ಕಾರ್ಯಕ್ರಮದಲ್ಲಿ ಸಾಧಕಿಯರಿಗೆ ‘ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಲಕ್ಷ್ಮೀ ಹೆಬ್ಬಾಳಕರ, ಪದ್ಮಾವತಿ, ನಾಗಲಕ್ಷ್ಮೀ ಚೌಧರಿ, ಸೌಮ್ಯ ರೆಡ್ಡಿ, ರಾಘವೇಂದ್ರ ಟಿ. ಉಪಸ್ಥಿತರಿದ್ದರು
ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ಸಾಧಕಿಯರಿಗೆ ‘ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಲಕ್ಷ್ಮೀ ಹೆಬ್ಬಾಳಕರ, ಪದ್ಮಾವತಿ, ನಾಗಲಕ್ಷ್ಮೀ ಚೌಧರಿ, ಸೌಮ್ಯ ರೆಡ್ಡಿ, ರಾಘವೇಂದ್ರ ಟಿ. ಉಪಸ್ಥಿತರಿದ್ದರು ಪ್ರಜಾವಾಣಿ ಚಿತ್ರ   

ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಶನಿವಾರ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ 20 ಮಹಿಳೆಯರು ಹಾಗೂ ಆರು ಸಂಸ್ಥೆಗಳಿಗೆ 2024–25ನೇ ಸಾಲಿನ ‘ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ’ ಪ್ರದಾನ ಮಾಡಲಾಯಿತು. 

ಕಾರ್ಯಕ್ರಮ ಉದ್ಘಾಟಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು, ಸಾಧಕಿಯರು ಹಾಗೂ ಮಹಿಳೆಯರ ಅಭಿವೃದ್ಧಿಗಾಗಿ ಶ್ರಮಿಸಿದ ಸಂಸ್ಥೆಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು. 

ಮಹಿಳೆಯರ ಅಭಿವೃದ್ಧಿ ವಿಭಾಗದಲ್ಲಿ ಡಾ. ವೀಣಾ ಎಸ್. ಭಟ್ (ಭದ್ರಾವತಿ), ಪೂಜಾ ಮಲ್ಲಪ್ಪ ಬೇವೂರ (ಗದಗ), ಪ್ರೇಮಾ ಎಚ್. (ಉಡುಪಿ), ರಶ್ಮಿ ಎಸ್.ಆರ್. (ಹಾಸನ), ನಾಜೀಮಾ ಎಸ್. (ಶಿವಮೊಗ್ಗ), ಸುವರ್ಣ (ಬೆಂಗಳೂರು), ಮಂಜುಳಾ (ಮಂಡ್ಯ), ಅದಿತಿ ಪರಪ್ಪ ಕ್ಷಾತ್ರತೇಜ (ಧಾರವಾಡ), ಕಲಾ ಕ್ಷೇತ್ರದಲ್ಲಿ ವೇದಾರಾಣಿ ದಾಸನೂರ (ಧಾರವಾಡ), ಉಷಾ ಬಸಪ್ಪ (ಬೆಂಗಳೂರು), ರಜನಿ ಎಲ್. ಕರಿಗಾರ (ರಾಣೆಬೆನ್ನೂರು), ಎ.ಎಸ್. ಪದ್ಮಾವತಿ (ಭದ್ರಾವತಿ) ಹಾಗೂ ಪೂಜಾ ರಘುನಂದನ್ (ಹಾಸನ) ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ‌

ADVERTISEMENT

ಸಾಹಿತ್ಯ ಕ್ಷೇತ್ರದಲ್ಲಿ ರಿಶಲ್ ಬ್ರಿಟ್ಟಿ ಫರ್ನಾಂಡಿಸ್ (ಮಂಗಳೂರು), ಸಂಗೀತಾ ಎಂ. ಹೀರೇಮಠ (ಕಲಬುರಗಿ), ಕಸ್ತೂರಿ ಡಿ. ಪತ್ತಾರ್ (ಕೊಪ್ಪಳ), ಕ್ರೀಡಾ ಕ್ಷೇತ್ರದಲ್ಲಿ ಗಾಯತ್ರಿ (ಉತ್ತರ ಕನ್ನಡ), ಅಮೂಲ್ಯಾ (ಹಾವೇರಿ), ಶಿಕ್ಷಣ ಕ್ಷೇತ್ರದಲ್ಲಿ ಲಲಿತಾ ಸಿ. ಕರಿಮನಿ (ಗದಗ) ಹಾಗೂ ವೀರ ಮಹಿಳೆ ಕ್ಷೇತ್ರದಲ್ಲಿ ವಿಶಾಲಾಕ್ಷಿ ಕರಡ್ಡಿ (ಕಲಬುರಗಿ) ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮಹಿಳೆಯರ ಅಭಿವೃದ್ಧಿಗಾಗಿ ಸೇವೆ ಸಲ್ಲಿಸುತ್ತಿರುವ ಜನಚಿಂತನ ಪಟ್ಟಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ (ಚಿಕ್ಕಮಗಳೂರು), ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ (ಬೆಂಗಳೂರು), ಶ್ರೀದಾನೇಶ್ವರಿ ಮಹಿಳಾ ವಿದ್ಯುತ್ ಮಗ್ಗಗಳ ಸಹಕಾರಿ ಸಂಘ (ಬಾಗಲಕೋಟೆ), ಚೇತನಾ ಸೇವಾ ಸಂಸ್ಥೆ (ಉತ್ತರ ಕನ್ನಡ), ರುಚಿ ಟ್ರಸ್ಟ್ (ಯಾದಗಿರಿ) ಹಾಗೂ ನವಶ್ರೀ ಕಲಾಚೇತನ ಸಂಸ್ಥೆ (ಹುಬ್ಬಳ್ಳಿ-ಧಾರವಾಡ) ಪ್ರತಿನಿಧಿಗಳು ‘ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ’ ಸ್ವೀಕರಿಸಿದರು.

ಪ್ರಶಸ್ತಿಯು ಸಂಸ್ಥೆಗಳಿಗೆ ತಲಾ ₹ 50 ಸಾವಿರ ಹಾಗೂ ವ್ಯಕ್ತಿಗಳಿಗೆ ತಲಾ ₹ 25 ಸಾವಿರ ನಗದು ಒಳಗೊಂಡಿದೆ. 

ಶಾಸಕ ಉದಯ್ ಗರುಡಾಚಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪದ್ಮಾವತಿ, ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ, ಮಾಜಿ‌ ಶಾಸಕಿ ಸೌಮ್ಯಾ ರೆಡ್ಡಿ, ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷ ನಾಗಣ್ಣ ಗೌಡ, ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಮ್ಲಾ ಇಕ್ಬಾಲ್, ನಿರ್ದೇಶಕ ರಾಘವೇಂದ್ರ ಟಿ., ಮಹಿಳಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಪುಷ್ಪಲತಾ ಉಪಸ್ಥಿತರಿದ್ದರು.

ಮಹಿಳೆ ಸ್ವಾಭಿಮಾನದ ಪ್ರತೀಕ. ಆಕೆ ಎಲ್ಲ ಕ್ಷೇತ್ರಗಳಲ್ಲೂ ದಾಪುಗಾಲಿಡುತ್ತಿದ್ದು ತನ್ನ‌ ಸ್ವಾಭಿಮಾನಕ್ಕೆ ಧಕ್ಕೆಯಾದರೆ ಹೋರಾಟ ನಡೆಸಬೇಕಾಗುವುದು ಅನಿವಾರ್ಯ.
– ಲಕ್ಷ್ಮೀ ಹೆಬ್ಬಾಳಕರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ 

ಸ್ತ್ರೀಶಕ್ತಿ ಗುಂಪು ಒಕ್ಕೂಟಗಳಿಗೆ ಪ್ರಶಸ್ತಿ

ಮಹಿಳೆಯರ ಅಭಿವೃದ್ಧಿಗಾಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ 3 ಸ್ತ್ರೀಶಕ್ತಿ ಗುಂಪುಗಳು ಹಾಗೂ 3 ಸ್ತ್ರಿ ಶಕ್ತಿ ಒಕ್ಕೂಟಗಳಿಗೂ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಆದಿಶಕ್ತಿ ಮಹಿಳಾ ಸ್ತ್ರೀಶಕ್ತಿ ಸ್ವಸಹಾಯ ಸಂಘ (ಗದಗ) ಐಶ್ವರ್ಯ ಸ್ತ್ರೀಶಕ್ತಿ ಸ್ವಸಹಾಯ ಸಂಘ (ಬೆಳಗಾವಿ) ಹಾಗೂ ಶ್ರೀ ಶಾರದಾ ಸ್ತ್ರೀಶಕ್ತಿ ಸ್ವಸಹಾಯ ಸಂಘವು (ಬೆಂಗಳೂರು ಗ್ರಾಮಾಂತರ) ಅತ್ಯುತ್ತಮ ಸ್ತ್ರೀಶಕ್ತಿ ಗುಂಪುಗಳಲ್ಲಿ ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದಿದ್ದು ಸಂಘದ ಪ್ರತಿನಿಧಿಗಳು ಪ್ರಶಸ್ತಿ ಸ್ವೀಕರಿದರು.

ಅತ್ಯುತ್ತಮ ತಾಲ್ಲೂಕು ಒಕ್ಕೂಟ ಪ್ರಶಸ್ತಿಯನ್ನು ಸ್ತ್ರೀಶಕ್ತಿ ಮಹಿಳಾ ಬ್ಲಾಕ್ ಸೊಸೈಟಿ (ಬೆಂಗಳೂರು) ಸಹನ ಸ್ತ್ರೀಶಕ್ತಿ ಬ್ಲಾಕ್ ಸೊಸೈಟಿ (ಚಿಕ್ಕಬಳ್ಳಾಪುರ) ಹಾಗೂ ಶ್ರೀ ಬನಶಂಕರಿ ಸ್ತ್ರೀಶಕ್ತಿ ಬ್ಲಾಕ್ ಸೊಸೈಟಿ (ಬಾಗಲಕೋಟೆ) ಪಡೆದಿವೆ.

ಅತ್ಯುತ್ತಮ ಸ್ತ್ರೀಶಕ್ತಿ ಗುಂಪಿಗೆ ನೀಡುವ ‘ಯಶೋಧರಮ್ಮ ದಾಸಪ್ಪ ವಿಭಾಗೀಯ ಮಟ್ಟದ ಪ್ರಶಸ್ತಿ’ಯನ್ನು ಪಾರ್ವತಿ ಸ್ತ್ರೀಶಕ್ತಿ ಸ್ವಸಹಾಯ ಸಂಘ (ಚಿತ್ರದುರ್ಗ) ಶ್ರೀ ಗೌತಮ ಬುದ್ಧ ಮಹಿಳಾ ಸ್ತ್ರೀಶಕ್ತಿ ಸ್ವಸಹಾಯ ಸಂಘ (ಮೈಸೂರು) ನೀಲಾಂಬಿಕೆ ಸ್ತ್ರೀಶಕ್ತಿ ಸ್ವಸಹಾಯ ಸಂಘ (ಬಾಗಲಕೋಟೆ) ಹಾಗೂ ಶ್ರೀ ಶಕ್ತಿ ಮಲ್ಲಿಕಾರ್ಜುನ ಮಹಿಳಾ ಸ್ವಸಹಾಯ ಸಂಘಕ್ಕೆ (ಕಲಬುರಗಿ) ಪ್ರದಾನ ಮಾಡಲಾಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.