
ಕೋಗಿಲು ಲೇಔಟ್ ಪ್ರದೇಶದಲ್ಲಿ ಶೆಡ್‌ಗಳನ್ನು ತೆರವುಗೊಳಿಸಿರುವುದು.
ಬೆಂಗಳೂರು: ಕೋಗಿಲು ಬಂಡೆ ಕ್ವಾರಿ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ 167 ಮನೆ ಮತ್ತು ಶೆಡ್‌ಗಳನ್ನು ನೆಲಸಮಗೊಳಿಸಲಾಗಿದೆ. ಆದರೆ, ಮನೆ ನೀಡುವಂತೆ ಕೋರಿ 250ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾಗಿವೆ.
ಬೆಂಗಳೂರು ಉತ್ತರ ನಗರ ಪಾಲಿಕೆಯ ಯಲಹಂಕ ಹೋಬಳಿಯ ಕೋಗಿಲು ಬಂಡೆ ಕ್ವಾರಿ ಪ್ರದೇಶದಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಮನೆಗಳನ್ನು ಈಚೆಗೆ ನೆಲಸಮಗೊಳಿಸಲಾಗಿತ್ತು. ಮನೆ ಕಳೆದುಕೊಂಡವರ ದಾಖಲೆಗಳ ಪರಿಶೀಲನೆ ಬಳಿಕ ಅವರಲ್ಲಿ ಅರ್ಹರಿದ್ದರೆ ಬೈಯಪ್ಪನಹಳ್ಳಿಯಲ್ಲಿ ನಿರ್ಮಿಸಿರುವ ವಸತಿ ಸಮುಚ್ಚಯದಲ್ಲಿ ಮನೆ ನೀಡಲು ಸರ್ಕಾರ ತೀರ್ಮಾನಿಸಿತ್ತು. ದಾಖಲೆ ಪರಿಶೀಲನೆ ನಡೆದಿದೆ.
ನೆಲಸಮಗೊಂಡ ಒಂದೇ ಮನೆಯ ಇಬ್ಬರು ಮತ್ತು ಮೂವರಿಂದ ಅರ್ಜಿ ಸಲ್ಲಿಕೆಯಾಗಿದೆ. ಅಲ್ಲದೇ ಹೊರಗಿನವರು ಸಹ ಅರ್ಜಿ ಸಲ್ಲಿಸಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಈಗಾಗಲೇ ಪ್ರತಿ ಮನೆಯಿಂದ ಐದು ದಾಖಲೆಗಳನ್ನು ಅಧಿಕಾರಿಗಳು ಸಂಗ್ರಹಿಸಿದ್ದಾರೆ. ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ವಿದ್ಯುತ್ ಬಿಲ್, ತಾತ್ಕಾಲಿಕ ಆದೇಶ ಪ್ರತಿ, ಪಡಿತರ ಚೀಟಿಯನ್ನು ಸಂಗ್ರಹಿಸಿದ್ದು, ಅವುಗಳ ನೈಜತೆಯನ್ನು ಜಿಬಿಎ, ಕಂದಾಯ, ರಾಜೀವ್ ಗಾಂಧಿ ವಸತಿ ನಿಗಮದ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಶುಕ್ರವಾರದ ವೇಳೆಗೆ ಪರಿಶೀಲನಾ ಕಾರ್ಯ ಅಂತಿಮಗೊಳ್ಳುವ ಸಾಧ್ಯತೆ ಇದೆ. ಕನ್ನಡಿಗರು ಮತ್ತು ಪರಭಾಷಿಕರು ಎಂಬ ಎರಡು ಪಟ್ಟಿಯನ್ನು ಅಧಿಕಾರಿಗಳು ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಸಲಿದ್ದಾರೆ.
‘ಕೋಗಿಲು ಕ್ವಾರಿ ಪ್ರದೇಶದಲ್ಲಿ ಸರ್ವೆ ಕಾರ್ಯ ಪೂರ್ಣಗೊಂಡಿದ್ದು, ಮನೆ ನೀಡುವಂತೆ 250ಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದಾರೆ. ದಾಖಲೆಗಳ ಪರಿಶೀಲನೆ ನಡೆದಿದೆ. ಶೇಕಡ 95ರಷ್ಟು ದಾಖಲೆಗಳು ಕ್ರಮಬದ್ಧವಾಗಿವೆ’ ಎಂದು ಯಲಹಂಕ ತಹಶೀಲ್ದಾರ್ ಶ್ರೇಯಸ್ ತಿಳಿಸಿದರು.
ಕೋಗಿಲು ಬಡಾವಣೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕಾನೂನು ಅಡೆತಡೆ ಎದುರಾಗಿದ್ದು, ಫ್ಲ್ಯಾಟ್‌ನ ಪರಿಷ್ಕೃತ ವೆಚ್ಚ, ಯೋಜನೆಯ ನಿಯಮಗಳು ಹಾಗೂ ಅರ್ಹ ಫಲಾನುಭವಿಗಳ ಪಟ್ಟಿ ಸಿದ್ದಪಡಿಸುವಲ್ಲಿ ಸಮಸ್ಯೆ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜನವರಿ 2ರೊಳಗೆ ಮನೆಗಳನ್ನು ಸಂತ್ರಸ್ತರಿಗೆ ಹಸ್ತಾಂತರ ಮಾಡಲಾಗುವುದು ಎಂದು ಸರ್ಕಾರ ಹೇಳಿದೆ. ಆದರೆ, ಅರ್ಹ ಫಲಾನುಭವಿಗಳ ಪಟ್ಟಿ ಅಂತಿಮಗೊಳ್ಳವುದು ವಿಳಂಬವಾಗುತ್ತಿರುವ ಕಾರಣ ಗಡುವಿನ ಒಳಗೆ ಮನೆಗಳನ್ನು ಹಸ್ತಾಂತರ ಮಾಡುವ ಸಾಧ್ಯತೆ ಇಲ್ಲ ಎನ್ನಲಾಗಿದೆ.
ಬೈಯಪ್ಪನಹಳ್ಳಿಯ ವಸತಿ ಸಮುಚ್ಚಯದಲ್ಲಿ ತಲಾ ₹11.20 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಮನೆಗಳನ್ನು ಹಂಚಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಆದರೆ , 2023–24ರಲ್ಲಿ ಹೊರಡಿಸಲಾದ ಸರ್ಕಾರಿ ಆದೇಶದ ಪ್ರಕಾರ, ಈ ಫ್ಲ್ಯಾಟ್‌ನ ವೆಚ್ಚವನ್ನು ₹13.20 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಈ ಪರಿಷ್ಕೃತ ದರವನ್ನು ಪುನರ್ವಸತಿ ಪ್ಯಾಕೇಜ್‌ನಲ್ಲಿ ಸೇರಿಸಿಲ್ಲ. ಹಾಗಾಗಿ ಹಿಂದಿನ ಆದೇಶವನ್ನು ತಿದ್ದುಪಡಿ ಮಾಡದೆ ಹಂಚಿಕೆ ಪ್ರಕ್ರಿಯೆ ಮುಂದುವರಿಸಲು ಸಾಧ್ಯವೇ ಎಂಬ ಆತಂಕವೂ ವ್ಯಕ್ತವಾಗಿದೆ.
‘ಸಾಮಾನ್ಯ ವರ್ಗ, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಾಯಧನ ಲಭ್ಯವಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವತಿಯಿಂದ ಪ್ರತಿ ಮನೆಗೆ ₹5 ಲಕ್ಷ ನೀಡಲಾಗುತ್ತದೆ. ಸಾಮಾನ್ಯ ವರ್ಗದವರಿಗೆ ಸಹಾಯಧನ ಸೇರಿ ₹8.70 ಲಕ್ಷ ಸಿಗುತ್ತದೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ₹9.50 ಲಕ್ಷ ಸಿಗುತ್ತದೆ. ಸಾಮಾನ್ಯ ವರ್ಗದವರಿಗೆ ₹2.50 ಲಕ್ಷ ಸಾಲದ ರೂಪದಲ್ಲಿ ನೀಡಲಾಗುತ್ತದೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ₹1.70 ಲಕ್ಷ ಸಾಲ ನೀಡಲಾಗುತ್ತದೆ’ ಎಂದು ಮುಖ್ಯಮಂತ್ರಿ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.