ADVERTISEMENT

ದಟ್ಟಣೆಯಲ್ಲಿ ಕಾರಿನಲ್ಲಿದ್ದ ₹ 3 ಲಕ್ಷ ಕದ್ದರು

ಫೋರಂ ಮಾಲ್ ಎದುರಿನ ಸಿಗ್ನಲ್‌ನಲ್ಲಿ ಘಟನೆ: ದೂರು ದಾಖಲಾದರೂ ಕ್ರಮವಿಲ್ಲ

​ಪ್ರಜಾವಾಣಿ ವಾರ್ತೆ
Published 20 ಜೂನ್ 2019, 20:00 IST
Last Updated 20 ಜೂನ್ 2019, 20:00 IST

ಬೆಂಗಳೂರು: ಹೊಸೂರು ರಸ್ತೆಯ ಕೋರಮಂಗಲ ಫೋರಂ ಸಿಗ್ನಲ್‌ ಬಳಿ ಸಂಚಾರ ದಟ್ಟಣೆಯಲ್ಲೇ ಕಾರಿನ ಚಾಲಕರ ಗಮನ ಬೇರೆಡೆ ಸೆಳೆದು ಕಳ್ಳತನ ಎಸಗುತ್ತಿರುವ ಗ್ಯಾಂಗ್ ಬಗ್ಗೆ ಮಹಿಳೆಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ ಬೆನ್ನಲ್ಲೇ, ಅದೇ ಸಿಗ್ನಲ್‌ನಲ್ಲಿ ಮತ್ತೊಂದು ಕಳ್ಳತನ ಪ್ರಕರಣ ವರದಿಯಾಗಿದೆ.

ದಟ್ಟಣೆಯಲ್ಲಿ ಸಿಲುಕಿದ್ದ ಕಾರಿನಲ್ಲಿದ್ದ ಅನಿಲಮಲಿಕ್ ಎಂಬುವರ ಗಮನ ಬೇರೆಡೆ ಸೆಳೆದಿದ್ದ ದುಷ್ಕರ್ಮಿಗಳಿಬ್ಬರು, ಕಾರಿನಲ್ಲಿದ್ದ ₹ 3 ಲಕ್ಷ ನಗದು ಹಾಗೂ ಮೊಬೈಲ್ ಕದ್ದೊಯ್ದಿದ್ದಾರೆ. ಆ ಸಂಬಂಧ ಅನಿಲಮಲಿಕ್ ಮಡಿವಾಳ ಠಾಣೆಗೆ ದೂರು ನೀಡಿದ್ದು, ಎಫ್‌ಐಆರ್ ಸಹ ದಾಖಲಾಗಿದೆ.

‘ಜೂನ್ 17ರಂದು ರಾತ್ರಿ 8.30ರ ಸುಮಾರಿಗೆ ಕೋರಮಂಗಲದ ಫೋರಂ ಮಾಲ್‌ ಮುಂಭಾಗದಲ್ಲಿ ಕಾರಿನಲ್ಲಿ ಹೊರಟಿದ್ದಾಗ ಕೆಂಪು ಸಿಗ್ನಲ್ ಬಿದ್ದು ದಟ್ಟಣೆ ಉಂಟಾಗಿತ್ತು. ಹಸಿರು ಸಿಗ್ನಲ್‌ಗಾಗಿ ಕಾಯುತ್ತ ಕಾರಿನಲ್ಲೇ ಕುಳಿತುಕೊಂಡಿದ್ದೆ’ ಎಂದು ದೂರಿನಲ್ಲಿ ಅನಿಲ್‌ಮಲಿಕ್ ತಿಳಿಸಿದ್ದಾರೆ.

ADVERTISEMENT

‘ಕಾರಿನ ಎಡಭಾಗದ ಬಾಗಿಲು ಬಳಿ ಬಂದಿದ್ದ ದುಷ್ಕರ್ಮಿ, ಗಾಜು ಬಡಿದಿದ್ದ. ಗಾಜು ತೆರೆಯುತ್ತಿದ್ದಂತೆ, ‘ನಿನ್ನ ಕಾರನ್ನು ನನಗೆ ಗುದ್ದಿಸಿ ಗಾಯವನ್ನುಂಟು ಮಾಡಿದ್ದಿಯಾ’ ಎಂದು ಜಗಳ ತೆಗೆದಿದ್ದ. ಅದೇ ಸಮಯಕ್ಕೆ ಬಲಭಾಗದ ಬಾಗಿಲು ಬಳಿ ಬಂದಿದ್ದ ಮತ್ತೊಬ್ಬ ದುಷ್ಕರ್ಮಿ, ಕಿಟಕಿ ತಟ್ಟಿ ಗಮನ ಸೆಳೆದಿದ್ದ. ಆತನ ಜೊತೆ ಮಾತನಾಡುತ್ತಿದ್ದಾಗಲೇ ಎಡಭಾಗದ ಕಿಟಕಿಯಿಂದ ಕಾರಿನೊಳಗೆ ಕೈ ಹಾಕಿದ್ದ ದುಷ್ಕರ್ಮಿ, ₹ 3 ಲಕ್ಷ ನಗದು ಹಾಗೂ ಮೊಬೈಲ್ ಕದ್ದುಕೊಂಡು ಓಡಿಹೋದ. ಮತ್ತೊಬ್ಬ ದುಷ್ಕರ್ಮಿ ಆತನನ್ನು ಹಿಂಬಾಲಿಸಿದ’ ಎಂದರು.

ಎಚ್ಚೆತ್ತುಕೊಳ್ಳದ ಪೊಲೀಸರು: ‘ಕೋರಮಂಗಲ ಫೋರಂ ಮಾಲ್ ಸಿಗ್ನಲ್‌ನಲ್ಲಿ ಮೇಲಿಂದ ಮೇಲೆ ಕಾರಿನ ಬಾಗಿಲು ತೆಗೆಸಿ ಕಳ್ಳತನ ಎಸಗುತ್ತಿರುವ ಪ್ರಕರಣಗಳು ವರದಿಯಾಗುತ್ತಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

‘ಇತ್ತೀಚೆಗಷ್ಟೇ ಖಾಸಗಿ ಕಂಪನಿ ಉದ್ಯೋಗಿಯಾಗಿದ್ದ ಮಹಿಳೆಯ ಕಾರನ್ನೂ ಇದೇ ಸಿಗ್ನಲ್‌ನಲ್ಲಿ ದುಷ್ಕರ್ಮಿಗಳು ಸುತ್ತುವರಿದಿದ್ದರು. ಅವರು ಬಾಗಿಲು ತೆರೆಯದಿದ್ದರಿಂದ ಅದೃಷ್ಟವಶಾತ್ ಯಾವುದೇ ಕಳ್ಳತನ ನಡೆದಿರಲಿಲ್ಲ. ಆ ಘಟನೆಯಿಂದ ಆತಂಕಗೊಂಡಿದ್ದ ಮಹಿಳೆ, ಫೇಸ್‌ಬುಕ್‌ನಲ್ಲಿ ನಗರ ಪೊಲೀಸ್‌ ಕಮಿಷನರ್ ಅವರಿಗೂ ದೂರು ನೀಡಿದ್ದರು’ ಎಂದರು.

‘ಮಹಿಳೆಯಷ್ಟೇ ಅಲ್ಲದೇ ಸಿಗ್ನಲ್‌ನಲ್ಲಿ ಹಲವರ ಕಾರುಗಳ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ. ಆ ಬಗ್ಗೆ ಠಾಣೆಯಲ್ಲೂ ಪ್ರಕರಣಗಳು ದಾಖಲಾಗುತ್ತಿವೆ. ಅಷ್ಟಾದರೂ ಪೊಲೀಸರು, ಸಿಗ್ನಲ್‌ ಬಳಿ ಸಿಬ್ಬಂದಿಯನ್ನು ನಿಯೋಜಿಸಿ ಕಳ್ಳರನ್ನು ಹಿಡಿಯುವ ಪ್ರಯತ್ನ ಮಾಡುತ್ತಿಲ್ಲ’ ಎಂದು ದೂರಿದರು.

ನೋಟಿನ ಆಸೆ ತೋರಿಸಿ ₹ 1.47 ಲಕ್ಷ ಕದ್ದರು
ಮಹದೇವಪುರ ಠಾಣೆ ವ್ಯಾಪ್ತಿಯಲ್ಲಿಬಿ.ನಾರಾಯಣ ಎಂಬುವರ ಗಮನ ಬೇರೆಡೆ ಸೆಳೆದಿದ್ದ ಮೂವರು ದುಷ್ಕರ್ಮಿಗಳು, ಅದರ ₹ 1.47 ಲಕ್ಷ ಕದ್ದೊಯ್ದಿದ್ದಾರೆ.

‘ಗರುಡಾಚಾರಪಾಳ್ಯ ದೇವಸಂದ್ರ ಕೈಗಾರಿಕಾ ಪ್ರದೇಶದ ಕೆನರಾ ಬ್ಯಾಂಕ್ ಶಾಖೆಯಿಂದಜೂನ್ 19ರಂದು ಮಧ್ಯಾಹ್ನ 1.47 ಲಕ್ಷ ಡ್ರಾ ಮಾಡಿಕೊಂಡಿದ್ದ ನಾರಾಯಣ, ದ್ವಿಚಕ್ರ ವಾಹನದಲ್ಲಿ ಹೊರಟಿದ್ದಾಗಲೇ ಈ ಘಟನೆ ನಡೆದಿದೆ’ ಎಂದು ಪೊಲೀಸರು ಹೇಳಿದರು.

‘ಲಕ್ಷ್ಮಿಸಾಗರ ಬಡಾವಣೆಯ ಗಣೇಶ್ ದೇವಸ್ಥಾನದ ಹತ್ತಿರ ಬೈಕ್‌ನಲ್ಲಿ ಬಂದಿದ್ದ ದುಷ್ಕರ್ಮಿಗಳು, ‘ನಿಮ್ಮ ಕಿಸೆಯಿಂದ ನೋಟು ಬಿದ್ದಿದೆ’ ಎಂದು ನಾರಾಯಣ ಅವರಿಗೆ ಹೇಳಿದ್ದರು. ಅದು ನಿಜವೆಂದು ತಿಳಿದಿದ್ದ ದೂರುದಾರರು, ದ್ವಿಚಕ್ರ ವಾಹನವನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸಿ ನೋಟಿಗಾಗಿ ಹುಡುಕಾಡಲಾರಂಭಿಸಿದ್ದರು. ವಾಹನದ ಹ್ಯಾಂಡಲ್‌ಗೆ ಹಣವಿದ್ದ ಬ್ಯಾಗ್ ಇತ್ತು. ಅದನ್ನೇ ಆರೋಪಿ ಕದ್ದುಕೊಂಡು ಪರಾರಿಯಾಗಿದ್ದಾರೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.