
ಬೆಂಗಳೂರು: ಕೋರಮಂಗಲದಿಂದ ಸರ್ಜಾಪುರವರೆಗಿನ 5.50 ಕಿ.ಮೀ ಉದ್ದದ ರಾಜಕಾಲುವೆ ಪಕ್ಕದ ಬಫರ್ ರಸ್ತೆ ಕಾಮಗಾರಿ ಮುಂದಿನ ವರ್ಷದ ಮಾರ್ಚ್ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ರಾಜಕಾಲುವೆ ಪಕ್ಕದಲ್ಲಿ ‘ಸಂಚಾರಯುಕ್ತ’ ಯೋಜನೆಯಡಿ ಬಫರ್ ರಸ್ತೆ ನಿರ್ಮಾಣ ಕಾಮಗಾರಿಗಳನ್ನು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಶಿವಕುಮಾರ್ ಅವರು ಸೋಮವಾರ ಪರಿಶೀಲನೆ ನಡೆಸಿ, ಮಾತನಾಡಿದರು.
‘ಬಫರ್ ರಸ್ತೆಗಳು ಬೆಂಗಳೂರಿನ ಪಾಲಿಗೆ ಇತಿಹಾಸ ಸೃಷ್ಟಿ ಮಾಡಲಿವೆ. ಕೆರೆಗಳು ಹಾಗೂ ರಾಜಕಾಲುವೆ ಪಕ್ಕದಲ್ಲಿರುವ ಬಫರ್ ವಲಯದಲ್ಲಿ ರಸ್ತೆ ನಿರ್ಮಾಣ ಮಾಡಿ ಸಂಚಾರ ದಟ್ಟಣೆ ನಿಯಂತ್ರಣ ಮಾಡಲು ಮುಂದಾಗಿದ್ದೇವೆ. ಮೊದಲ ಹಂತದಲ್ಲಿ 300 ಕಿ.ಮೀ ಉದ್ದದ ರಸ್ತೆ ನಿರ್ಮಿಸಲು ಮಾರ್ಗ ಗುರುತಿಸಲಾಗಿದೆ’ ಎಂದು ಮಾಹಿತಿ ನೀಡಿದರು.
‘ಕೋರಮಂಗಲದಿಂದ ಬೆಳ್ಳಂದೂರಿನವರೆಗೆ ಬಫರ್ ರಸ್ತೆ ಸಾಗಲಿದೆ. ಮಿಲಿಟರಿಯವರು ಈ ಭಾಗದಲ್ಲಿ ರಸ್ತೆ ನಿರ್ಮಾಣಕ್ಕೆ ಜಾಗ ನೀಡಿದ್ದಾರೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಮನವಿ ಮಾಡಿದ್ದೆವು. ಅವರು ಸದ್ಯಕ್ಕೆ ಕೆಲಸ ಮಾಡಿಕೊಳ್ಳಿ ಎಂದು ಅನುಮತಿ ನೀಡಿದ್ದಾರೆ. ಈ ಹೊಸ ರಸ್ತೆ ನಿರ್ಮಾಣದಿಂದ ಸುಮಾರು 10 ಕಿ.ಮೀ.ನಷ್ಟು ಪ್ರಯಾಣ ಕಡಿಮೆವಾಗಲಿದೆ’ ಎಂದು ತಿಳಿಸಿದರು.
‘ಈ ಬಫರ್ ರಸ್ತೆಗಳಲ್ಲಿ ಬಸ್, ಲಾರಿಯಂತಹ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ಅವಕಾಶವಿರುವುದಿಲ್ಲ. ಬೈಕ್, ಕಾರುಗಳ ಓಡಾಟಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗುವುದು. ಭಾರಿ ವಾಹನಗಳಿಂದ ರಸ್ತೆ ಕುಸಿಯುವ ಸಮಸ್ಯೆಯಾಗಬಾರದು ಎಂದು ಈ ತೀರ್ಮಾನ ಮಾಡಿದ್ದೇವೆ’ ಎಂದರು.
ಮೊದಲ ಹಂತದಲ್ಲಿ, ರಾಜರಾಜೇಶ್ವರಿ ನಗರ, ಐಟಿಪಿಎಲ್ ಭಾಗದಲ್ಲಿ ಕಾಮಗಾರಿ ಮಾಡುತ್ತಿದ್ದೇವೆ. ಬಫರ್ ವಲಯದಲ್ಲಿ ಯಾರಿಗೂ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ. ಹೀಗಾಗಿ ಜಾಗ ಕಳೆದುಕೊಳ್ಳುವವರಿಗೆ ಟಿಡಿಆರ್ ನೀಡುತ್ತಿದ್ದೇವೆ. ಇದರಿಂದ ಅವರಿಗೆ ರಕ್ಷಣೆ ಸಿಗಲಿದೆ. ಕೆಐಎಡಿಬಿ ಸೇರಿದಂತೆ ಇತರೆ ಆಸ್ತಿಗಳಿದ್ದರೆ, ಬಫರ್ ವಲಯ ರಸ್ತೆಗೆ ಜಾಗ ಬಿಟ್ಟು ಕಟ್ಟಡ ನಿರ್ಮಾಣ ಮಾಡುವಂತೆ ಸೂಚಿಸಿದ್ದೇವೆ’ ಎಂದು ತಿಳಿಸಿದರು.
‘ಸುರಂಗ ರಸ್ತೆ ಟೆಂಡರ್: ಮಾಹಿತಿ ಇಲ್ಲ’
‘ಸುರಂಗ ರಸ್ತೆ ನಿರ್ಮಾಣದಲ್ಲಿ ನಾವು ಯಾರಿಗೂ ಹಣ ನೀಡುವುದಿಲ್ಲ. ಗುತ್ತಿಗೆ ಪಡೆದವರೇ ಬಂಡವಾಳ ಹಾಕಿ ನಿರ್ಮಾಣ ಮಾಡಬೇಕು’ ಎಂದು ಡಿ.ಕೆ. ಶಿವಕುಮಾರ್ ಹೇಳಿದರು. ‘ಸುರಂಗ ರಸ್ತೆ ಟೆಂಡರ್ ಅಂತಿಮಗೊಂಡಿದ್ದು ಅದಾನಿ ಕಂಪನಿ ಕಡಿಮೆ ಬಿಡ್ ಮಾಡಿದೆಯೆ’ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ‘ನನಗೆ ಇನ್ನೂ ಸಂಪೂರ್ಣ ಮಾಹಿತಿ ಬಂದಿಲ್ಲ. ನನಗೆ ಅಧಿಕೃತವಾಗಿ ಪತ್ರ ಬರುವವರೆಗೂ ನಾನು ಪ್ರತಿಕ್ರಿಯೆ ನೀಡುವುದಿಲ್ಲ’ ಎಂದರು.
‘ನಾವು ಯಾರಿಗೂ ಹಣ ನೀಡುವುದಿಲ್ಲ. ಅವರೇ ಬಂಡವಾಳ ಹಾಕಿ ಮಾಡಬೇಕು. ವಿಜೆಎಫ್ ಎಷ್ಟು ಪ್ರಮಾಣದಲ್ಲಿ ನೀಡುತ್ತೇವೆ ಎಂದು ಹೇಳಿದ್ದೇವೋ ಅಷ್ಟನ್ನೇ ನೀಡುತ್ತೇವೆ. ನಾವು ಅಂದಾಜು ಮಾಡಿರುವುದರಲ್ಲಿ ಶೇ 40ರಷ್ಟನ್ನು ಮಾತ್ರ ನೀಡುತ್ತೇವೆ. ಅದರ ಮೇಲೆ ನಾವು ನೀಡುವುದಿಲ್ಲ. ಮುಂಬೈನಲ್ಲಿ ಪ್ರತಿ ಕಿ.ಮೀ ಸುರಂಗ ರಸ್ತೆಗೆ ₹1200 ಕೋಟಿ ವೆಚ್ಚವಾಗುತ್ತಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.