ಬೆಂಗಳೂರು: ಕೆ.ಆರ್. ಮಾರುಕಟ್ಟೆಯಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಬೇಕು ಎಂದು ಪಶ್ಚಿಮ ವಲಯ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಕೆ.ಆರ್ ಮಾರುಕಟ್ಟೆಯಲ್ಲಿ ಶನಿವಾರ ಪರಿಶೀಲನೆ ನಡೆಸಿದ ಅವರು, ಮಾರುಕಟ್ಟೆಯಲ್ಲಿ ಸದಾ ಸ್ವಚ್ಛತೆ ಕಾಪಾಡಬೇಕಿದೆ. ಆದರೆ, ವ್ಯಾಪಾರಸ್ಥರು ಎಲ್ಲೆಂದರಲ್ಲಿ ತ್ಯಾಜ್ಯ ಬಿಸಾಡುವುದರಿಂದ ಸ್ವಚ್ಛತೆ ಕಾಪಾಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ತ್ಯಾಜ್ಯ ಬಿಸಾಡುವಂತಹ ಸ್ಥಳಗಳನ್ನು ಗುರುತಿಸಿ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ತ್ಯಾಜ್ಯ ಬಿಸಾಡುವವರಿಗೆ ದಂಡ ವಿಧಿಸಬೇಕು ಎಂದರು.
ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರಿಗೆ ಮಾರ್ಕಿಂಗ್ ಮಾಡಿ ಅದೇ ಸ್ಥಳದಲ್ಲಿ ವ್ಯಾಪಾರ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಬೇರೆಡೆ ವ್ಯಾಪಾರ ಮಾಡಲು ಅವಕಾಶ ನೀಡಬಾರದು. ಮಾರುಕಟ್ಟೆ ಹೊರಭಾಗದಲ್ಲಿ ಅನಧಿಕೃತವಾಗಿ ವ್ಯಾಪಾರ ಮಾಡುವುದನ್ನು ನಿಯಂತ್ರಿಸಲು ಸೂಚಿಸಿದರು.
ಕೆ.ಆರ್. ಮಾರುಕಟ್ಟೆಯಲ್ಲಿ ಸ್ವಚ್ಛತೆ ಕಾಪಾಡಲು ಒಬ್ಬ ಮಾರ್ಷಲ್ ಮೇಲ್ವಿಚಾರಕರನ್ನು ನಿಯೋಜಿಸಿದ್ದು, ಏಳು ಮಾರ್ಷಲ್‌ಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನೂ ಹೆಚ್ಚಿನ ಮಾರ್ಷಲ್‌ಗಳ ಅವಶ್ಯಕತೆಯಿದ್ದಲ್ಲಿ ನಿಯೋಜಿಸಬೇಕು ಎಂದರು.
ವ್ಯಾಪಾರಿಗಳು ಎಲ್ಲೆಂದರಲ್ಲಿ ತ್ಯಾಜ್ಯ ಬಿಸಾಡುವುದನ್ನು ತಪ್ಪಿಸಲು ಪ್ರಮುಖ ನಾಲ್ಕು ಸ್ಥಳಗಳಲ್ಲಿ ತ್ಯಾಜ್ಯ ಸಂಗ್ರಹ ಬುಟ್ಟಿಗಳನ್ನು ಅಳವಡಿಸಬೇಕು. ಎಲ್ಲ ವ್ಯಾಪಾರಿಗಳಿಗೆ ಪ್ರತ್ಯೇಕವಾಗಿ ಬುಟ್ಟಿಗಳನ್ನು ಇಟ್ಟುಕೊಂಡು ಅದರಲ್ಲಿಯೇ ತ್ಯಾಜ್ಯ ಹಾಕಿ, ಪಾಲಿಕೆ ನಿಗದಿಪಡಿಸಿರುವ ಸ್ಥಳದಲ್ಲಿ ತಂದು ಸುರಿಯಲು ಸೂಚನೆ ನೀಡಲು ತಿಳಿಸಿದರು.
ಕೆ.ಆರ್. ಮಾರುಕಟ್ಟೆಯಲ್ಲಿ ಹೆಚ್ಚು ಗಲೀಜಿದ್ದ ಸ್ಥಳಗಳಲ್ಲಿ ಪ್ರೆಷರ್ ವಾಷರ್ ಬಳಸಿ ಸ್ವಚ್ಛಗೊಳಿಸಬೇಕು. ಐದು ಎಚ್‌ಪಿ ಪ್ರೆಷರ್ ವಾಷರ್ ಖರೀದಿಸಿದ್ದು, ಅದರ ಮೂಲಕ ಪ್ರತಿನಿತ್ಯ ಸ್ವಚ್ಛಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಕೆ.ಆರ್. ಮಾರುಕಟ್ಟೆಯ ನೆಲ ಮಹಡಿ ಹಾಗೂ ಇತರೆ ಜಾಗಗಳಲ್ಲಿ ಹೊಸದಾಗಿ ಪಾರ್ಕಿಂಗ್ ಟೆಂಡರ್ ಕರೆದು, ಒಳಗೆ ಹಾಗೂ ಹೊರಗೆ ಹೋಗುವ ಮಾರ್ಗಗಳನ್ನು ಸರಿಯಾಗಿ ನಿಗದಿಪಡಿಸಿಕೊಳ್ಳಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.