ADVERTISEMENT

ಕೆ.ಆರ್‌. ಮಾರುಕಟ್ಟೆಯಲ್ಲಿ ‘ಸ್ಮಾರ್ಟ್‌ ಪಾರ್ಕಿಂಗ್’: ತಿಂಗಳ ಪಾಸ್‌ಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2025, 23:23 IST
Last Updated 12 ಆಗಸ್ಟ್ 2025, 23:23 IST
   

ಬೆಂಗಳೂರು: ‘ಅಭಿವೃದ್ಧಿ, ಕಾರ್ಯಾಚರಣೆ ಮತ್ತು ನಿರ್ವಹಣೆ’ ಯೋಜನೆಯಡಿ ಕೆ.ಆರ್‌. ಮಾರುಕಟ್ಟೆಯಲ್ಲಿ ‘ಸ್ಮಾರ್ಟ್‌ ಪಾರ್ಕಿಂಗ್‌’ ವ್ಯವಸ್ಥೆಯನ್ನು ಒದಗಿಸಲು ಬಿಬಿಎಂಪಿ ಮುಂದಾಗಿದೆ.

ಕೆ.ಆರ್‌. ಮಾರುಕಟ್ಟೆಯ ಕಟ್ಟಡದ ಬೇಸ್‌ಮೆಂಟ್‌ನಲ್ಲಿ ಒಂದು ಲಕ್ಷ ಚದರ ಅಡಿಯಷ್ಟು ಪ್ರದೇಶದಲ್ಲಿ ‘ಸ್ಮಾರ್ಟ್‌ ಪಾರ್ಕಿಂಗ್‌’ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಆ್ಯಪ್‌ ಅಥವಾ ಪೋರ್ಟಲ್‌ ಮೂಲಕ ವಾಹನ ಸವಾರರು ಸ್ಥಳವನ್ನು ಕಾಯ್ದಿರಿಸಬಹುದು.

ಚಾಮರಾಜಪೇಟೆ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿರುವ ಕೆ.ಆರ್‌. ಮಾರುಕಟ್ಟೆಯಲ್ಲಿರುವ ಕಟ್ಟಡದ ನೆಲಮಹಡಿಯಲ್ಲಿ ‘ಸ್ಮಾರ್ಟ್‌ ಪಾರ್ಕಿಂಗ್‌’ಗಾಗಿ 10 ವರ್ಷಗಳಿಗೆ ₹4.32 ಕೋಟಿ ಮೊತ್ತಕ್ಕೆ ಟೆಂಡರ್‌ ಆಹ್ವಾನಿಸಲಾಗಿದೆ. ಆಗಸ್ಟ್‌ 28ರಂದು ಟೆಂಡರ್ ತೆರೆಯಲಾಗುತ್ತಿದೆ.

ADVERTISEMENT

ವಾಹನಗಳು ನಿಲುಗಡೆಗೆ ಬಂದಾಗ ಕ್ಯೂಆರ್‌ ಕೋಡ್‌ ಟಿಕೆಟ್‌ ಅಥವಾ ಅದಕ್ಕೂ ಅತ್ಯುನ್ನತ ವ್ಯವಸ್ಥೆ ಅಳವಡಿಸಿಕೊಳ್ಳಬೇಕು. ಮೊಬೈಲ್‌ ಆ್ಯಪ್‌ ಅಥವಾ ಸ್ಮಾರ್ಟ್‌ ವೆಬ್‌ ಪೋರ್ಟಲ್‌ ಮೂಲಕ ‘ಪ್ರೀ–ಬುಕಿಂಗ್‌‘ಗೆ ಅವಕಾಶ ನೀಡಬೇಕು. ತಿಂಗಳ ಪಾಸ್‌ಗಳನ್ನು ನೀಡಬೇಕು.  ರಾತ್ರಿ ವೇಳೆ ಪಾರ್ಕಿಂಗ್‌ಗೆ ಪಾಸ್‌ ನೀಡಬೇಕು. 12 ಗಂಟೆಯಿಂದ 24 ಗಂಟೆಯವರೆಗಿನ ನಿಲುಗಡೆಗೆ ದ್ವಿಚಕ್ರ ವಾಹನಕ್ಕೆ ₹175 ಹಾಗೂ ಕಾರಿಗೆ ₹275 ಶುಲ್ಕ ನಿಗದಿಪಡಿಸಲಾಗಿದೆ. 24 ಗಂಟೆಯೂ ಭದ್ರತಾ ಸಿಬ್ಬಂದಿ ಇರಬೇಕು, ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು ಎಂಬ ಷರತ್ತು ವಿಧಿಸಲಾಗಿದೆ.

‘ಸ್ವಾತಂತ್ರ್ಯ ಉದ್ಯಾನದಲ್ಲಿ ನಿರ್ಮಿಸಲಾಗಿರುವ ಬಹುಮಹಡಿ ಪಾರ್ಕಿಂಗ್‌ನಲ್ಲಿರುವ ಸ್ಮಾರ್ಟ್‌ ವ್ಯವಸ್ಥೆಗಳನ್ನು ಇಲ್ಲಿ ಅಳವಡಿಸಲಾಗುತ್ತದೆ’ ಎಂದು ಬಿಬಿಎಂಪಿ ಯೋಜನೆ ವಿಭಾಗದ ಕಾರ್ಯಕಾರಿ ಎಂಜಿನಿಯರ್‌ ಮುನಿಯಪ್ಪ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.